ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ರೂ.17,632 ದಂಡ ಮತ್ತು ಪರಿಹಾರ ವಿಧಿಸಿದ ಗ್ರಾಹಕರ ಆಯೋಗ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 7:53 PM

ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿ ವಿರುದ್ದ ಸೇವಾ ನ್ಯೂನ್ಯತೆ ಎಸಗಿದ್ದಾರೆ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಅಂತಾ ಈರಣ್ಣ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು. ಹಾಗಾಗಿ ರೂ.17,632 ದಂಡ ಮತ್ತು ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶಿಸಿದೆ.

ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ರೂ.17,632 ದಂಡ ಮತ್ತು ಪರಿಹಾರ ವಿಧಿಸಿದ ಗ್ರಾಹಕರ ಆಯೋಗ
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ, ಸೆಪ್ಟೆಂಬರ್​ 25: ಧಾರವಾಡ ತಾಲೂಕಿನ ಖಾನಾಪೂರ ಮ. ತಡಕೋಡ ಗ್ರಾಮದ ನಿವಾಸಿ ಈರಣ್ಣ ಗುಂಡಗೋವಿ ಎಂಬುವವರು ಫ್ಲಿಪ್‍ಕಾರ್ಟ್ (Flipkart) ಕಂಪನಿಯಿಂದ ಆನ್‍ಲೈನ್ ಮೂಲಕ ಜನವರಿ 14, 2023 ರಂದು ರೂ. 2,632 ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಂಎಲ್‌ನ ಥರ್ಮಸ್ ಆರ್ಡರ್ ಮಾಡಿದ್ದರು. ಥರ್ಮಸ್‍ನ್ನು ಕಂಪನಿಯ ಕೋರಿಯರ್ ಸರ್ವಿಸ್‍ನವರು ತಲುಪಿಸಿದ್ದರು. ಈರಣ್ಣ ಆ ಬಾಕ್ಸ್‌ನ್ನು ತೆರೆದು, ಥರ್ಮಸ್ ಬಳಸಲು ನೋಡಿದಾಗ ಅದು ದೋಷದಿಂದ ಕೂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಅದನ್ನು ಮರಳಿ ಕಳುಹಿಸಲು ಕೋರಿಯರ್‌ನವರಿಗೆ ವಿನಂತಿಸಿಕೊಳ್ಳುತ್ತಾರೆ.‌

ಹೀಗಾಗಿ ಕಂಪನಿಯ ಕೋರಿಯರ್ ಸರ್ವಿಸ್‍ನವರು ಆ ಥರ್ಮಸ್‌ನ್ನು ಈರಣ್ಣ ಅವರಿಂದ ಜನವರಿ, 2023 ರಂದು ಹಿಂಪಡೆದುಕೊಂಡು ಹೋಗಿರುತ್ತಾರೆ. ಆದರೆ ಆ ದೋಷಯುಕ್ತ ಥರ್ಮಸ್ ಬದಲು ಬೇರೆ ಹೊಸ ಥರ್ಮಸ್ ಕೊಡದೇ ಮತ್ತು ಅದರ ಬೆಲೆಯನ್ನು ಹಿಂದಿರುಗಿಸದೇ ವಸ್ತುವನ್ನು ಮರಳಿ ಪಡೆಯುವಿಕೆ ರದ್ದುಗೊಳಿಸಲಾಗಿರುತ್ತದೆ. ಈ ಬಗ್ಗೆ ಈರಣ್ಣ ಅವರ ಮೂಬೈಲ್‍ಗೆ ಸಂದೇಶ ಕಳುಹಿಸಲಾಗುತ್ತೆ. ಇದರಿಂದಾಗಿ ಕಂಪನಿಯವರಿಂದ ಇದರಲ್ಲಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಅಂತಾ ಈರಣ್ಣ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: Siddaramaiah: ನವ ಸರ್ಕಾರದ ನಿರಾಸಕ್ತಿ, ನಾಡಿನ ಶ್ರೀಮಂತ ರಂಗ ಸಂಸ್ಕೃತಿ ಅವನತಿ? ರಂಗ ಚಟುವಟಿಕೆ ಇಲ್ಲದೇ ಭಣಗುಡುತ್ತಿದೆ ಧಾರವಾಡ ರಂಗಾಯಣ

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಕಂಪನಿಯವರು ವಿಫಲರಾಗಿದ್ದಾರೆ. ಆ ಮೂಲಕ ಅವರು ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ಕಾಲುವೆ ಅವ್ಯವಹಾರ: ಪೋಲಾದ ಸರ್ಕಾರದ ಕೋಟಿ ಕೋಟಿ ಹಣ, ಲೋಕಾಯುಕ್ತಕ್ಕೆ ಮೊರೆ ಹೋದ ರೈತ ಸೇನಾ ಅಧ್ಯಕ್ಷ

ಕಂಪನಿಯವರು ಈರಣ್ಣ ಅವರಿಗೆ ಥರ್ಮಸ್‍ನ ಮೌಲ್ಯ ರೂ. 2,632 ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದ್ದಾರೆ. ಅಲ್ಲದೇ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ. 5,000 ನೀಡುವಂತೆ ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.