
ಧಾರವಾಡ, ಏಪ್ರಿಲ್ 29: ಧಾರವಾಡ ಜಿಲ್ಲಾ ಆಸ್ಪತ್ರೆ (Dharwad District Hospital) ಸುಮಾರು 50 ವರ್ಷಗಳಷ್ಟು ಹಳೆಯ ಕಟ್ಟಡದ ಜೊತೆಗೆ ಇತ್ತೀಚೆಗೆ ನಿರ್ಮಾಣವಾಗಿರುವ ಕೆಲವೇ ಕಟ್ಟಡಗಳೊಂದಿಗೆ ನಡೆಯುತ್ತಿರುವ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಧಾರವಾಡ (Dharwad) ಜಿಲ್ಲೆಯ ಜನತೆ ಮಾತ್ರವಲ್ಲದೇ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ, ಕಿತ್ತೂರು, ಬೈಲಹೊಂಗಲ ತಾಲೂಕಿಜನ ಜನರೂ ಬರುತ್ತಾರೆ.
ದಿನವೊಂದಕ್ಕೆ ಇಲ್ಲಿನ ಹೊರರೋಗಿ ವಿಭಾಗಕ್ಕೆ ಕನಿಷ್ಠ 1500 ಜನ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಕೇವಲ 350 ಬೆಡ್ಗಳಿವೆ. ಹೀಗಾಗಿ ಜಿಲ್ಲಾಸ್ಪತ್ರೆ ವಿಸ್ತರಿಸಬೇಕು ಎಂಬ ವಿಚಾರ ಇದೆ. ಆದರೆ ಈಗ ಆಸ್ಪತ್ರೆ ಇರುವ ಅಕ್ಕಪಕ್ಕದಲ್ಲಿಯೇ ಪುರಾತತ್ವ ಇಲಾಖೆಯ ಕಟ್ಟಡವಿದೆ. ಹೀಗಾಗಿ, ಆಸ್ಪತ್ರೆಯನ್ನು ಧಾರವಾಡದ ಹೊರವಲಯದಲ್ಲಿ ವಿಶಾಲವಾದ ಜಾಗದಲ್ಲಿ ಹೊಸದಾಗಿ ಕಟ್ಟಬೇಕಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಈಗ ಇರುವ ಆಸ್ಪತ್ರೆ ಹಳೆ ಬಸ್ ನಿಲ್ದಾಣ ಹಾಗೂ ಸಿಬಿಟಿಗೆ ತೀರ ಸಮೀಪವಿದೆ. ಹೀಗಾಗಿ ಇಲ್ಲಿಯೇ ವಿಸ್ತರಣೆ ಮಾಡಬೇಕು ಎನ್ನುವ ಆಗ್ರಹ ಇದೆಯಾದರೂ, ಈಗ ಇರುವ 10 ಎಕರೆ ಜಾಗದಲ್ಲಿ ಎಲ್ಲ ಕಡೆಯೂ ಕಟ್ಟಡಗಳು ಭರ್ತಿಯಾಗಿವೆ. ಹೊಸದಾಗಿ ವಿಸ್ತರಣೆ ಅವಕಾಶವೇ ಇಲ್ಲ. ಹೀಗಾಗಿ, ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ 30 ಎಕರೆ ಜಾಗ ಇಲ್ಲವೇ, ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಧಾರವಾಡ-ಬೆಳಗಾವಿ ಹೆದ್ದಾರಿ ಪಕ್ಕದ 20 ಎಕರೆ ಜಾಗವನ್ನು ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇದಕ್ಕಾಗಗಿ 400 ಕೋಟಿ ರೂಪಾಯಿ ಅನುದಾನ ಬೇಕು ಎಂಬ ಬೇಡಿಕೆಯನ್ನೂ ಸಲ್ಲಿಸಲಾಗಿದೆ. ಈ ಪ್ರಸ್ತಾವ ಫೈನಾನ್ಸ್ ಇಲಾಖೆ ಮುಂದಿದ್ದು, ಶೀಘ್ರ ಅನುಮೋದನೆ ಸಿಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಇದನ್ನೂ ಓದಿ: ಈ ಜಿಲ್ಲೆಗಳಿಗೆ ವಿಶೇಷ ರೈಲುಗಳು, ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿವರ
ಒಟ್ಟಾರೆಯಾಗಿ ಜನಸಂಖ್ಯೆ ಬೆಳೆದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಅದಕ್ಕೆ ತಕ್ಕಂತೆ ಆಸ್ಪತ್ರೆಗಳ ವಿಸ್ತರಣೆಯಾಗಲೇಬೇಕು. ಆದರೆ, ಪುರಾತತ್ವ ಇಲಾಖೆ ಕಟ್ಟಡಗಳಿರುವ ಕಾರಣ ಧಾರವಾಡ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿ ಬೇರೆ ಕಡೆಯೇ ಶಿಫ್ಟ್ ಮಾಡುವುದು ಅನಿವಾರ್ಯವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸುತ್ತಾ? ಕಾದು ನೋಡಬೇಕಿದೆ.