ಧಾರವಾಡ, ಜುಲೈ 19: ಜಿಲ್ಲೆಯ ನವಲಗುಂದ ಪಟ್ಟಣದ ರಾಮಲಿಂಗೇಶ್ವರ ಕಾಮಣ್ಣ ದೇವರು (Kamanna temple) ಅಂದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು ಇದ್ದಂತೆ. ಪ್ರತಿ ವರ್ಷ ಹೋಳಿ ಹುಣ್ಣಿಮೆ ಸಮಯಕ್ಕೆ ಇಲ್ಲಿ ಐದು ದಿನಗಳ ಕಾಲ ಸಹಸ್ರಾರು ಭಕ್ತರು ಬರ್ತಾರೆ. ಹೀಗಾಗಿ ಸಹಜವಾಗಿಯೇ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹ ಆಗುತ್ತೆ. ಆದರೆ ಹಾಗೆ ಕೂಡಿದ ಕೋಟ್ಯಂತರ ಹಣವೇ ಇದೀಗ ಎಲ್ಲಿದೆ ಅನ್ನೋ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ವರದಿ ಇಲ್ಲಿದೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿರುವ ರಾಮಲಿಂಗ ಕಾಮಣ್ಣ ದೇವಸ್ಥಾನದ ಕೋಟ್ಯಂತರ ರೂಪಾಯಿ ಈಗ ಮಾಯವಾಗಿ ಹೋಗಿದೆ. ಆ ಹಣ ಸುಮ್ಮನೆ ಮಾಯವಾಗಿಲ್ಲ. ಬದಲಿಗೆ ಆಗಾಗ ಬ್ಯಾಂಕ್‌ಗೆ ಕಟ್ಟಲಾಗಿದ್ದ ಆ ಹಣ ಬ್ಯಾಂಕ್ ಖಾತೆಯಲ್ಲೆನೋ ಜಮೆ ಆಗಿ ಕ್ರಮೇಣ ಡ್ರಾ ಕೂಡ ಆಗಿದೆ. ಆದರೆ ಅದು ಜಮೆ ಮತ್ತು ಡ್ರಾ ಆಗಿದ್ದು ಮಾತ್ರ ದೇವಸ್ಥಾನದ ಟ್ರಸ್ಟ್ ಕಮೀಟಿ ಅಕೌಂಟ್ಗೆ ಅಲ್ಲ.
ಇದನ್ನೂ ಓದಿ: ಮದುವೆ ಫೋಟೋ ಕೊಡದ ಫೋಟೊಗ್ರಾಫರ್ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಮೀಟಿಯ ಹೆಸರಿನಲ್ಲಿ 2018ರಿಂದ ಹಣ ಇಡಲಾಗಿತ್ತು. ನಗದು ಮತ್ತು ಬಡ್ಡಿ ಸೇರಿ ಒಟ್ಟು 1 ಕೋಟಿ 39 ಲಕ್ಷ ರೂಪಾಯಿ ಆಗಿತ್ತು. ಆದರೆ ಇದೀಗ ಆ ಹಣ ಮಾಯವಾಗಿದೆ. ಸಾಮಾನ್ಯವಾಗಿ ಟ್ರಸ್ಟ್ ಹಣವನ್ನು ಜಮೆ ಮಾಡಲು ಅಧ್ಯಕ್ಷರೇ ಸೊಸೈಟಿ ಕಾರ್ಯದರ್ಶಿಗೆ ಕೊಡುತ್ತಿದ್ದರಂತೆ. ಆದರೆ ಆ ಹಣ 2018ರಿಂದ ಟ್ರಸ್ಟ್ ಹೆಸರಿನಲ್ಲಿ ಹಣ ಜಮೆ ಆಗಿಯೇ ಇರಲಿಲ್ಲ.
ಎರಡು ತಿಂಗಳ ಹಿಂದೆ ಟ್ರಸ್ಟ್ ಕಮೀಟಿ ಸದಸ್ಯರೆಲ್ಲ ಸಭೆ ಮಾಡಿದ್ದರು. ಸಭೆಯಲ್ಲಿ ಆ ಹಣವನ್ನೆಲ್ಲ ಟ್ರಸ್ಟ್ ಅಕೌಂಟ್‌ಗೆ ಹಾಕುವಂತೆ ನಿರ್ಣಯ ಮಾಡಿ ಹೇಳಲಾಗಿತ್ತು. ಇಲ್ಲಿಯವರೆಗೆ ಒಟ್ಟು 1.39 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಅದನ್ನು ಟ್ರಸ್ಟ್ ಅಕೌಂಟ್‌ಗೆ ಹಾಕುವೆ ಅಂತಾ ಕಾರ್ಯದರ್ಶಿ ಮಹಾಂತೇಶ ಒಪ್ಪಿಕೊಂಡಿದ್ದರು. 2018 ರಿಂದ 2023 ಮಾರ್ಚ್ ಹಣ ಇದು. ಮೂಲ ಹಣ ಮತ್ತು ಬಡ್ಡಿ ಲೆಕ್ಕ ಹಾಕಿ ಕಮೀಟಿಯವರು ಹಣ ಕೇಳಿದ್ದರು.
ಹಣದ ವ್ಯವಹಾರವನ್ನೆಲ್ಲ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿದ್ದರಾಮಯ ಶೆಟ್ಟಿ ಅವರೇ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಅವರು ಹದಿನೈದು ದಿನದಲ್ಲಿ ಹಣ ಟ್ರಸ್ಟ್ ಗೆ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಆದರೆ ಹಣ ಕೊಡಲಿಲ್ಲ. ಆದರೆ ಸಹಕಾರ ಸಂಘದ ಕಾರ್ಯದರ್ಶಿ ಮಹಾಂತೇಶ ಏಕಾಏಕಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೀಗಾಗಿ ಈಗ ಹಣವೂ ಇಲ್ಲ. ಅವರನ್ನೂ ಕೇಳದಂತೆಯೂ ಆಗಿದೆ.
ಇನ್ನು ಸಹಕಾರ ಸಂಘದ ಕಾರ್ಯದರ್ಶಿ ಹೇಳುವುದೇ ಬೇರೆ. ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಸಂಬಂಧಿತ ಐದು ಜನರ ಹೆಸರಿನಲ್ಲಿಯೇ ಹಣ ಡಿಪಾಸಿಟ್ ಮಾಡಿಕೊಳ್ಳುತ್ತ ಬಂದಿದ್ದರು. ಉಳಿದ ಐವರ ಖಾತೆಯ ಪಾವರ್ ಆಫ್ ಅಟಾರ್ನಿ ಸಹ ಲಿಂಗರಾಜ್ ಅವರೇ ಹೊಂದಿದ್ದರು. ಅವರೇ ಹಣ ಇಟ್ಟು, ಅವರೇ ಆಗಾಗ ತೆಗೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಸಹಕಾರಿ ಸಂಘದ ಕಾರ್ಯದರ್ಶಿ ಮಹಾಂತೇಶ ಹೇಳುತ್ತಿದ್ದಾರೆ.
ಇದನ್ನೂ ಓದಿ: ಧಾರವಾಡ: ಒಪ್ಪಂದದಂತೆ ನಿವೇಶನ ಅಭಿವೃದ್ಧಿ ಮಾಡದ ಬಿಲ್ಡರ್‌ಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
ಅಧ್ಯಕ್ಷನು ನನ್ನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ಸಲ್ಲಿಸಿದ ದಾಖಲೆಗಳು ನಕಲಿ ಇವೆ. ತಮಗೆ ಹೇಗೆ ಬೇಕೋ ಹಾಗೇ ನನ್ನಿಂದ ಕೆಲಸ ತೆಗೆದುಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ನನ್ನ ತಪ್ಪಿಲ್ಲ. ಆದರೆ ಇತ್ತೀಚೆಗೆ ಟ್ರಸ್ಟ್ ನವರು ಸಭೆ ಮಾಡಿ ಹಣ ಕೊಡಿ ಎಂದು ಕೇಳಿದ್ದರಿಂದ ನಾನು ಇಕ್ಕಟ್ಟಿಗೆ ಸಿಲುಕಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇನೆ. ನಾನು ತಪ್ಪು ಮಾಡಿದ್ದು ನಿಜ. ಆದರೆ ನನ್ನಿಂದ ಇವರು ತಪ್ಪು ಮಾಡಿಸಿದ್ದಾರೆ ಎಂಬುದು ಮಹಾಂತೇಶನ ಹೇಳಿಕೆ.
ಸದ್ಯ ಮಹಾಂತೇಶ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಇಡೀ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮತ್ತೊಂದೆಡೆ ಟ್ರಸ್ಟ್ ನೊಳಗೆ ಇಷ್ಟು ದಿನ ಇದ್ದ ಅಧ್ಯಕ್ಷ, ಸದಸ್ಯರ ಮಧ್ಯದ ಭಿನ್ನಾಭಿಪ್ರಾಯವೂ ಈಗ ಸ್ಪೋಟಗೊಳ್ಳುವಂತಾಗಿದ್ದು, ಅತ್ತ ಅಧ್ಯಕ್ಷರು ಕೈಗೆ ಸಿಗುತ್ತಿಲ್ಲ. ಇತ್ತ ಕೇಳೋಣ ಅಂದ್ರೆ ಮಹಾಂತೇಶ ಸಹ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತ ಆಗಿ ಕುಳಿತಿದ್ದಾನೆ. ಹೀಗಾಗಿ ಹಣ ಯಾರನ್ನು ಕೇಳುವುದು? ಯಾರಿಂದ ಹಣ ಪಡೆದು ದೇವಸ್ಥಾನ ಅಭಿವೃದ್ಧಿ ಮಾಡೋದು ಅನ್ನೋ ಚಿಂತೆ ಟ್ರಸ್ಟ್ ಸದಸ್ಯರನ್ನು ಕಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.