ದುರಂತ ನಡೆಯುವ ಮುನ್ನ.. ಈ ಮರಕ್ಕೆ ಗೌರವದ ಅಂತ್ಯಸಂಸ್ಕಾರ ಕರುಣಿಸಬೇಕಿದೆ..!

| Updated By: ಆಯೇಷಾ ಬಾನು

Updated on: Jun 03, 2020 | 4:37 PM

ಧಾರವಾಡ: ಇದೀಗ ಎಲ್ಲೆಡೆ ಗಾಳಿ, ಮಳೆಯ ಅಬ್ಬರ; ಅದರಲ್ಲೂ ಅರೆ ಮಲೆನಾಡು ಜಿಲ್ಲೆ ಧಾರವಾಡದಲ್ಲಿ ಕಳೆದ ಒಂದು ವಾರದಿಂದ ಜೋರಾಗಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಗಿಡ-ಮರಗಳು ಉರುಳಿ ಭಾರೀ ಅನಾಹುತ ಸೃಷ್ಟಿಸುತ್ತಿವೆ. ಇಂಥದ್ದರ ನಡುವೆಯೇ ಧಾರವಾಡ ನಗರದ ಅನೇಕ ಕಡೆಗಳಲ್ಲಿ ಒಣಗಿ ನಿಂತಿರೋ ಮರಗಳು ಜನರ ಆತಂಕವನ್ನು ಹೆಚ್ಚಿಸಿವೆ. ಮಾಳಮಡ್ಡಿ ಬಡಾವಣೆಯ ಎಮ್ಮಿಕೇರಿ ವ್ಯಾಪ್ತಿಯ ಕೆನರಾ ಬ್ಯಾಂಕ್ ನೂತನ ಶಾಖೆಯ ಬಳಿ, ರಾಜ್ ಟವರ್ಸ್ ಎದುರು ಭಾರೀ ಗಾತ್ರದ ಮರ ಒಣಗಿ ನಿಂತು ವರ್ಷಗಳೇ […]

ದುರಂತ ನಡೆಯುವ ಮುನ್ನ.. ಈ ಮರಕ್ಕೆ ಗೌರವದ ಅಂತ್ಯಸಂಸ್ಕಾರ ಕರುಣಿಸಬೇಕಿದೆ..!
Follow us on

ಧಾರವಾಡ: ಇದೀಗ ಎಲ್ಲೆಡೆ ಗಾಳಿ, ಮಳೆಯ ಅಬ್ಬರ; ಅದರಲ್ಲೂ ಅರೆ ಮಲೆನಾಡು ಜಿಲ್ಲೆ ಧಾರವಾಡದಲ್ಲಿ ಕಳೆದ ಒಂದು ವಾರದಿಂದ ಜೋರಾಗಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಗಿಡ-ಮರಗಳು ಉರುಳಿ ಭಾರೀ ಅನಾಹುತ ಸೃಷ್ಟಿಸುತ್ತಿವೆ. ಇಂಥದ್ದರ ನಡುವೆಯೇ ಧಾರವಾಡ ನಗರದ ಅನೇಕ ಕಡೆಗಳಲ್ಲಿ ಒಣಗಿ ನಿಂತಿರೋ ಮರಗಳು ಜನರ ಆತಂಕವನ್ನು ಹೆಚ್ಚಿಸಿವೆ.

ಮಾಳಮಡ್ಡಿ ಬಡಾವಣೆಯ ಎಮ್ಮಿಕೇರಿ ವ್ಯಾಪ್ತಿಯ ಕೆನರಾ ಬ್ಯಾಂಕ್ ನೂತನ ಶಾಖೆಯ ಬಳಿ, ರಾಜ್ ಟವರ್ಸ್ ಎದುರು ಭಾರೀ ಗಾತ್ರದ ಮರ ಒಣಗಿ ನಿಂತು ವರ್ಷಗಳೇ ಉರುಳಿವೆ. ಇದು ಸದಾ ಅತ್ಯಂತ ಜನನಿಬಿಡ ಮತ್ತು ವಾಹನನಿಬಿಡ ಪ್ರದೇಶ. ಯಾವತ್ತೂ ಸಂದಣಿಗೆ ಕೊರತೆ ಇಲ್ಲದ ಜಾಗೆಯಿದು. ಅಕಸ್ಮಾತ್ ದೊಡ್ಡ ಟೊಂಗೆ ಅಥವಾ ಮರವೇ ಮಳೆ, ಗಾಳಿಗೆ ಉರುಳಿದರೆ ಪ್ರಾಣ ಹಾನಿ, ಆಸ್ತಿ ನಷ್ಟ ಖಚಿತ.

ಪಕ್ಕದಲ್ಲೇ ಶಾಲೆ ಇದೆ
ಪಕ್ಕದಲ್ಲೇ ಬಾಸೆಲ್ ಮಿಷನ್ ಶಾಲೆ ಇದೆ. ಆದರೆ ಸದ್ಯಕ್ಕೆ ಶಾಲೆಗೆ ರಜೆ ಇದ್ದಿದ್ದರಿಂದ ಅದೊಂದು ಸಣ್ಣ ಸಮಾಧಾನದ ಸಂಗತಿ. ಆದರೆ, ಮರದ ಬುಡದಲ್ಲಿ ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರವಿದೆ. ಹಾಗಾಗಿ ಅಲ್ಲಿ ಅನೇಕ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದೆಲ್ಲದರ ನಡುವೆ ಈ ಪ್ರದೇಶದಲ್ಲಿ ಅನೇಕ ಹಿರಿಯರು ವಾಯು ವಿಹಾರಕ್ಕಾಗಿ ಮರದ ಬುಡದಲ್ಲೇ ನಿತ್ಯ ಹಾದು ಹೋಗುತ್ತಾರೆ.

ಅದೂ ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ವಾಕಿಂಗ್ ಮಾಡುವಾಗಲೇ ಗಾಳಿಯ ರಭಸವೂ ಹೆಚ್ಚಾಗಿರುತ್ತೆ. ಇಂಥ ಸಂದರ್ಭದಲ್ಲಿ ಒಣಗಿ ನಿಂತ ಮರದ ಟೊಂಗೆ ಮುರಿದು ಬಿದ್ದರೆ ಜೀವಹಾನಿಯಾಗೋದು ಖಚಿತ. ಸದ್ಯಕ್ಕೆ ಬೀಸುತ್ತಿರೋ ಗಾಳಿಯಿಂದಾಗಿ ಇಡೀ ಮರವೇ ಉರುಳಿದರೂ ಅಚ್ಚರಿಯಿಲ್ಲ!

ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ
ಅಂಥ ಘಟನೆ ನಡೆಯೋದಕ್ಕಿಂತ ಮುಂಚೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಇಂಥ ಮರಗಳನ್ನು ಕತ್ತರಿಸಬೇಕಿದೆ. ಅಲ್ಲದೇ ಇಂಥ ಅನೇಕ ಮರಗಳು ನಗರದ ವಿವಿಧ ಬಡಾವಣೆಗಳಲ್ಲಿ ಅನಾಹುತಕ್ಕಾಗಿ ಕಾದು ಕುಳಿತಿವೆ. ಅರಣ್ಯ ಇಲಾಖೆಯ ಜಾಗ್ರತ ದಳದವರು ಇಂಥ ಗಿಡ-ಮರಗಳನ್ನು ಗುರುತಿಸಿ, ಕತ್ತರಿಸಬೇಕಿದೆ. ತಮ್ಮ ಬದುಕಿನುದ್ದಕ್ಕೂ ಹೂ-ಹಣ್ಣು ಹೊದ್ದು‌ ನಿಂತು, ನೆರಳು ಚೆಲ್ಲಿ ಈ ಮರಗಳು ಉಪಕರಿಸಿವೆ. ಇವುಗಳಿಗೆ ಗೌರವದ ಅಂತ್ಯ ಸಂಸ್ಕಾರ ಕರುಣಿಸಬೇಕಿದೆ.

ಅಪವಾದ ಎನಗಿಲ್ಲ
ಇಲ್ಲವಾದಲ್ಲಿ ತಮ್ಮದಲ್ಲದ ತಪ್ಪಿಗೆ ಅವು ಜೀವಹಾನಿಯ ಅಪವಾದ ಹೊತ್ತು ಜೀವಮಾನದ ಗಳಿಕೆ ‘ಪರೋಪಕಾರ’ದ ಹಣೆ ಪಟ್ಟಿ ಕಳಚಿಕೊಂಡು, ಕೊನೆಗೆ ‘ನಮ್ಮನ್ನು ನೆಟ್ಟಿದ್ದೇ ತಪ್ಪು’ ಎಂದು ನೊಂದುಕೊಂಡು, ಕಾಲನ ಗರ್ಭ ಸೇರುವುದು ಬೇಡ ಅನ್ನೋದೇ ಪರಿಸರವಾದಿಗಳ ಆಶಯ!
-ನರಸಿಂಹಮೂರ್ತಿ ಪ್ಯಾಟಿ

Published On - 4:09 pm, Wed, 3 June 20