ಕೌನ್ಸೆಲಿಂಗ್ ವಿವಾದ: ವಿದ್ಯಾರ್ಥಿಗಳ ಮನವಿಗೆ ಕಿವಿಗೊಡದ ಧಾರವಾಡ ಕೃಷಿ ವಿವಿ ಆಡಳಿತ, ರೊಚ್ಚಿಗೆದ್ದು ವಿದ್ಯಾರ್ಥಿಗಳು, ಪೋಷಕರಿಂದ ಧರಣಿ

| Updated By: ಸಾಧು ಶ್ರೀನಾಥ್​

Updated on: Jan 12, 2024 | 11:49 AM

ಧಾರವಾಡ ಕೃಷಿ ವಿವಿ ಸ್ನಾತಕ ಕೋರ್ಸ್​ಗಳ ಸೀಟುಗಳ ಪ್ರವೇಶಕ್ಕೆ ಹಲವು ಕಡೆಗಳಿಂದ ವಿದ್ಯಾರ್ಥಿಗಳು ಕೌನ್ಸ್‌ಲಿಂಗ್‌ಗೆ ಬಂದಿದ್ದರು. ಒಂದು ದಿನ ಅವಕಾಶ ಕೊಟ್ಟರೆ ಮೂಲ ಅಂಕಪಟ್ಟಿ ತಂದು ಕೊಡುತ್ತೇವೆ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಆಡಳಿತ ಮಂಡಳಿ ಮಾತ್ರ ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಇದರಿಂದ ವಿದ್ಯಾರ್ಥಿಗಳು, ಪೋಷಕರು ಧರಣಿ ಕೂಡಬೇಕಾಯಿತು

ಕೌನ್ಸೆಲಿಂಗ್ ವಿವಾದ: ವಿದ್ಯಾರ್ಥಿಗಳ ಮನವಿಗೆ ಕಿವಿಗೊಡದ ಧಾರವಾಡ ಕೃಷಿ ವಿವಿ ಆಡಳಿತ, ರೊಚ್ಚಿಗೆದ್ದು ವಿದ್ಯಾರ್ಥಿಗಳು, ಪೋಷಕರಿಂದ ಧರಣಿ
ಕೌನ್ಸೆಲಿಂಗ್ ವಿವಾದ: ವಿದ್ಯಾರ್ಥಿಗಳ ಮನವಿಗೆ ಕಿವಿಗೊಡದ ಧಾರವಾಡ ಕೃಷಿ ವಿವಿ
Follow us on

ಧಾರವಾಡ ಕೃಷಿ ವಿಶ್ವವಿದ್ಯಾಲಯ ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆ. ಆದರೆ ಕೆಲವೊಮ್ಮೆ ಅಧಿಕಾರಿಗಳ ತಪ್ಪಿನಿಂದಾಗಿ, ಎಡವಟ್ಟಿನಿಂದಾಗಿ ಏನೆಲ್ಲಾ ರಗಳೆಗಳಾಗಿಬಿಡುತ್ತವೆ. ಇದೀಗ ಇಂಥದ್ದೇ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಈ ಕಾರಣಕ್ಕೆ ನಾಡಿನ ವಿವಿಧ ಕಡೆಗಳಿಂದ ಬಂದಿರೋ ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದಿದ್ದಾರೆ. ಸ್ನಾತಕ ಕೋರ್ಸ್‌ಗಳ ಪ್ರವೇಶ ಕೋರಿ ಕೌನ್ಸ್‌ಲಿಂಗ್‌ನಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಡಳಿತ ಕಚೇರಿ ಮುಂದೆ ಧರಣಿಗೆ ಕುಳಿತಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಿನ್ನೆ ಗುರುವಾರ ಸ್ನಾತಕ ಕೋರ್ಸ್​ಗಳ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಿಗದಿಯಾಗಿತ್ತು. ಇದಕ್ಕಿಂತ ಮುಂಚೆಯೇ ನಾಡಿನ ವಿವಿಧ ವಿಶ್ವವಿದ್ಯಾಲಯದಲ್ಲಿ ಇದೇ ಕೋರ್ಸ್​​ಗಳಿಗೆ ಸಂಬಂಧಿಸಿದ ಕೌನ್ಸೆಲಿಂಗ್ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಇದೇ ವಿಶ್ವವಿದ್ಯಾಲಯದಲ್ಲಿಯೇ ಸೀಟು ಪಡೆಯಬೇಕು ಅನ್ನೋ ಹಂಬಲ ಇರೋ ಅನೇಕ ವಿದ್ಯಾರ್ಥಿಗಳು ನಾಡಿನ ವಿವಿಧ ಕಡಗಳಿಂದ ಬಂದಿದ್ದು, ಈ ಕೌನ್ಸೆಲಿಂಗ್​ನಲ್ಲಿ ಭಾಗಿಯಾಗಿದ್ದರು.

ಕೆಲ ದಿನಗಳ ಹಿಂದೆ ನಡೆದಿದ್ದ ಕೌನ್ಸೆಲಿಂಗ್​ನಲ್ಲಿ 10 ಸೀಟುಗಳು ಉಳಿದಿದ್ದವು. ಈ ಸೀಟುಗಳಿಗೆ ಬೇಗನೇ ಕೌನ್ಸೆಲಿಂಗ್ ಮಾಡಿದ್ದರೆ ಈ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತಿತ್ತು. ಆದರೆ ತೀರಾನೇ ತಡವಾಗಿದ್ದರಿಂದ ಬೇರೆ ಕಡೆಗಳಲ್ಲಿ ಪ್ರವೇಶ ಪಡೆದ ಬಂದಿರೋ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿ ಹಾಗೂ ದಾಖಲಾತಿಗಳನ್ನು ಆಯಾ ಕಾಲೇಜುಗಳಲ್ಲಿ ನೀಡಿದ್ದಾರೆ. ಆದರೆ ಇಂದು ನಡೆದ ಕೌನ್ಸೆಲಿಂಗ್​ಗೆ ಮೂಲ ಅಂಕಪಟ್ಟಿ ಬೇಕೇಬೇಕು ಅಂತಾ ಇಲ್ಲಿನ ಅಧಿಕಾರಿಗಳು ಹೇಳಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ದಿಢೀರ್ ಪ್ರತಿಭಟನೆ ನಡೆಸಿದರು.

ಈಗಾಗಲೇ ತಾವು ಪ್ರವೇಶ ಪಡೆದಿರೋ ಕಾಲೇಜಿನಲ್ಲಿ ಮೂಲ ದಾಖಲಾತಿಗಳನ್ನು ನೀಡಲಾಗಿದೆ. ಅಂಥ ವಿದ್ಯಾರ್ಥಿಗಳು ಪ್ರವೇಶ ಪಡೆದಿರೋ ಕಾಲೇಜಿನಿಂದ ದೃಢೀಕೃತ ಅಂಕಪಟ್ಟಿಯೊಂದಿಗೆ ಬಂದಿದ್ದಾರೆ. ಅಲ್ಲದೇ ಸಂಬಂಧಿಸಿದ ಕಾಲೇಜಿನಿಂದ ಪ್ರಮಾಣ ಪತ್ರವನ್ನೂ ತಂದಿದ್ದಾರೆ. ಅದಾಗಲೇ ಇಲ್ಲಿ ಪ್ರವೇಶ ಪಡೆಯಲಾಗಿದೆ ಅಂತಾ ಸ್ಪಷ್ಟವಾಗಿ ಅಲ್ಲಿನ ಕಾಲೇಜಿನವರು ಪ್ರಮಾಣಪತ್ರವನ್ನೂ ನೀಡಿದ್ಧಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಲ್ಯಾಣ ರಾಮನ 1200 ವರ್ಷಗಳ ಪುರಾತನ ದೇವಾಲಯ: ನಿತ್ಯವೂ ಕನ್ನಡದಲ್ಲೇ ಮಂತ್ರಘೋಷ

ಆ ಪ್ರಮಾಣ ಪತ್ರ ನೀಡಿದರೂ ಮೂಲ ಅಂಕಪಟ್ಟಿ ಬೇಕೇ ಬೇಕು ಅಂತಾ ಧಾರವಾಡ ಕೃಷಿ ವಿವಿ ಅಧಿಕಾರಿಗಳು ಪಟ್ಟು ಹಿಡಿದಿದ್ದು ವಿದ್ಯಾರ್ಥಿಗಳ ಅಕ್ರೋಶಕ್ಕೆ ಕಾರಣವಾಯಿತು. ಅಲ್ಲದೇ ಈ ಮೂಲ ಅಂಕಪಟ್ಟಿ ಇಲ್ಲದ ವಿದ್ಯಾರ್ಥಿಗಳಿಗೆ ಕೌನ್ಸ್‌ಲಿಂಗ್‌ಗೆ ಹಾಜರಾಗಲು ಅವಕಾಶ ಸಿಕ್ಕಿಲ್ಲ. ಬೀದರ್, ಬೆಂಗಳೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ಹಲವು ಕಡೆಗಳಿಂದ ವಿದ್ಯಾರ್ಥಿಗಳು ಕೌನ್ಸ್‌ಲಿಂಗ್‌ಗೆ ಬಂದಿದ್ದರು. ಒಂದು ದಿನ ಅವಕಾಶ ಕೊಟ್ಟರೆ ಮೂಲ ಅಂಕಪಟ್ಟಿ ತಂದು ಕೊಡುತ್ತೇವೆ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಕೃಷಿ ವಿವಿ ಆಡಳಿತ ಮಂಡಳಿ ಮಾತ್ರ ಅದಕ್ಕೆ ಒಪ್ಪಿಗೆ ಕೊಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಧರಣಿ ಕೂಡಬೇಕಾಗಿದೆ.

ಇನ್ನು ಈ ಬಗ್ಗೆ ವಿವಿಯ ಕುಲಪತಿ ಡಾ. ಪಿ.ಎಲ್. ಪಾಟೀಲ್ ಅವರನ್ನು ಕೇಳಿದರೆ, ಈ ಸಮಸ್ಯೆ ಇದೀಗ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ ಅಂದರು. ಒಟ್ಟಿನಲ್ಲಿ ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕು ಅಂತಾ ಬಂದಿರೋ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಶಾಕ್ ನೀಡಿದ್ದು ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ