ಚಿಕ್ಕಮಗಳೂರು: ರಾಗಿ ಬೆಳೆದ ರೈತರಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿದ ಸಂಕಷ್ಟ; ವಿಶೇಷ ವರದಿ ಇಲ್ಲಿದೆ

ರಾಗಿಯನ್ನು ಬೆಳೆದ ರೈತರು ಉತ್ತಮ ಬೆಲೆ ಇಲ್ಲದೇ ಪರದಾಡುವಂತಾಗಿದೆ. ಹೊರಗಡೆ ಮಾರುಕಟ್ಟೆಯಲ್ಲಿ ಒಳ್ಳೆ ರೇಟ್ ಸಿಗದಿದ್ರೇನು, ಸರ್ಕಾರವಾದ್ರೂ ನಮ್ಮ ಬೆಳೆಗೆ ಬೆಂಬಲ ಬೆಲೆ ಕೊಡುತ್ತಲ್ವಾ ಅಂದುಕೊಂಡಿದ್ದ ರೈತರಿಗೆ, ಸಂಕಷ್ಟ ಎದುರಾಗಿದೆ.

ಚಿಕ್ಕಮಗಳೂರು: ರಾಗಿ ಬೆಳೆದ ರೈತರಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿದ ಸಂಕಷ್ಟ; ವಿಶೇಷ ವರದಿ ಇಲ್ಲಿದೆ
ರಾಗಿ ಬೆಳೆ
Follow us
TV9 Web
| Updated By: ganapathi bhat

Updated on: Jan 09, 2022 | 7:05 PM

ಚಿಕ್ಕಮಗಳೂರು: ರಾಗಿ ಬೆಳೆಯನ್ನು ಬಡವರ ಬಂಧು ಎಂದೇ ಕರೆಯಲಾಗುತ್ತದೆ. ರಾಗಿ ಊಟ ಮಾಡಿದ್ರೆ ಹೊಟ್ಟೆ ತಣ್ಣಗೆ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅದೇ ರಾಗಿಯನ್ನು ಬೆಳೆದ ರೈತರು ಉತ್ತಮ ಬೆಲೆ ಇಲ್ಲದೇ ಪರದಾಡುವಂತಾಗಿದೆ. ಹೊರಗಡೆ ಮಾರುಕಟ್ಟೆಯಲ್ಲಿ ಒಳ್ಳೆ ರೇಟ್ ಸಿಗದಿದ್ರೇನು, ಸರ್ಕಾರವಾದ್ರೂ ನಮ್ಮ ಬೆಳೆಗೆ ಬೆಂಬಲ ಬೆಲೆ ಕೊಡುತ್ತಲ್ವಾ ಅಂದುಕೊಂಡಿದ್ದ ರೈತರಿಗೆ, ಸಂಕಷ್ಟ ಎದುರಾಗಿದೆ. ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ಸರ್ಕಾರ ಮಾಡಿರುವ ಮೋಸವಾದರೂ ಏನು ಅಂತೀರಾ. ಇಲ್ಲಿದೆ ವಿವರ.

ಈ ಬಾರಿ ಕಂಡು ಕೇಳರಿಯದಂತಹ ಮಳೆ ಬಂದಿತ್ತು. ಜೀವಮಾನದಲ್ಲೇ ನಾವು ಈ ರೀತಿಯ ಮಳೆಯನ್ನ ನೋಡಿರಲಿಲ್ಲ. ಮಲೆನಾಡನ್ನೇ ಸೈಡ್ ಹೊಡೆಯುವಂತಹ ಮಳೆಯನ್ನು ಬಯಲುಸೀಮೆ ಭಾಗದಲ್ಲಿ ಕಂಡ ಜನರು ಬೆಕ್ಕಸಬೆರಗಾಗಿದ್ರು. ಇಂತಹ ರಣಭೀಕರ ಮಳೆ ಬಂದಾಗಲೂ ಹರಸಾಹಸ ಪಟ್ಟು ರೈತರು ರಾಗಿ ಬೆಳೆಯನ್ನು ಉಳಿಸಿಕೊಂಡಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ದಾಟಿ ಉಳಿಸಿಕೊಂಡಿದ್ದ ಬೆಳೆ ಕೊನೆಗೂ ಮಾರಾಟಕ್ಕೆ ತಯಾರಾಗಿದೆ. ಸದ್ಯ ರಾಗಿ ಬೆಳೆಯನ್ನು ಮಾರಾಟ ಮಾಡಲು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ರೈತರು ಸಿದ್ದರಾಗಿದ್ದಾರೆ.

ಜಿಲ್ಲೆಯ ಕಡೂರು-ಅಜ್ಜಂಪುರ ತಾಲೂಕಿನಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗುತ್ತದೆ. ಆದರೆ ಈ ವರ್ಷ ಕಂಡು ಕೇಳರಿದಂತೆ ಸುರಿದ ಮಳೆಯಿಂದ ರೈತರು ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ತಾವು ಜೀವಮಾನದಲ್ಲೇ ನೋಡದಂತಹ ಮಳೆಯನ್ನ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ನೋಡಿದ್ದಾರೆ. ಮಳೆ ಬಂದದ್ದು ಖುಷಿಯಾದ್ರೂ ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಆದ ಹಾನಿಗೆ ಬೆಲೆ ಕಟ್ಟಲಾಗದ್ದು. ಇಷ್ಟಾದ್ರೂ ಉತ್ತಿ-ಬಿತ್ತಿದ ಬೆಳೆಯನ್ನ ಹರಸಾಹಸ ಪಟ್ಟು ಅನ್ನದಾತರು ಉಳಿಸಿಕೊಂಡಿದ್ದರು.

Ragi Raagi Crop

ರಾಗಿ ಬೆಳೆ ಜತೆಗೆ ರೈತರು

ಬೆಂಬಲ ಬೆಲೆ 50 ಕ್ವಿಂಟಾಲ್​ನಿಂದ 20ಕ್ವಿಂಟಾಲ್​ಗೆ ಇಳಿಕೆ ಒಂದು ಎಕರೆಗೆ 15 ಕ್ವಿಂಟಾಲ್ ಫಸಲು ತೆಗೆಯುತ್ತಿದ್ದ ರೈತರು ಅಕಾಲಿಕ ಮಳೆಯ ಹೊಡೆತದಿಂದ ಕೇವಲ 10 ಕ್ವಿಂಟಾಲ್ ರಾಗಿ ಫಸಲು ಪಡೆಯುಂತಾಗಿದೆ. ಇದು ಒಂದು ಕಡೆಯಾದ್ರೆ ಇನ್ನೊಂದೆಡೆ ಒಂದು ಎಕರೆ ರಾಗಿ ಬೆಳೆಯಲು 25-30 ಸಾವಿರ ಖರ್ಚು ಮಾಡಿರೋ ರೈತರಿಗೆ ಸರ್ಕಾರದ ಒಂದು ಆದೇಶ ಬರಸಿಡಿಲು ಬಡಿದಂತಾಗಿದೆ. ಇಲ್ಲಿಯವರೆಗೂ ಸರ್ಕಾರ ಪ್ರತಿ ರೈತನಿಗೆ 50 ಕ್ವಿಂಟಾಲ್ ರಾಗಿ ಬೆಳೆಗೆ ಬೆಂಬಲ ಬೆಲೆ ಕೊಡ್ತಿತ್ತು. ಆದ್ರೆ ಈ ವರ್ಷ ಪ್ರತಿ ರೈತನಿಗೆ ಕೇವಲ 20 ಕ್ವಿಂಟಾಲ್​ಗೆ ಬೆಂಬಲ ಬೆಲೆ ಕೊಡುವುದಾಗಿ ಆದೇಶ ಮಾಡಿರೋದು ಮೊದಲೇ ಕಷ್ಟದಲ್ಲಿದ್ದ ರೈತರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ. ಹೀಗಾಗಿ ರೈತರು ಸರ್ಕಾರದ ನಿರ್ಧಾರದ ವಿರುದ್ಧ ಕೆಂಡಾಮಂಡಲವಾಗಿದ್ದು, ರಾಗಿ ಬೆಳೆದ ರೈತರ ಬಾಳಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಬಲ ಬೆಲೆ 3,337 ರೂಪಾಯಿ, ಹೊರಗಡೆ ಕೇವಲ 2,000 ರೂಪಾಯಿ! ಪ್ರತಿ ಕ್ವಿಂಟಾಲ್​ಗೆ 3,337 ರೂಪಾಯಿ ಬೆಂಬಲ ನೀಡುವುದಾಗಿ ಹೇಳಿರುವ ಸರ್ಕಾರ, ಮಿತಿಯನ್ನು ಕೇವಲ 20 ಕ್ವಿಂಟಾಲ್​ಗೆ ನಿಗದಿ ಮಾಡಿದೆ. ಹೊರಗಡೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ ಕೇವಲ 2,000 ರೂ ಬೆಲೆಯನ್ನು ಪಡೆಯೋದಕ್ಕೂ ರೈತರು ಸರ್ಕಸ್ ಮಾಡಬೇಕಿದೆ. ರಾಗಿ ಬೆಳೆಯನ್ನು ಇತ್ತಿಚೀಗೆ ತೀರಾ ಸಣ್ಣ ರೈತರು ಖರ್ಚು ಜಾಸ್ತಿ ಬರುತ್ತೆ ಎಂಬ ಕಾರಣಕ್ಕೆ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಈ ಮಧ್ಯೆ ಕನಿಷ್ಠ 2 ರಿಂದ 5 ಎಕರೆವರೆಗೆ ಇರುವ ಸಣ್ಣ ರೈತರು, ನಾಲ್ಕು ಕಾಸು ಉಳಿಯಬಹುದು ಎಂದು ಮನಸ್ಸು ಮಾಡಿ ರಾಗಿ ಕೃಷಿಯನ್ನು ಮಾಡುತ್ತಿದ್ದಾರೆ. ಈ ಬಾರಿ ಬಂದ ಮಳೆ ಅದಕ್ಕೂ ಕೂಡ ಕಲ್ಲು ಹಾಕಿದೆ, ಕೊನೆಪಕ್ಷ ಸರ್ಕಾರವಾದ್ರೂ ಕೈ ಹಿಡಿಯುತ್ತೆ ಅಂದುಕೊಂಡಿದ್ದ ರೈತರಿಗೆ, ಇಲ್ಲಿಯವರೆಗೆ ಇದ್ದ ನಿಯಮವನ್ನ ತೆಗೆದು 50 ರಿಂದ 20ಕ್ಕೆ ಇಳಿಸಿರೋದು ಆಕ್ರೋಶ ಮೂಡಿಸಿದೆ.

Rain Farmer Crop Loss

ಮಳೆಯಿಂದ ಹಾನಿಯಾಗಿದ್ದ ರಾಗಿ ಬೆಳೆ

ಕೈ ಹಿಡಿಯಬೇಕಾದ ಸರ್ಕಾರ ಕೈ ಎತ್ತಿದ್ಯಾಕೆ? ಮೊದಲೇ ಮಳೆಯಿಂದ ಬೆಳೆಯನ್ನು ಕಳೆದುಕೊಂಡಿದ್ದ ರೈತರ ನೆರವಿಗೆ ಸರ್ಕಾರ ಧಾವಿಸಬೇಕಿತ್ತು. ರೈತರ ಕೈ ಹಿಡಿಯುವ ದೊಡ್ಡ ಮನಸ್ಸು ಮಾಡದಿದ್ರೂ ಕೊನೆಪಕ್ಷ ಸುಮ್ಮನಿರಬಹುದಿತ್ತು. ಕಳೆದ ವರ್ಷದ ತನಕ ಪ್ರತಿ ರೈತನಿಗೆ ಹೇಗೆ 50 ಕ್ವಿಂಟಾಲ್ ವರೆಗೆ ಬೆಂಬಲ ಬೆಲೆ ನೀಡ್ತಿತ್ತೋ ಹಾಗೆ ಮುಂದುವರಿಸಬಹುತ್ತಿತ್ತು. ಆದರೆ ಈಗ ಸಾಲ ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಒಂದು ಕಡೆ ಮಳೆ ಹೊಡೆತ ಕೊಟ್ರೆ, ಇನ್ನೊಂದೆಡೆ ಸರ್ಕಾರ ಮತ್ತೊಂದು ಪೆಟ್ಟು ಕೊಟ್ಟು ರೈತರಿಗೆ ದ್ರೋಹ ಮಾಡಿದಂತಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ ಮಾನಸಿಕ ಧೈರ್ಯ ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಸಹಕಾರ ನೀಡಬೇಕಿತ್ತು. ಆದ್ರೆ ಇದೀಗ ಇದ್ದಿದ್ದನ್ನೂ ಕಿತ್ತುಕೊಂಡಿರೋದು, ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಲಿಲ್ಲ ಅಂದ್ರೆ ಉಗ್ರ ಪ್ರತಿಭಟನೆ ಮಾಡೋದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

“ಈ ಬಾರಿ ನಮ್ಮಲ್ಲಿ ಅತಿ ಹೆಚ್ಚು ಮಳೆಯಾಗಿದ್ರೂ ಹೇಗೋ ಕಷ್ಟಪಟ್ಟು ರಾಗಿ ಬೆಳೆಯನ್ನ ನಮ್ಮ ರೈತರು ಉಳಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಈ ಬಾರಿ ಸರ್ಕಾರವೇ ರೈತರ ನೆರವಿಗೆ ನಿಲ್ಲಬೇಕಾಗಿತ್ತು. ಆದ್ರೆ ಪ್ರತಿ ರೈತನಿಗೆ 50 ಕ್ವಿಂಟಾಲ್ ರಾಗಿಯನ್ನ 20 ಕ್ವಿಂಟಾಲ್ಗೆ ಇಳಿಸಿರೋದು ಅನ್ಯಾಯ. ಕೂಡಲೇ ಸರ್ಕಾರ ಹಿಂದೆ ಇದ್ದ ನಿಯಮವನ್ನಾದ್ರೂ ಪಾಲಿಸಬೇಕು. ಇಲ್ಲದಿದ್ದರೆ ರೈತರು ಉಗ್ರ ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಚನ್ನಾಪುರ, ಅಜ್ಜಂಪುರದ ರೈತ ಸಿದ್ದೇಗೌಡ ಎಂಬವರು ಹೇಳಿದ್ದಾರೆ.

ವಿಶೇಷ ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್ ನ್ಯೂಸ್; ಚಿಕ್ಕಮಗಳೂರು-ಬೆಂಗಳೂರು ರೈಲು ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ

ಇದನ್ನೂ ಓದಿ: ಚಿಕ್ಕಮಗಳೂರು: ರಸ್ತೆ ಬದಿ ಕಸ ಎಸೆಯುತ್ತಿದ್ದ ಯುವಕನಿಗೆ ಸಿಟಿ ರವಿ ತರಾಟೆ