ಕರಸೇವಕನ ಸಂಕಷ್ಟ: ಅಂದು ಅಯೋಧ್ಯೆಯಲ್ಲಿ ಲಾಠಿ ಏಟು ತಿಂದು ಧಾರವಾಡಕ್ಕೆ ವಾಪಸಾಗಿದ್ದ ಗುರುನಾಥ ಕುಲಕರ್ಣಿ ಇಂದು ದುಃಸ್ಥಿತಿಯಲ್ಲಿದ್ದಾರೆ
ಅಂದು ಅಯೋಧ್ಯೆಯಲ್ಲಿ ಲಾಠಿ ಏಟು ತಿಂದು ಆಸ್ಪತ್ರೆ ಸೇರಿದ್ದರು, ಅಲ್ಲಿನ ಸ್ಥಳೀಯ ಪತ್ರಿಕೆಗಳು ಅಯೋಧ್ಯೆ ಗಲಾಟೆಯಲ್ಲಿ ಗುರುನಾಥ ಕುಲಕರ್ಣಿ ಸಾವು ಅಂತಾನೆ ಸುದ್ದಿ ಆಗಿತ್ತು. ಆದರೆ ನಾಲ್ಕು ತಿಂಗಳ ಬಳಿಕ ಚೇತರಿಸಿಕೊಂಡು ಮರಳಿ ಧಾರವಾಡಕ್ಕೆ ಬಂದಾಗ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗಿತ್ತು. ಅದಾದ ಮೇಲೆ ಜೀವನದುದ್ದಕ್ಕೂ ಅವರು ನೋವುಂಡು ಬದುಕುತ್ತಿದ್ದಾರೆ.
-ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಇಡಿ ದೇಶವೇ ಜನವರಿ 22ರ ಶುಭ ದಿನಕ್ಕಾಗಿ ಕಾತುರದಿಂದ ಕಾಯುತ್ತಿದೆ. ಆದರೆ ಈ ಸಂಭ್ರಮದ ಹಿಂದೆ ಅನೇಕ ಕರಸೇವಕರ ತ್ಯಾಗ ಬಲಿದಾನದ ಅಡಗಿದೆ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ. ಅಂತಹ ಒಬ್ಬ ಧಾರವಾಡದ ಕರಸೇವಕ ವಿವಾದಿತ ಕಟ್ಟಡ ತೆರವು ಕಾರ್ಯಾಚರಣೇಯಲ್ಲಿ ಪಾಲ್ಗೊಂಡು ಗೋಲಿಬಾರ್ ನಲ್ಲಿ ಏಟು ತಿಂದು ತನ್ನ ಜೀವನವನ್ನೇ ತ್ಯಾಗ ಮಾಡಿ ಈಗ ತಮ್ಮವರ ನೆನಪಿನಿಂದಲೂ ದೂರಾಗಿದ್ದಾರೆ. ಯಾರು ಅವರು? ಇಲ್ಲಿದೆ ನೋಡಿ...
ಇಳಿ ವಯಸ್ಸಿನಲ್ಲಿ ಕುಳಿತಲ್ಲೇ ಕುಳಿತುಕೊಂಡು, ಫೈಲ್ ನಲ್ಲಿ ಪುಟಗಳನ್ನು ತಿರುವಿ ಹಾಕುತ್ತಿರೋ ಇವರು ಧಾರವಾಡದ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿ ಗುರುನಾಥ ಕುಲಕರ್ಣಿ. ಇವತ್ತು ಹೀಗೆ ಎದ್ದು ನಡೆಯಲು ಆಗದ ಸ್ಥಿತಿಯಲ್ಲಿ ಇವರು ಇರೋಕೆ ಕಾರಣವಾಗಿದ್ದು, ಸದ್ಯ ಇಡೀ ದೇಶಕ್ಕೆ ಸಂಭ್ರಮ ಮನೆ ಮಾಡುವಂತೆ ಮಾಡಿರೋ ಅಯೋಧ್ಯೆಯ ರಾಮಮಂದಿರ.
ಹೌದು, 1992ರಲ್ಲಿ ನಡೆದ ಕರಸೇವೆಯಲ್ಲಿ ಗುರುನಾಥ ಕುಲಕರ್ಣಿ ಪ್ರಮುಖ ಪಾತ್ರವಹಿಸಿದ್ದರು. ಆ ವೇಳೆ ಇವರ ತಂಡದ ಸಮೀಪದಲ್ಲೇ ಗೋಲಿಬಾರ್ ಆಗಿತ್ತು. ಆ ವೇಳೆ ಇವರ ಎಡಕಿವಿಗೆ ಏಟು ಬಿದ್ದು, ಆ ಕಿವಿ ಶಾಶ್ವತವಾಗಿ ಶ್ರವಣ ಶಕ್ತಿ ಕಳೆದುಕೊಂಡಿದೆ. ಎಡಗಾಲಿಗೂ ಏಟು ಬಿದ್ದಿದ್ದು, ಸೊಂಟಕ್ಕೂ ಏಟಾಗಿತ್ತು. ಅಂದು ಅಲ್ಲಿ ಏಟು ತಿಂದು ಆಸ್ಪತ್ರೆ ಸೇರಿದ್ರೆ, ಇತ್ತ ಧಾರವಾಡದಲ್ಲಿ ಅವರು ಸತ್ತೇ ಹೋಗಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ಅಯೋಧ್ಯೆಯ ಸ್ಥಳೀಯ ಪತ್ರಿಕೆಗಳಲ್ಲಿಯೂ ಗುರುನಾಥ ಕುಲಕರ್ಣಿ, ಗಲಾಟೆಯಲ್ಲಿ ಸಾವು ಅಂತಾನೆ ಸುದ್ದಿ ಆಗಿತ್ತು. ಆದರೆ ನಾಲ್ಕು ತಿಂಗಳ ಬಳಿಕ ಚೇತರಿಸಿಕೊಂಡು ಇವರು ಮರಳಿ ಧಾರವಾಡಕ್ಕೆ ಬಂದಾಗ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗಿತ್ತು. ಆದರೆ ಅಂದು ದೇಹಕ್ಕೆ ಬಿದ್ದ ಏಟಿನಿಂದ ಜೀವನಪೂರ್ತಿ ಕಷ್ಟ ಅನುಭವಿಸುತ್ತಲೇ ಬಂದಿರೋ ಕುಲಕರ್ಣಿ ಕರಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಯಾವುದೇ ಫಲಾಪೇಕ್ಷೆ ಬಯಸಿಲ್ಲ.
ಇನ್ನು ಗುರುನಾಥ ಕುಲಕರ್ಣಿ ಮಾತ್ರವಲ್ಲ, ಅವರ ಪತ್ನಿಯೂ ಸಹ ಕರಸೇವೆಯ ಹೋರಾಟಗಾರ್ತಿ. ಆದರೆ ಗುರುನಾಥರು ಮುಂದೆ ಹೋದ ಬಳಿಕ ಮಹಿಳೆಯರ ತಂಡದಲ್ಲಿ ಪತ್ನಿ ಲಕ್ಷ್ಮೀ ಸಹ ತೆರಳಬೇಕಿತ್ತು. ಆದರೆ ಮನೆಯಿಂದ ಹೊರ ಹೋಗುವ ವೇಳೆಯಲ್ಲಿಯೇ ಸ್ಥಳೀಯವಾಗಿ ಬಂಧನಕ್ಕೊಳಗಾಗಬೇಕಾಯ್ತು. ಆದರೆ ನಾಲ್ಕು ತಿಂಗಳವರೆಗೂ ಪತಿ ಸತ್ತಿದ್ದಾರೆ ಅಂತಾನೇ ತಿಳಿದಿದ್ದರು. ಅಲ್ಲಿಂದ ಬಂದ ಬಳಿಕವೂ ಒಂದೂವರೆ ವರ್ಷಗಳ ಕಾಲ ಸರಿಯಾಗಿ ನಡೆಯದ ಸ್ಥಿತಿಯಲ್ಲಿದ್ದರು.
ಇವರು ಅಯೋಧ್ಯೆ ಹೋರಾಟ ಮಾತ್ರವಲ್ಲ ತುರ್ತು ಪರಿಸ್ಥಿತಿ ಸಮಯದಲ್ಲಿಯೂ ಜೈಲುವಾಸ ಅನುಭವಿಸಿದ್ದರು. ಅಯೋಧ್ಯೆ ಕರಸೇವೆಯಲ್ಲಿ ಅಷ್ಟೆಲ್ಲ ಏಟು ತಿಂದಿದ್ದರೂ, ಹುಬ್ಬಳ್ಳಿಯ ಈದ್ಗಾ ಮೈದಾನ ಧ್ವಜ ಹೋರಾಟದಲ್ಲಿ ಮಾಜಿ ಕೇಂದ್ರ ಸಚಿವ ಅನಂತಕುಮಾರ ಜೊತೆಗೆ ಇದ್ರು, ಈ ಹೋರಾಟದಲ್ಲಿಯೂ ಪೊಲೀಸರಿಂದ ಏಟು ತಿಂದು ಆಸ್ಪತ್ರೆ ಸೇರಿದ್ದರು. ಇಷ್ಟೆಲ್ಲ ಸೇವೆ ಮಾಡಿರೋ ಗುರುನಾಥರಿಗೆ ಸಿಕ್ಕಿದ್ದು ಮಾತ್ರ ಶೂನ್ಯ. ಬಿಜೆಪಿ ಪಕ್ಷದವರೂ ಸಹಾಯ ಮಾಡಿಲ್ಲ. ಸಂಘ ಪರಿವಾರದ ಮೂಲದವರೇ ಅಲ್ಪಸ್ವಲ್ಪ ಸಹಾಯ ಮಾಡುತ್ತಾ ಬಂದಿದ್ದಾರೆ. ವಿಚಿತ್ರ ಅಂದ್ರೆ ಬಿಜೆಪಿ ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಆಹ್ವಾನ ನೀಡುತ್ತಿದೆ. ಆದರೆ ಯಾವೊಬ್ಬ ನಾಯಕರಿಗೂ ಗುರುನಾಥ ಕುಲಕರ್ಣಿ ನೆನಪಾಗಿಲ್ಲ.
ಒಟ್ಟಾರೆಯಾಗಿ ಅಂದಿನ ಹೋರಾಟದ ಸರದಾರ ಇಂದು ನೆನಪಿನಿಂದಲೂ ದೂರವಾಗಿ ಹೋಗಿದ್ದು, ಅಯೋಧ್ಯೆ ರಾಮಮಂದಿರಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟ ಇವರಿಗೆ ಸಿಕ್ಕಿದ್ದು ಮಾತ್ರ ಪೊಲೀಸರ ಲಾಠಿ ಏಟು ಮತ್ತು ನೋವು. ಆದರೆ ಈಗ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಆ ಎಲ್ಲ ನೋವೂ ಮಾಯವಾಗಿದೆ ಅನ್ನೋ ಸಾರ್ಥಕ ಭಾವ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:34 pm, Mon, 8 January 24