ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣ ಆ ದೇಗುಲಕ್ಕೇ ಬಳಕೆಯಾಗಬೇಕು: ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ
ಮುಜರಾಯಿ ಇಲಾಖೆ ಅಡಿಯಲ್ಲಿ 34 ಸಾವಿರ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಹುಂಡಿಗೆ ಸಾಕಷ್ಟು ಹಣ ಬರುತ್ತಿದೆ. ಒಂದು ದೇವಸ್ಥಾನದ ಹಣ ಮತ್ತೊಂದು ದೇವಸ್ಥಾನಕ್ಕೆ ಬಳಸುವುದಿಲ್ಲ. ಆಯಾ ದೇವಸ್ಥಾನದ ಹುಂಡಿ ಹಣ ಅದೇ ದೇವಸ್ಥಾನಕ್ಕೆ ಸೇರುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಧಾರವಾಡ, ಜನವರಿ 07: ಹುಂಡಿಯಲ್ಲಿ ಸಂಗ್ರಹವಾಗುವ ಹಣ ಆಯಾ ದೇವಸ್ಥಾನಕ್ಕೆ (Temple) ಬಳಸಬೇಕು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ (Ramalinga reddy) ಹೇಳಿದರು. ಇಂದು (ಜ.07) ಧಾರವಾಡದ ನೂತನ ಸಿಬಿಟಿ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಮುಜರಾಯಿ ಇಲಾಖೆಗೆ ಆದಾಯ ಹೆಚ್ಚಿಗೆ ಬರುತ್ತಿದೆ ಎಂಬ ಪ್ರಶ್ನೆ ಬರುವುದಿಲ್ಲ. ಮುಜರಾಯಿ ಇಲಾಖೆ ಅಡಿಯಲ್ಲಿ 34 ಸಾವಿರ ದೇವಸ್ಥಾನಗಳಿವೆ. ದೇವಸ್ಥಾನಗಳ ಹುಂಡಿಗೆ ಸಾಕಷ್ಟು ಹಣ ಬರುತ್ತಿದೆ. ಒಂದು ದೇವಸ್ಥಾನದ ಹಣ ಮತ್ತೊಂದು ದೇವಸ್ಥಾನಕ್ಕೆ ಬಳಸುವುದಿಲ್ಲ. ಆಯಾ ದೇವಸ್ಥಾನದ ಹುಂಡಿ ಹಣ ಅದೇ ದೇವಸ್ಥಾನಕ್ಕೆ ಸೇರುತ್ತದೆ.
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು ಶಕ್ತಿ ಯೋಜನೆ ಜಾರಿ ಮುನ್ನ ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದರು. ಇಂಥ ಸಮಯದಲ್ಲಿ ಶಕ್ತಿ ಯೋಜನೆ ಆರಂಭವಾಯ್ತು. ಇದರಿಂದ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿಗೂ ಮೇಲಾಗಿದೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. ಸಾರಿಗೆ ಇಲಾಖೆಗೆ ಸಿಬ್ಬಂದಿಯನ್ನೂ ನೇಮಕ ಮಾಡಿರಲಿಲ್ಲ. ಈಗ ಹೊಸ ಬಸ್ ಖರೀದಿ ಮಾಡುತ್ತೇವೆ. ಆಗ ಸಮಸ್ಯೆ ಬಗೆಹರಿಯುತ್ತೆ ಎಂದರು.
ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್ ಹಣ ರಿಲೀಸ್
ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ತಾವು ಕೆಲಸ ಮಾಡುವುದಿಲ್ಲ. ಕೆಲಸ ಮಾಡುವವರಿಗೂ ಬಿಡುವುದಿಲ್ಲ. ಅವರು ನಾಲ್ಕು ವರ್ಷದಿಂದ ಒಂದೇ ಒಂದು ಬಸ್ ಖರೀದಿಸಿಲ್ಲ. ಬಸ್ ನಿಲ್ದಾಣಗಳನ್ನು ಏಕೆ ಕಟ್ಟಲಿಲ್ಲ? 13,888 ಸಿಬ್ಬಂದಿ ನಿವೃತ್ತಿಯಾಗಿದ್ದರು. ನಾಲ್ಕು ವರ್ಷದಲ್ಲಿ ಒಂದೇ ಒಂದು ನೇಮಕಾತಿ ಮಾಡಲಿಲ್ಲ. ಇವತ್ತು ಪ್ರತಿ ದಿನ 60 ಲಕ್ಷ ಜನ ಹೆಣ್ಣು ಮಕ್ಕಳು ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಇದನ್ನು ತಡೆಯಲು ಬಿಜೆಪಿಗೆ ಆಗುತ್ತಿಲ್ಲ. ಅವರಿಗೆ ಹೊಟ್ಟೆ ಉರಿ ಆಗುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಸಿಬಿಟಿ ಬಸ್ ನಿಲ್ದಾಣಕ್ಕೆ ವಯಸ್ಸಾಯ್ತು
ಧಾರವಾಡದ ಸಿಬಿಟಿ ಬಸ್ ನಿಲ್ದಾಣ ನಿರ್ಮಾಣವಾಗಿ 50 ವರ್ಷಗಳಾಗಿವೆ. ಹೀಗಾಗಿ ಹೊಸ ಬಸ್ ನಿಲ್ದಾಣಕ್ಕೆ ಸರ್ಕಾರ ಮುಂದಾಗಿದೆ. 13.11 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ. ಒಂದು ವರ್ಷದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ. ಹೀಗಾಗಿ ಸಚಿವ ರಾಮಲಿಂಗಾ ರೆಡ್ಡಿ ಶಂಕುಸ್ಥಾಪನೆ ನೆರೆವೇರಿಸಿದರು. ಉಸ್ತುವಾರಿ ಸಚಿವ ಸಂತೋಷ ಲಾಡ್ ಸಾಥ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Mon, 8 January 24