ಧಾರವಾಡ: ಇತ್ತೀಚೆಗೆ ಡಿಜಿಟಲ್ ವ್ಯವಸ್ಥೆಗೆ ಜನ ಅಪ್ಡೇಟ್ ಆದ ಬಳಿಕ ಆನ್ಲೈನ್ ವ್ಯವಹಾರವೇ ಹೆಚ್ಚಾಗಿದೆ. ಅದರಲ್ಲಿಯೂ ಈ ಅನ್ ಲೈನ್ ವ್ಯವಹಾರ ಹೆಚ್ಚಾಗಿ ಸುಶಿಕ್ಷಿತರೇ ನಡೆಸುತ್ತಾರೆ. ಇಂತಹ ಅತೀ ಹೆಚ್ಚು ಸುಶಿಕ್ಷಿತರು ಇರುವ ಧಾರವಾಡ ಜಿಲ್ಲೆಯಲ್ಲಿರೂ ಆನ್ ಲೈನ್ ವ್ಯವಹಾರ ಮಾಡುವ ಶಿಕ್ಷಿತರ ಸಂಖ್ಯೆ ಹೆಚ್ಚಿದೆ. ಆದರೆ, ಅದರ ಬೆನ್ನಲ್ಲಿಯೇ ಈಗ ಆನ್ ಲೈನ್ ಮೂಲಕ ವಂಚನೆ ಮಾಡುವವರ ಜಾಲಕ್ಕೆ ಸಿಲುಕಿರುವವರ ಸಂಖ್ಯೆಯೂ ಇದೇ ಧಾರವಾಡದಲ್ಲಿ ಹೆಚ್ಚಾಗಿದೆ. ಇವರ ಹೆಸರು ಶ್ರೀನಿವಾಸ ಇಂಚೂರು. ಧಾರವಾಡದ ನಿವಾಸಿಯಾಗಿರುವ ಇವರು ಹೋಟೆಲ್ ಉದ್ಯಮಿ. ಇತ್ತೀಚಿಗೆ ಅವರ ಮೊಬೈಲ್ಗೆ ಒಂದು ಸಂದೇಶ ಬಂದಿತ್ತು. ಖಾಸಗಿ ಬ್ಯಾಂಕ್ವೊಂದರಲ್ಲಿ ನಿಮಗೆ ಕಡಿಮೆ ಬಡ್ದಿ ದರದಲ್ಲಿ 5 ಲಕ್ಷ ರೂಪಾಯಿ ಲೋನ್ ಸಿಗುತ್ತದೆಯೆಂದು ಅದರಲ್ಲಿ ಹೇಳಲಾಗಿತ್ತು. ಅವರಿಗೆ ಸಾಲ ಅವಶ್ಯಕತೆ ಇದ್ದಿದ್ದರಿಂದ ಆ ಲಿಂಕ್ ಮೂಲಕ ಹೋದಾಗ ಅವರಿಗೆ ಗೊತ್ತಿಲ್ಲದಂತೆ ಅವರ ಖಾತೆಯಿಂದ 17 ಸಾವಿರ ರೂಪಾಯಿ ಕಟ್ ಆಗಿದೆ. ಇದರಿಂದಾಗಿ ಅವರಿಗೆ ಅತ್ತ ಸಾಲವೂ ಇಲ್ಲ, ಇತ್ತ ಖಾತೆಯಲ್ಲಿ ಹಣವೂ ಮಾಯವಾಗಿದೆ.
ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 224 ಆನ್ ಲೈನ್ ವಂಚನೆ ಪ್ರಕರಣಗಳಲ್ಲಿ ಜನ ಒಟ್ಟು 6.66 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಇದು ನಗರ ಪ್ರದೇಶ ಮಾತ್ರವಲ್ಲ ಹಳ್ಳಿ ಹಳ್ಳಿಯಲ್ಲಿರುವ ಜನರ ಬ್ಯಾಂಕ್ ಅಕೌಂಟ್ಗಳಿಗೂ ಅವರ ಮೊಬೈಲ್ ಸಂಪರ್ಕವನ್ನೇ ಬಳಸಿಕೊಂಡು ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದಾರೆ. ಲಿಂಕ್ವೊಂದನ್ನು ಕಳುಹಿಸಿ ಕ್ಲಿಕ್ ಮಾಡಿ ಎಂದು ಹೇಳುವ ಮೂಲಕ ಇಲ್ಲವೇ, ಓಟಿಪಿ ಕಳುಹಿಸುವ ಮೂಲಕ ಎಲ್ಲಿಯೂ ಕುಳಿತು ಇವರ ಅಕೌಂಟ್ದಲ್ಲಿನ ಹಣ ಕಸಿದುಕೊಳ್ಳುತ್ತಿದ್ದಾರೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ವರ್ಷ ಸೈಬರ್ ಕ್ರೈಂನ ವಂಚನೆ ಹೆಚ್ಚಾಗಿದೆ.
ಇದನ್ನೂ ಓದಿ:Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ
ಕಳೆದ ವರ್ಷ 12 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜನ ಆನ್ ಲೈನ್ ವಂಚನೆಯಲ್ಲಿ 6.60 ಕೋಟಿ ರೂಪಾಯಿ ಕಳೆದುಕೊಂಡಿದ್ದರು. ಆದರೆ, ಈ ವರ್ಷ ಆರೇ ತಿಂಗಳಿನಲ್ಲಿ ಅದನ್ನು ಮೀರಿ ಹೋಗಿದೆ. 224 ಪ್ರಕರಣಗಳ ಪೈಕಿ ಒಂದಷ್ಟು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, 1.91 ಕೋಟಿ ರೂಪಾಯಿ ಹಣವನ್ನ ರಿಕವರಿ ಮಾಡಿಕೊಂಡಿದ್ದಾರೆ. ಇನ್ನು ಈ ಸೈಬರ್ ವಂಚನೆ ಪ್ರಕರಣವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಗಂಭೀರವಾಗ ಪರಿಗಣಿಸಿದ್ದು, ಮುಂದಿನ ಒಂದು ವಾರದಲ್ಲಿ ಇದಕ್ಕೆ ಸಂಬಂಧಿಸಿದಂತೆಯೇ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆಗೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಎಷ್ಟೇ ಜಾಗರೂಕವಾಗಿದ್ದರೂ ಸಹ ಸೈಬರ್ ಕಳ್ಳರು, ಪೊಲೀಸರಿಗಿಂತ ಜಾಣರಾಗಿ ಕಾರ್ಯ ಮಾಡುತ್ತಿದ್ದಾರೆ. ಇನ್ನು ಅವರಿಗೆ ಜನರನ್ನು ಸಲೀಸಾಗಿ ಮೋಸ ಮಾಡಿ, ಅವರ ಖಾತೆಗಳಿಗೆ ಕನ್ನ ಹಾಕೋದು ಚೆನ್ನಾಗಿ ಗೊತ್ತಾಗಿ ಹೋಗಿದೆ. ಜನರು ಕೂಡ ಈ ಬಗ್ಗೆ ಜಾಗೃತರಾಗಿ, ಇಂತಹ ಯಾವುದೇ ಆಮಿಷಕ್ಕೆ ಒಳಗಾಗದೇ ಹುಷಾರಾಗಿರಬೇಕಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ