ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ

| Updated By: ಆಯೇಷಾ ಬಾನು

Updated on: Oct 02, 2023 | 10:43 PM

ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ವೀಡಿಯೋ ಹೇಳಿಕೆ ನೀಡಿರುವ ಪ್ರಲ್ಹಾದ ಜೋಶಿಯವರು, ಶಿವಮೊಗ್ಗದಲ್ಲಿ ಗಲಭೆ ನಡೆಯಲು ನೇರವಾಗಿ ರಾಜ್ಯ ಕಾಂಗ್ರೆಸ್ ಸರಕಾರವೇ ಬೆಂಬಲವಾಗಿ ನಿಂತಿದೆ. ಇದರೊಂದಿಗೆ ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಈ ಸರಕಾರ ಪಣತೊಟ್ಟಂತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಹುಬ್ಬಳ್ಳಿ, ಅ.02: ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಯಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಹಾಗೂ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ಸಹ “ಕರ್ನಾಟಕದಲ್ಲಿ ಇಂತಹ ಘಟನೆಗಳು ಹೊಸತೇನಲ್ಲ” ಎಂದಿರುವ ಗೃಹ ಸಚಿವ ಪರಮೇಶ್ವರ (G Parameshwara) ಅವರು ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಗುತ್ತಿಗೆ ಪಡೆದಿದ್ದೀರಾ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ವೀಡಿಯೋ ಹೇಳಿಕೆ ನೀಡಿರುವ ಪ್ರಲ್ಹಾದ ಜೋಶಿಯವರು, ಶಿವಮೊಗ್ಗದಲ್ಲಿ ಗಲಭೆ ನಡೆಯಲು ನೇರವಾಗಿ ರಾಜ್ಯ ಕಾಂಗ್ರೆಸ್ ಸರಕಾರವೇ ಬೆಂಬಲವಾಗಿ ನಿಂತಿದೆ. ಇದರೊಂದಿಗೆ ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಈ ಸರಕಾರ ಪಣತೊಟ್ಟಂತಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸರಕಾರ ಬಂದಾಗಿನಿಂದ ಒಂದೆಡೆ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಮತ್ತೊಂದೆಡೆ ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ ಬೆಂಬಲ ನೀಡುತ್ತಿದೆ. ಮತಾಂಧ ಶಕ್ತಿಗಳನ್ನು ಪೋಷಿಸಿ ಬೆಳೆಸಲೆಂದೇ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಮ್ಮ ಧರ್ಮ, ಸಂಸ್ಕೃತಿ ಉಳಿಸುವ ಸತ್ಕಾರ್ಯ ಮಾಡುತ್ತಿರುವ ಗಜಾನನ ಸೇವಾ ಸಮಿತಿಗಳನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಇನ್ನು ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು ಮಾತೆತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ, ಅವರು ನುಡಿದಂತೆ ನಡೆದದ್ದು ಇದೇನಾ ಎಂದು ಪ್ರಶ್ನಿಸಿದ್ದಾರೆ.

ಅಂದು ನಾಡ ವಿರೋಧಿ ಟಿಪ್ಪುವಿನ ವಿಜೃಂಭಣೆ ಮಾಡಿದಿರಿ, ಇಂದು ರಾಷ್ಟ್ರ ವಿರೋಧಿ ಔರಂಗಜೇಬನ ವಿಜೃಂಭಣೆಯಾಗುತ್ತಿದೆ. ನಮ್ಮ ಕರ್ನಾಟಕ ಎತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ