20 ಗುಂಟೆ ಪ್ರದೇಶದಲ್ಲಿ 72 ರೀತಿಯ ರಾಗಿ ತಳಿ ಬೆಳೆದು ಸೈ ಎನಿಸಿಕೊಂಡ ಧಾರವಾಡದ ರೈತ

ಪ್ರಗತಿಪರ ರೈತ ಈಶ್ವರಗೌಡ ಪಾಟೀಲ, ಸಾವಯವ ಕೃಷಿ ಪದ್ಧತಿಯಲ್ಲಿ ಒಂದೇ ಕಡೆ ವೈವಿಧ್ಯಮಯ ರಾಗಿ ತಳಿ ಬೆಳೆದಿದ್ದಾರೆ. ಕೇವಲ 20 ಗುಂಟೆಯಲ್ಲಿ ಬರೋಬ್ಬರಿ 72 ತಳಿ ಬೆಳೆದು ರೈತ ಸೈ ಎನಿಸಿಕೊಂಡಿದ್ದಾರೆ.

20 ಗುಂಟೆ ಪ್ರದೇಶದಲ್ಲಿ 72 ರೀತಿಯ ರಾಗಿ ತಳಿ ಬೆಳೆದು ಸೈ ಎನಿಸಿಕೊಂಡ ಧಾರವಾಡದ ರೈತ
20 ಗುಂಟೆ ಪ್ರದೇಶದಲ್ಲಿ 72 ರೀತಿಯ ರಾಗಿ ತಳಿ ಬೆಳೆದು ಸೈ ಎನಿಸಿಕೊಂಡ ಧಾರವಾಡದ ರೈತ
Updated By: ಆಯೇಷಾ ಬಾನು

Updated on: Jan 25, 2022 | 8:31 PM

ಧಾರವಾಡ: 20 ಗುಂಟೆ ಪ್ರದೇಶದಲ್ಲಿ 72 ರಾಗಿ ತಳಿ ಬೆಳೆಯಲಾಗಿದೆ. ಅದೂ ಸಹ ಬಿಳಿ ಜೋಳ ಬೆಳೆಯೋ ಪ್ರದೇಶದಲ್ಲಿ ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ ರೈತನೊಬ್ಬ 20 ಗುಂಟೆ ಪ್ರದೇಶದಲ್ಲಿ 72 ರಾಗಿ ತಳಿ ಬೆಳೆದಿದ್ದಾರೆ.

ಪ್ರಗತಿಪರ ರೈತ ಈಶ್ವರಗೌಡ ಪಾಟೀಲ, ಸಾವಯವ ಕೃಷಿ ಪದ್ಧತಿಯಲ್ಲಿ ಒಂದೇ ಕಡೆ ವೈವಿಧ್ಯಮಯ ರಾಗಿ ತಳಿ ಬೆಳೆದಿದ್ದಾರೆ. ಕೇವಲ 20 ಗುಂಟೆಯಲ್ಲಿ ಬರೋಬ್ಬರಿ 72 ತಳಿ ಬೆಳೆದು ರೈತ ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಸಿರಿ ಧಾನ್ಯಗಳ ಸಂರಕ್ಷಣೆಗೆ ಈಶ್ವರಗೌಡ ಪಾಟೀಲ ಕಂಕಣ ಕಟ್ಟಿ ನಿಂತಿದ್ದಾರೆ. ಸಾಮಾನ್ಯವಾಗಿ ಧಾರವಾಡ ಜಿಲ್ಲೆಯಲ್ಲಿ ಮಳೆಯಾಶ್ರಿತ ಬೆಳೆಗಳನ್ನೇ ಹೆಚ್ಚಾಗಿ ಹಾಕುತ್ತಾರೆ. ಅದರಲ್ಲಿಯೂ ಹಿಂಗಾರಿನಲ್ಲಿ ಜೋಳ ಇತ್ಯಾದಿ ಬೆಳೆ ಹಾಕೋದು ಸರ್ವೇಸಾಮಾನ್ಯ. ಇಂತಹ ಜೋಳ ಬೆಳೆಯೋ ಪ್ರದೇಶದಲ್ಲಿ ರಾಗಿ ಪ್ರಯೋಗ ನಡೆಸಲಾಗಿದೆ. ಕರ್ನಾಟಕ ಮತ್ತು ನೆರೆಯ ತೆಲಂಗಾಣ ರಾಜ್ಯಗಳಿಂದ ರಾಗಿ ತಳಿ ತರಿಸಿಕೊಂಡ ರೈತ ತನ್ನ ಹೊಲದಲ್ಲಿ ನಾಟಿ ಮಾಡಿದ್ದಾನೆ. ಅಳಿವಿನ ಅಂಚಿನಲ್ಲಿರೋ ರಾಗಿ ತಳಿ ಸಂರಕ್ಷಣೆಗೆ ರೈತ ಮುಂದಾಗಿದ್ದಾನೆ.

ರಾಗಿ ತಳಿ

ಹಾಗೆ ನೋಡಿದ್ರೆ ಉತ್ತರ ಕರ್ನಾಟಕ ಜೋಳ ಬೆಳೆಯೋಕೆ ಪ್ರಸಿದ್ಧಿ. ಅಂತಹ ಜೋಳ ಬೆಳೆಯೋ ಪ್ರದೇಶದಲ್ಲಿಯೇ ರಾಗಿ ಪ್ರಯೋಗ ಮಾಡೋ ಮೂಲಕ ಈಶ್ವರ್ ಗೌಡ ಎಲ್ಲರನ್ನು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾನೆ. ಸಾವಯವ ಪದ್ಧತಿಯಲ್ಲಿ ಒಂದೇ ಕಡೆ ವೈವಿಧ್ಯಮಯ ರಾಗಿ ಬೆಳೆ ಹಾಕಿದ್ದಾನೆ. ರಾಗಿಗೆ ತನ್ನದೇ ಆದ ಮಾರುಕಟ್ಟೆ ಸೃಷ್ಟಿ ಮಾಡಿಕೊಂಟಿದ್ದಾನೆ. ಜೇನುಗೌಡ್ರು ರಾಗಿ, ಬೆಣ್ಣೆ ಮುದ್ದೆ ರಾಗಿ, ಹಾಲು ಕುರುಳಿ ರಾಗಿ, ಉಂಡೆ ರಾಗಿ, ಮುಡಗ ರಾಗಿ, ದೊಡ್ಡ ರಾಗಿ, ರಾಗಳ್ಳಿ, ಶಿವಳ್ಳಿ ರಾಗಿ, ಜಗಳೂರು ರಾಗಿ ಇತ್ಯಾದಿ ವೆರೈಟಿಯನ್ನು ಒಂದೆ ಕಡೆ ಬೆಳೆಯಲಾಗಿದೆ. ಹೈದರಾಬಾದ್ ನ ಐಐಎಂಆರ್ ಸಂಸ್ಥೆ ಹಾಗೂ ಸಹಜ ಸಮೃದ್ಧಿ ಸಂಸ್ಥೆಯಿಂದ ರಾಗಿ ಬೀಜ ತರಿಸಿಕೊಂಡ ಈಶ್ವರಗೌಡ, ಬೀಜೋತ್ಪಾದನೆ ಮಾಡಿ ತಳಿಗಳನ್ನು ಸಂರಕ್ಷಿಸುತ್ತಿದ್ದಾರೆ. ರಾಗಿ ಬೀಜ ಕೇಳಿದವರಿಗೆ ಪೂರೈಕೆ ಮಾಡ್ತಿದಾರೆ.

ದೇಸಿ ತಳಿ ಉಳಿಸಿ ಬೆಳೆಸೋಕೆ ವಿನೂತನ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳೋ ತಳಿ ಹಾಕಲಾಗಿದೆ. ಜೀವ ವೈವಿಧ್ಯತೆ ಕಾಪಾಡೋ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ ರೈತ ಈಶ್ವರಗೌಡ ಪಾಟೀಲ. ಉತ್ತರ ಕರ್ನಾಟಕದ ರೈತನಿಂದ ಆರೋಗ್ಯಕ್ಕೆ ಪೂರಕವಾದ ರಾಗಿ ಬಳಸುವ ಪ್ರಯತ್ನ ನಡೆದಿದೆ. ರೈತ ಈಶ್ವರ್ ಗೌಡ ಬೆಂಬಲಕ್ಕೆ ಸಹಜ ಸಮೃದ್ಧ ಸಂಸ್ಥೆ ನಿಂತಿದೆ. ದೇಶದ ವಿವಿಧೆಡೆ ಸಿಗೋ ರಾಗಿ ತಳಿಗಳನ್ನು ತಂದುಕೊಟ್ಟಿರೋ ಸಹಜ ಸಮೃದ್ಧ ಸಂಸ್ಥೆ, ಅದರ ಬೆಳೆಗವಣಿಗೆಗೆ ಪೂರಕವಾದ ಮಾಹಿತಿ ನೀಡಿ, ಮಾರ್ಗದರ್ಶನ ಮಾಡುತ್ತಿದೆ. ಈಶ್ವರ್ ಗೌಡರ ಪ್ರಯತ್ನಕ್ಕೆ ಸಹಜ ಸಮೃದ್ಧ ಸಂಸ್ಥೆ ಪ್ರತಿನಿಧಿ ನಿಶಾಂತ್ ಬಂಕಾಪುರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಪ್ರಯೋಗವನ್ನು ಬೇರೆ ರೈತರ ಮೂಲಕವೂ ಅನುಷ್ಠಾನಗೊಳಿಸಿ, ರಾಗಿ ತಳಿಗಳ ಸಂರಕ್ಷಣೆ ಮಾಡಲಿರೋದಾಗಿಯೂ ಅವರು ತಿಳಿಸಿದ್ದಾರೆ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಧಾರವಾಡ

ಇದನ್ನೂ ಓದಿ: ಚಿಕ್ಕಮಗಳೂರು: ರಾಗಿ ಬೆಳೆದ ರೈತರಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿದ ಸಂಕಷ್ಟ; ವಿಶೇಷ ವರದಿ ಇಲ್ಲಿದೆ