
ಧಾರವಾಡ, ಸೆಪ್ಟೆಂಬರ್ 01: ಜಿಲ್ಲೆಯ (Dharwad) ವೆಂಕಟಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಮತ್ತೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಊಟ ಮುಗಿಸಿಕೊಂಡು ಮರಳುತ್ತಿದ್ದಾಗ ಎದುರಿಗೆ ದಿಢೀರನೆ ಲಾರಿ ಬಂದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತಪಟ್ಟ ದಾವಣಗೆರೆ ಮೂಲದ ಯುವಕರಾದ ವಿನಾಯಕ ಕೆ. ಯು. (25), ಮಂಜುನಾಥ (29) ಹಾಗೂ ಬಸವರಾಜ (34) ಕೇಟರಿಂಗ್ ಕೆಲಸಕ್ಕಾಗಿ ಧಾರವಾಡಕ್ಕೆ ಆಗಮಿಸಿದ್ದರು. ನಿನ್ನೆ ಮಧ್ಯರಾತ್ರಿ 2:30ರ ಸುಮಾರಿಗೆ ಕೆಲಸ ಮುಗಿಸಿ, ಧಾರವಾಡ ಹೊರವಲಯದ ಡಾಬಾಕ್ಕೆ ಊಟಕ್ಕಾಗಿ ತೆರಳಿದ್ದರು. ಊಟ ಮುಗಿಸಿಕೊಂಡು ಕಾರಿನಲ್ಲಿ ನಗರಕ್ಕೆ ಮರಳುವಾಗ ಎದುರಿನಿಂದ ಬಂದ ಲಾರಿಯನ್ನು ತಪ್ಪಿಸಲು ಚಾಲಕ ಬಸವನಗೌಡ ಒಮ್ಮೆಲೆ ಬ್ರೇಕ್ ಹಾಕಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ (ಡಿವೈಡರ್) ಪ್ರಚಂಡ ವೇಗದಲ್ಲಿ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಚಾಲಕ ಸೇರಿ ಮತ್ತೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
“ಆ್ಯಂಬುಲೆನ್ಸ್‌ನಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆ ತರಲಾಯಿತು. ಇಲ್ಲಿಗೆ ಬಂದ ಮೇಲೆಯೇ ಸಹೋದ್ಯೋಗಿಗಳು ಮೃತಪಟ್ಟ ವಿಷಯ ಗೊತ್ತಾಯಿತು” ಎಂದು ಕಾರು ಚಾಲಕ ಬಸವನಗೌಡ ಕಣ್ಣೀರು ಹಾಕಿದ್ದಾರೆ. ಗಾಯಾಳುಗಳಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಗರಗ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 am, Tue, 1 September 26