ಧಾರವಾಡ, ಮಾರ್ಚ್ 20: ಒಂಡೆಡೆ ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ (Gold Smuggling) ಕೇಸ್ ಸದ್ದು ಮಾಡುತ್ತಿರುವ ಸಮಯದಲ್ಲಿಯೇ ಕರ್ನಾಟಕದಲ್ಲಿರುವ ಚಿನ್ನದ ನಿಕ್ಷೇಪಗಳ ಪತ್ತೆ ಮತ್ತು ಗಣಿಗಾರಿಕೆಗೆ (mining) ಅನುಮತಿ ಕೊಡಬೇಕೆನ್ನುವ ವಿಚಾರವೂ ಮುನ್ನೆಲೆಗೆ ಬಂದಿದೆ. ಈ ವಿಚಾರ ಮುನ್ನಲೆಗೆ ಬರುತ್ತಿದ್ದಂತೆಯೇ ಧಾರವಾಡ ತಾಲೂಕಿನ ಅದೊಂದು ಗ್ರಾಮದ ಜನರು ಮತ್ತು ರೈತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಚಿನ್ನದ ನಿಕ್ಷೇಪಕ್ಕೂ, ಆ ಗ್ರಾಮಕ್ಕೂ ಏನು ಸಂಬಂಧ ಅನ್ನೋದರ ಬಗ್ಗೆ ಸಂಪೂರ್ಣ ವರದಿಯೊಂದು ಇಲ್ಲಿದೆ ಓದಿ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಗೋಮಾಳ ಮತ್ತು ಅದರ ಅಕ್ಕಪಕ್ಕದಲ್ಲಿರುವ ಪಕ್ಕಾ ಕೆಂಪು ಮಸಾರಿ ಮಣ್ಣಿನ ಪ್ರದೇಶದ ಮೇಲೆಯೇ ಚಿನ್ನದ ಗಣಿಗಾರಿಕೆಯ ಕಣ್ಣು ಬಿದ್ದು 25 ವರ್ಷದ ಮೇಲಾಯ್ತು. 2001ರಿಂದ ಐದಾರು ಸಲ ಬೇರೆ ಬೇರೆ ಕಂಪನಿಗಳು ಇಲ್ಲಿಗೆ ಬಂದು ಮಣ್ಣಿನ ಮಾದರಿ ಸಂಗ್ರಹಿಸಿಕೊಂಡು ಹೋಗಿವೆ. ಆದರೆ ಯಾವ ಕಂಪನಿಯೂ ಮೈನಿಂಗ್ ಮಾಡೋಕೆ ಮುಂದೆ ಬಂದಿಲ್ಲ. ಆದರೆ ಆಗಾಗ ರಾಜ್ಯದಲ್ಲಿನ ಚಿನ್ನದ ನಿಕ್ಷೇಪಗಳ ವಿಚಾರ ಬಂದಾಗಲೆಲ್ಲ ಈ ಮಂಗಳಗಟ್ಟಿಗೆ ಮತ್ತೆ ಬೇರೊಂದು ಕಂಪನಿ ಬರಬಹುದು. ಮತ್ತೆ ನಮ್ಮೂರಿನ ಮೇಲೆ ಗಣಿಗಾರಿಕೆಯ ತೂಗುಗತ್ತಿ ನೇತಾಡಬಹುದು ಅನ್ನೋ ಆತಂಕದಲ್ಲಿಯೇ ಮಂಗಳಗಟ್ಟಿ ಗ್ರಾಮಸ್ಥರಿದ್ದಾರೆ.
ಇದನ್ನೂ ಓದಿ: ಕೆಜಿಎಫ್ನಲ್ಲಿವೆ ಸಾಕಷ್ಟು ಚಿನ್ನದ ನಿಕ್ಷೇಪಗಳು! ಸಂಶೋಧನೆಗಳಿಂದ ತಿಳಿದುಬಂತು ಅಚ್ಚರಿಯ ಅಂಶ
ಇಲ್ಲಿರುವ ಗೋಮಾಳ 39 ಎಕರೆ ಇದರೆ, ಅದರ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿಯೂ ಚಿನ್ನದ ನಿಕ್ಷೇಪ ಇದೆ ಎನ್ನಲಾಗಿದೆ. ಆದರೆ ಸರ್ಕಾರ ಚಿನ್ನದ ಗಣಿಗಾರಿಕೆ ಯೋಜನೆಯಿಂದ ಈ ಗ್ರಾಮ ಕೈ ಬಿಟ್ಟಿರೋದಾಗಿ ಇಂದಿಗೂ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ ಈಗ ಮತ್ತೆ ಐದಾರು ಜಿಲ್ಲೆಗಳಲ್ಲಿನ ಚಿನ್ನದ ನೀಕ್ಷೆಪದ ಹುಡುಕುತ್ತಿರೋ ಸುದ್ದಿಯಾಗಿದ್ದು, ಈಗ ಮತ್ತೆ ಮಂಗಳಗಟ್ಟಿಗೆ ಮೈನಿಂಗ್ನವರು ಬರಬಹುದು ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.
ಇನ್ನು ಈ ಮಂಗಳಗಟ್ಟಿ ಚಿನ್ನದ ಗಟ್ಟಿಯಾಗುತ್ತೆ ಅಂತಾ 1973ರಲ್ಲಿ ರಂಭಾಪುರ ಜಗದ್ಗುರುಗಳು ಈ ಗ್ರಾಮಕ್ಕೆ ಬಂದಾಗ ಭವಿಷ್ಯವಾಣಿ ನುಡಿದಿದ್ದರಂತೆ. ಅದು 2001ರ ಹೊತ್ತಿಗೆ ನಿಜವೂ ಆಗಿದೆ. 2001ರಿಂದ ಇಲ್ಲಿನ ಚಿನ್ನದ ನಿಕ್ಷೇಪ ಹುಡುಕುವ ಸಂಶೋಧನೆಗಳೂ ಶುರುವಾಗಿವೆ. 2012ರಿಂದ 2021ರವರೆಗೂ ಡೆಕ್ಕನ್ ಮೈನಿಂಗ್ ಕಂಪನಿ ಸೇರಿದಂತೆ ಅನೇಕ ಕಂಪನಿಗಳು ಇಲ್ಲಿನ ಮಣ್ಣಿನ ಮಾದರಿ ಕೊಂಡೊಯ್ದಿವೆ. ಮಾಹಿತಿ ಪ್ರಕಾರ ಈಲ್ಲಿನ ಒಂದು ಟನ್ ಮಣ್ಣಿನಲ್ಲಿ 1.33 ಗ್ರಾಮ್ ಚಿನ್ನ ಬರುತ್ತೆ ಅಂತಾನೂ ಹೇಳುತ್ತಾರೆ. ಆದರೆ ಯಾವುದೂ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.
ಆಸ್ಟ್ರೇಲಿಯಾ ಮೂಲದ ಕಂಪನಿಗಳು ಕೂಡ ಇಲ್ಲಿನ ಮಣ್ಣು ಪರೀಕ್ಷೆ ಮಾಡಿವೆ. ಯಾವಾಗ ಚಿನ್ನದ ಗಣಿಗಾರಿಕೆಯ ಕಂಪನಿಗಳು ಮಂಗಳಗಟ್ಟಿಗೆ ಕಾಲಿಟ್ಟವೂ ಆಗಿನಿಂದಲೇ ಇಂದಲ್ಲ ನಾಳೆ ನಮ್ಮ ಜಮೀನು ಹೋಗಿಯೇ ಹೋಗುತ್ತೆ ಅನ್ನೋ ಗೊಂದಲದ ಆತಂಕದಲ್ಲಿ ಇಲ್ಲಿನ ರೈತರಿದ್ದಾರೆ. ಇಲ್ಲಿರೋದು ಫಲವತ್ತಾದ ಭೂಮಿ. ಮಾವಿನ ತೋಟದಂತಹ ಬಹುವಾರ್ಷಿಕ ಬೆಳೆಗಳನ್ನು ಮಾಡಬಹುದು. ಆದರೆ ಯಾವಾಗ ಈ ಭೂಮಿ ಕೈ ತಪ್ಪಿ ಹೋಗುತ್ತೋ ಗೊತ್ತಿಲ್ಲ. ಹೀಗಾಗಿ ಅಂತಹ ದೊಡ್ಡ ಬೆಳೆ ತೆಗೆಯುವ ಸಾಹಸಕ್ಕೆ ಇಲ್ಲಿನ ರೈತರು ಹೋಗಿಲ್ಲ. ಹೀಗಾಗಿ ಸರ್ಕಾರ ಜಮೀನು ತೆಗೆದುಕೊಳ್ಳುತ್ತೋ ಇಲ್ಲವೋ ಅನ್ನೋದನ್ನು ಒಮ್ಮೆ ಸ್ಪಷ್ಟಪಡಿಸಬೇಕು. ತೆಗೆದುಕೊಳ್ಳುವುದೇ ಆದರೆ ಒಂದು ಎಕರೆಗೆ ಒಂದೂವರೆ ಕೋಟಿ ರೂಪಾಯಿ ದರ ಕೊಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
ಸದ್ಯ ಮಂಗಳಗಟ್ಟಿ ಗ್ರಾಮ ಚಿನ್ನದ ಗಟ್ಟಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇಂದಲ್ಲ, ನಾಳೆ ನಮ್ಮ ಜಮೀನು ಗಣಿ ಕಂಪನಿಗಳಿಗೆ ಹೋಗುತ್ತೆ ಅನ್ನೋ ಆತಂಕ ಮಾತ್ರ ಗ್ರಾಮಸ್ಥರಲ್ಲಿ ದೂರವಾಗಿಲ್ಲ. ಹೀಗಾಗಿ ನಮ್ಮ ಈ ಗೊಂದಲವನ್ನು ಸರ್ಕಾರ ದೂರ ಮಾಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.