Crime News: ಪ್ರವಾಹ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ 20 ಸಿಬ್ಬಂದಿ ಅಮಾನತು, ಚಿನ್ನದ ಸರವಿದ್ದ ಬ್ಯಾಗ್ ಕಳವು, ವಿಷ ಸೇವಿಸಿ ದಂಪತಿ ಆತ್ಮಹತ್ಯೆ
2019ರ ಪ್ರವಾಹ ಸಂದರ್ಭದಲ್ಲಿ ಅಥಣಿ ತಾಲೂಕಿನಾದ್ಯಂತ ನಡೆದ ಕಾಮಗಾರಿಗಳಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿ ಬಂದಿತ್ತು
ಬೆಳಗಾವಿ: ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಹೆಸ್ಕಾಂನ 20 ಸಿಬ್ಬಂದಿಯನ್ನು ಪ್ರಧಾನ ವ್ಯವಸ್ಥಾಪಕರು ಅಮಾನತು ಮಾಡಿದ್ದಾರೆ. ಈ ಪೈಕಿ ಐವರು ಐವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು, ಇಬ್ಬರು ಲೆಕ್ಕಾಧಿಕಾರಿಗಳು, 13 ಮಂದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ಗಳು ಇದ್ದಾರೆ. ಏಪ್ರಿಲ್ 2018ರಿಂದ ಅಗಸ್ಟ್ 2019ರ ಅವಧಿಯಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14, 2021ರಂದು ಅಥಣಿ ವಿಭಾಗಕ್ಕೆ ಭೇಟಿ ನೀಡಿದ್ದ ಹೆಸ್ಕಾಂ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸಿದ್ದರು. ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆ ನಡೆದಿದೆ. ಅಪೂರ್ಣ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. 2019ರ ಪ್ರವಾಹ ಸಂದರ್ಭದಲ್ಲಿ ಅಥಣಿ ತಾಲೂಕಿನಾದ್ಯಂತ ನಡೆದ ಕಾಮಗಾರಿಗಳಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿ ಬಂದಿತ್ತು. ಆಂತರಿಕ ತನಿಖೆಯಲ್ಲಿಯೂ ಇವರ ಅಕ್ರಮ ದೃಢಪಟ್ಟಿತ್ತು.
ಅಸಭ್ಯ ವರ್ತನೆ: ಮಹಿಳೆಯಿಂದ ಗೂಸಾ ತುಮಕೂರು: ನಗರದ ಕೋಡಿಬಸವೇಶ್ವರ ಸರ್ಕಲ್ ಬಳಿ ಆಟೊದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಆಕೆಯೇ ಥಳಿಸಿದ್ದಾರೆ. ಸಾರ್ವಜನಿಕರ ನೆರವಿನಿಂದ ಪೊಲೀಸರಿಗೆ ಒಪ್ಪಿಸಲು ಪ್ರಯತ್ನಿಸುವ ವೇಳೆ ಆತ ಪರಾರಿಯಾಗಿದ್ದಾನೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತುಮಕೂರಿನಲ್ಲಿ ಶೇರ್ ಆಟೊಗಳಿದ್ದು, ಹಲವು ಪ್ರಯಾಣಿಕರು ಸಂಚಾರಕ್ಕೆ ಅವನ್ನೇ ಅವಲಂಬಿಸಿದ್ದಾರೆ. ಈ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಕಿರುಕುಳ ಕೊಟ್ಟಿದ್ದಾನೆ. ತಕ್ಷಣ ಆಟೊ ನಿಲ್ಲಿಸಿದ ಮಹಿಳೆ, ಸಾರ್ವಜನಿಕರ ಗಮನ ಸೆಳೆದು, ಗೂಸಾ ಕೊಟ್ಟರು.
ರೈಲ್ವೆ ಹಳಿ ಮೇಲೆ ಯುವಕನ ಶವ ಪತ್ತೆ ಕಲಬುರಗಿ: ಸಾವಳಗಿ-ಬಬಲಾದ್ ಬಳಿ ರೈಲು ಹಳಿಯ ಮೇಲೆ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ. ದುಷ್ಕರ್ಮಿಗಳು ಬೇರೆಲ್ಲೋ ಇವರನ್ನು ಕೊಲೆ ಮಾಡಿ ಹಳಿಯ ಮೇಲೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗುರುತು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಚಿನ್ನದ ಸರವಿದ್ದ ಬ್ಯಾಗ್ ಕಳವು ಬೆಂಗಳೂರು: ನಗರ ಹೊರವಲಯದ ಮಾದವಾರದಲ್ಲಿ ಓಮೇಶ್ ಎಂಬಾತನ ಗಮನ ಬೇರೆಡೆ ಸೆಳೆದು ₹ 3 ಲಕ್ಷ ನಗದು, ಚಿನ್ನದ ಸರವಿದ್ದ ಬ್ಯಾಗ್ ಕಸಿದು ಕಳ್ಳರು ಪರಾರಿಯಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ನೈಸ್ ರಸ್ತೆ ಬಳಿಯ ಮಾದವಾರದಲ್ಲಿ ಘಟನೆ ನಡೆದಿದೆ. ಟೀ ಅಂಗಡಿ ಬಳಿ ನಿಂತಿದ್ದ ಕಾರಿನ ಮೇಲೆ ಬಣ್ಣ ಚೆಲ್ಲಿದ ನಾಲ್ವರು ದುಷ್ಕರ್ಮಿಗಳು ಓಮೇಶ್ ಗಮನವನ್ನು ಬೇರೆಡೆ ಸರಿಯುವಂತೆ ಮಾಡಿದ್ದರು. ಟೀ ಅಂಗಡಿ ಮಾಲಿಕನೂ ಆಗಿರುವ ಓಮೇಶ್ ಕಾರಿನ ಮೇಲೆ ಬಿದ್ದಿದ್ದ ಬಣ್ಣ ಒರೆಸುವ ಸಲುವಾಗಿ ಅಂಗಡಿ ಬಿಟ್ಟು ತೆರಳಿದಾಗ ಕೃತ್ಯ ನಡೆದಿದೆ. ಸಂಬಂಧಿಯೊಬ್ಬರಿಗೆ ಕೊಡಲೆಂದು ಬ್ಯಾಂಕ್ನಿಂದ ಹಣ ತಂದು ಅಂಗಡಿಯಲ್ಲಿ ಇಟ್ಟುಕೊಂಡಿದ್ದರು. ಹಣ ಕದ್ದು ಪರಾರಿಯಾಗುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಓಜಿ ಕುಪ್ಪಂ ಗ್ಯಾಂಗ್ ಕೃತ್ಯ ಇರಬಹುದು ಎಂದು ಮಾದನಾಯಕನಹಳ್ಳಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ ಮೈಸೂರು: ಆರ್ಥಿಕ ಸಮಸ್ಯೆಯಿಂದ ನೊಂದಿದ್ದ ಗಂಡ-ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ನಗರದ ಸಾತಗಹಳ್ಳಿಯಲ್ಲಿ ಬುಧವಾರ ನಡೆದಿದೆ. ಸಂತೋಷ್ (26), ಭವ್ಯಾ (22) ಮೃತರು. ಮನೆಯಲ್ಲಿಯೇ ಊಟದಲ್ಲಿ ವಿಷ ಬೆರೆಸಿಕೊಂಡು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.
ಕೊವಿಡ್ ನಿಯಮ ಉಲ್ಲಂಘನೆ: ಶಾಸಕನ ಮೇಲೆ ಎಫ್ಐಆರ್ ದಾಖಲು ಬೀದರ್: ಕೊವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಸವಕಲ್ಯಾಣದಿಂದ ಗೋಕುಳ ಗ್ರಾಮದವರೆಗೆ ನಡೆದ ಪಾದಯಾತ್ರೆಯಲ್ಲಿ ಶಾಸಕರು ಕೊವಿಡ್ ನಿಯಮ ಉಲ್ಲಂಘಿಸಿ ಪಾಲ್ಗೊಂಡಿದ್ದರು. ಮಾಸ್ಕ್ ಧರಿಸದೆ, ದೈಹಿಕ ಅಂತರ ಉಲ್ಲಂಘಿಸಿ ಮೂವರು ಕಾರ್ಯಕರ್ತರ ಜೊತೆಗೆ ಶಾಸಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತರು ನೀಡಿರುವ ದೂರು ಆಧರಿಸಿ ಎಫ್ಐಆರ್ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ ಧಾರವಾಡ: ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಬುಧವಾರ ನಡೆದಿದೆ. ಸ್ಟೇರಿಂಗ್ ಕಟ್ ಆದ ಕಾರಣ ಬಸ್ ಮೇಲೆ ಚಾಲಕನ ನಿಯಂತ್ರಣ ತಪ್ಪಿ, ನವಲಗುಂದದ ಬೆಣ್ಣಿಹಳ್ಳದ ಬ್ರಿಡ್ಜ್ ಬಳಿ ಪಲ್ಟಿಯಾಯಿತು. ಗಾಯಗೊಂಡ ಪ್ರಯಾಣಿಕರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ವೃದ್ಧನಿಗೆ ಗಂಭೀರ ಗಾಯಗಳಾಗಿವೆ. ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರಿಗೆ ನೆರವಾದರು.
ಇದನ್ನೂ ಓದಿ: ಎಪಿಎಂಸಿ ವ್ಯಾಪ್ತಿಯ ಮನೆಗಳ ಕರೆಂಟ್ ಕಟ್; ಹೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ