ಹುಬ್ಬಳ್ಳಿಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು: ಕೆವೈಸಿ ಅಪ್ಡೇಟ್ ಹೆಸರಲ್ಲಿ ವೈದ್ಯ ಹಾಗೂ ಹಿರಿಯ ನಾಗರಿಕರೊಬ್ಬರಿಗೆ ವಂಚನೆ!
ನಿವೃತ್ತ ಉದ್ಯೋಗಿ ಕೆ.ಎನ್.ಕರ್ನಲ್ ವಂಚನೆಗೀಡಾದವರು. ಅಪರಿಚಿತನೊಬ್ಬ ಡಿ. 27 ರಂದು ಕರ್ನಲ್ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾನೆ. ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ನಂತರ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದಾನೆ.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಕೇವಲ ಒಂದು ನಗರಕ್ಕೆ ಮಾತ್ರ ಸೀಮಿತವಾಗಿರದೆ, ದೇಶದ ನಾನಾಭಾಗಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸಿಮ್ ಕಾರ್ಡ್ನ ಕೆವೈಸಿ ಅಪ್ಡೇಟ್ ಮಾಡಬೇಕು ಇಲ್ಲದಿದ್ದರೆ ಸಿಮ್ ಕಾರ್ಡ್ ಉಪಯೋಗಿಸಲಾಗದಂಥ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ವೈದ್ಯರೊಬ್ಬರಿಗೆ ಸಂದೇಶ ಕಳುಹಿಸಿ ಅ್ಯಪ್ ಮೂಲಕ 44,499 ರೂ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ಸಾರಾಂಶ ಹೀಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ ಡಾ.ನಾರಾಯಣಚಂದ ಹೆಬಸೂರ ಅವರಿಗೆ ಡಿಸೆಂಬರ್ 28 ರಂದು ಅಪರಿಚಿತರೊಬ್ಬ ಎಸ್ ಎಂ ಎಸ್ ಕಳುಹಿಸಿದ್ದಾನೆ. ಆ ನಂಬರ್‌ಗೆ ಕರೆ ಮಾಡಿದಾಗ, ಆ ಕಡೆಯಿಂದ ವಿನಯ ಶರ್ಮಾ ಅಂತ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ತಾನು ಎಸ್ ಬಿ ಐನ ಶಾಖೆಯೊಂದರಲ್ಲಿ ಅಧಿಕಾರಿ ಎಂದು ವೈದ್ಯರನ್ನು ನಂಬಿಸಿದ್ದಾನೆ.
ಬಳಿಕ ಅವರಿಗೆ ‘ಟೀಮ್ ವೀವರ್ ಆ್ಯಪ್’ ಡೌನ್‌ಲೋಡ್ ಮಾಡಿಕೊಳ್ಳಲು ಹೇಳಿದ್ದಾನೆ. ಅದಾದ ಮೇಲೆ ಅವರ ಗಮನಕ್ಕೆ ಬಾರದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆಂದು ವೈದ್ಯರು ದೂರು ದಾಖಲಿಸಿದ್ದಾರೆ.
ಹಿರಿಯ ನಾಗರಿಕರೊಬ್ಬರಿಗೆ ಇನ್ನೂ ದೊಡ್ಡ ವಂಚನೆ
ಇದು ವೈದ್ಯರ ಕಥೆಯಾದ್ರೆ, ಮತ್ತೊಂದೆಡೆ ಹಿರಿಯ ನಾಗರಿಕರೊಬ್ಬರಿಗ ಸೈಬರ್ ಖದೀಮರು ವಂಚಿಸಿದ್ದಾರೆ. ಎಸ್‌ಬಿಐ ಖಾತೆಯ ಇ- ಕೆವೈಸಿ ಅಪ್ಡೇಟ್ ಮಾಡಬೇಕೆಂದು ನಗರದ ವಯಸ್ಕರೊಬ್ಬರಿಗೆ ಸಂದೇಶ ಕಳುಹಿಸಿ, ಎನಿ ಡೆಸ್ಕ್ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಸಿ 1,87,000 ರೂಪಾಯಿ ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವೇಶ್ವರ ನಗರದ ನಿವೃತ್ತ ಉದ್ಯೋಗಿ ಕೆ.ಎನ್.ಕರ್ನಲ್ ವಂಚನೆಗೀಡಾದವರು. ಅಪರಿಚಿತನೊಬ್ಬ ಡಿ. 27 ರಂದು ಕರ್ನಲ್ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾನೆ. ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ನಂತರ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದಾನೆ. ಲಾಗ್ ಇನ್ ಮಾಡಿಸಿ ಎಟಿಎಂ ಕಾರ್ಡ್ ವಿವರ ಪಡೆದಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಕರ್ನಲ್ ಬ್ಯಾಂಕ್‌ಗೆ ಕರೆ ಮಾಡಿ ವಿಚಾರಿಸಿದರೆ ಅವರು ಕಸ್ಟಮರ್ ಕೇರ್‌ಗೆ ಕರೆ ಮಾಡಿ ಖಾತೆಯನ್ನು ಬ್ಲಾಕ್ ಮಾಡುವಂತೆ ಸೂಚಿಸಿದ್ದಾರೆ.
ಪ್ರಕರಣ ಕುರಿತಂತೆ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ವರದಿ: ದತ್ತಾತ್ರೇಯ ಪಾಟೀಲ, ಟಿವಿ9 ಹುಬ್ಬಳ್ಳಿ
ಇದನ್ನೂ ಓದಿ: ಹಾಸ್ಟೆಲ್ನ ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ ಪ್ರಕರಣ; ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ