156 ವರ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆ ಈಗ ಮಲ್ಟಿಪ್ಲೆಕ್ಸ್ ಪಾರ್ಕಿಂಗ್ ಗಾಗಿ ನೆಲಸಮ! ಎಲ್ಲಿ?
156 ವರ್ಷಗಳ ಸರಕಾರಿ ಶಾಲೆ ಇತಿಹಾಸ ಸೇರಲಿದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಆತುರದ ನಿರ್ಧಾರ ಸಾವಿರಾರು ವಿಧ್ಯಾರ್ಥಿಗಳು, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದವರ ಮನಸ್ಸಿಗೆ ಘಾಸಿಗೊಳಿಸಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯನವರು ಕಾಳಜಿ ವಹಿಸಿ ಸರ್ಕಾರಿ ಕನ್ನಡ ಶಾಲೆಯ ಉಳಿವಿಗಾಗಿ ಸೂಕ್ತ ನಿರ್ದೇಶನ ನೀಡಬೇಕಿದೆ.
ಅದು ಸುಮಾರು 156 ವರ್ಷದ ಐತಿಹಾಸಿಕ ಶಾಲೆ. ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಐತಿಹಾಸಿಕ ಶಾಲೆ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಜನರು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ದೊಡ್ಡ ಉದ್ಯಮಿಗಳಾಗಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಅಂತಹ ಐತಿಹಾಸಿಕ ಪರಂಪರೆಯ ಶಾಲೆ ಈಗ ಮಲ್ಟಿಪ್ಲೆಕ್ಸ್ ಪಾರ್ಕಿಂಗ್ ಗಾಗಿ ನೆಲಸಮವಾಗುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..
ಒಂದು ಕಡೆ ಸುಸಜ್ಜಿತ ಶಾಲೆ..ಇನ್ನೊಂದು ಕಡೆ ಶಾಲೆ ಉಳಿಸಲು ಸಹಿ ಸಂಗ್ರಹ ಅಭಿಯಾನ..ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಅದು ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ರಾಜ್ಯದ ಎರಡನೆಯ ಶಾಲೆ ಎಂಬ ಹೆಗ್ಗಳಿಕೆ ಹೊಂದಿದ್ದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 2 ಇತಿಹಾಸ ಸೇರುವ ಪಥದಲ್ಲಿದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಆತುರದ ನಿರ್ಧಾರ ಇಂದು ಈ ಶಾಲೆಯಲ್ಲಿ ಕಲಿತಿರುವ ಸಾವಿರಾರು ವಿಧ್ಯಾರ್ಥಿಗಳು ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದವರ ಮನಸ್ಸಿಗೆ ಘಾಸಿಗೊಳಿಸಿದೆ.
ಹೌದು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಶಾಲೆಯನ್ನು ತೆರವು ಮಾಡಿ 18 ಕೋಟಿ ವೆಚ್ಚದಲ್ಲಿ ಮಲ್ಟಿಪ್ಲೆಕ್ಸ್ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿದೆ. ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ ಬದುಕು ಕೊಟ್ಟಿರುವ ನಗರದ ಬ್ರಾಡವೇ ಸರಕಾರಿ ಪ್ರಾಥಮಿಕ ಶಾಲೆ ನಂ. 2 ಅನ್ನು ಬೇರೆಡೆ ಸ್ಥಳಾಂತರ ಮಾಡಿ, ಆ ಶಾಲಾ ಕಟ್ಟಡವನ್ನು ನೆಲಸಮ ಮಾಡಿ ಅದೇ ಜಾಗದಲ್ಲಿ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡ ಕಟ್ಟಲು ಯೋಜನೆ ತಯಾರಿಸಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಶಾಸಕರು ಅಧಿಕಾರಿಗಳ ಸಭೆಯಲ್ಲಿ ಶಾಲೆ ಸ್ಥಳಾಂತರ ಮಾಡಲು ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಶಾಲಾ ಸಿಬ್ಬಂದಿಗೂ ಮೌಖಿಕವಾಗಿ ತಿಳಿಸಲಾಗಿದೆ.
ದುರ್ಗದಬೈಲ ಪ್ರದೇಶಕ್ಕೆ ಬರುವ ಗ್ರಾಹಕರ ವಾಹನಗಳ ಪಾರ್ಕಿಂಗ್ ಅವಕಾಶ ಕಲ್ಪಿಸಲು ಈ ಜಾಗವನ್ನು ಬಳಸಲಾಗುತ್ತದೆ. ಈ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡಕ್ಕೆ ಬರೋಬ್ಬರಿ 18 ಕೋಟಿ ರೂ. ಅಂದಾಜು ವೆಚ್ಚ ರೂಪಿಸಲಾಗಿದೆ. ಮಹಾನಗರದಲ್ಲಿ ಈಗಾಗಲೇ ಗ್ಲಾಸ್ ಹೌಸ್‌ನಲ್ಲಿ 4.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಫಜಲ್ ಪಾರ್ಕಿಂಗ್ ವ್ಯವಸ್ಥೆ ಪಾಳು ಬಿದ್ದಿದೆ.
ಇದನ್ನೂ ಓದಿ: ಚಿಂತಾಮಣಿ: ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ವಿಸ್ಮಯಕ್ಕೆ ಕಾರಣವಾಗಿದೆ ಲಕ್ಷ್ಮಣ ತೀರ್ಥ!
ಇನ್ನೊಂದೆಡೆ ಖಾಸಗಿ ಸಹಭಾಗಿತ್ವದಲ್ಲಿ ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ ಸಾಯಿ ಮಂದಿರದ ಎದುರು ಮಲ್ಟಿಲೇವೆಲ್ ಕಾರ್ ಪಾರ್ಕಿಂಗ್ ಕಟ್ಟಡವನ್ನು ನಾಲ್ಕು ವರ್ಷಗಳಿಂದ ನಿರ್ಮಿಸಲಾಗುತ್ತಿದೆ. ಹೀಗಿದ್ದರೂ ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿರುವ ಶಾಲೆಯನ್ನು ನೆಲಸಮ ಮಾಡಲು ಮುಂದಾಗಿರುವುದು ವಿದ್ಯಾರ್ಥಿಗಳಿಗೆ ನೋವನ್ನುಂಟು ಮಾಡಿದೆ.
ಇದಕ್ಕಾಗಿ ಈ ಹಿಂದೆ ಇದೆ ಶಾಲೆಯಲ್ಲಿ ಕಲತಿರೋ ಹಳೇ ವಿದ್ಯಾರ್ಥಿಗಳು ಶಾಲೆ ಉಳಿಸಿ ಅಭಿಯಾನಕ್ಕೆ ಮುಂದಾಗುದ್ದಾರೆ.ಪಾಲಿಕೆ ಮತ್ತು ಶಾಸಕರ ಸಭೆಯಲ್ಲಿ ಚರ್ಚೆ ಮಾಡಿರೋ ನಿರ್ಣಯ ಶಾಲಾ ಹಳೆಯ ವಿದ್ಯಾರ್ಥಿಗಳ ಗಮನಕ್ಕೆ ಬಂದಿದ್ದು ಇದೀಗ ಹಳೇ ವಿದ್ಯಾರ್ಥಿಗಳು ಶಾಲೆ ಉಳಸಿ ಎಂದು ಸಹಿ ಸಂಗ್ರಹ ಅಭಿಯಾನಕ್ಕೆ ಮುಂದಾಗಿದ್ದಾರೆ. ಇನ್ನು ಈ ಕುರಿತು ಶಾಲೆಯ ಹಳೆ ವಿದ್ಯಾರ್ಥಿಗಳು ಹೇಳೋದು ಹೀಗೆ.
ಒಟ್ಟಿನಲ್ಲಿ ಸರ್ಕಾರಿ ಶಾಲೆಯ ತೆರವಿಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವಹಿಸಿ ಸರ್ಕಾರಿ ಕನ್ನಡ ಶಾಲೆಯ ಉಳಿವಿಗಾಗಿ ಸೂಕ್ತ ನಿರ್ದೇಶನ ನೀಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.