ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರ ಈ ಬಾರಿಯೂ ಬಿಜೆಪಿಯ ತೆಕ್ಕೆಗೆ ಬಿದ್ದಿದೆ. ಐದನೇ ಬಾರಿಯೂ ಗೆಲ್ಲುವ ಮೂಲಕ ಪ್ರಲ್ಹಾದ್ ಜೋಶಿ (Pralhad Joshi) ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ದೇವರ ಹೆಸರಿನಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಕೂಡ ಮಾಡಿದ್ದಾರೆ. ಆ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಐದನೇ ಬಾರಿಗೆ ಗೆದ್ದ ಏಕೈಕ ನಾಯಕರಾಗಿ ಹೊರಹೊಮ್ಮಿದ್ದಾರೆ.
ಸಂಸದ ಪ್ರಲ್ಹಾದ್ ಜೋಶಿ ಅವರು ಮೂಲತಃ ಆರ್ಎಸ್ಎಸ್ ಕಾರ್ಯಕರ್ತರು. 1992-94ರ ವರೆಗೆ ನಡೆದ ಈದ್ಗಾ (ಕಿತ್ತೂರು ರಾಣಿ ಚೆನ್ನಮ್ಮ) ಮೈದಾನ ತ್ರಿವರ್ಣ ಧ್ವಜ ಹೋರಾಟ ಸಂಸದ ಪ್ರಲ್ಹಾದ್ ಜೋಶಿ ಅವರ ರಾಜಕೀಯ ಪ್ರವೇಶಕ್ಕೆ ನಾಂದಿಯಿತು. ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿಯೇ ತೀರುತ್ತೇವೆ ಎಂದು ಆರ್ಎಸ್ಎಸ್ ಮತ್ತು ಬಿಜೆಪಿಯ ಮುಖಂಡರು ಪಣ ತೊಟ್ಟಿದ್ದರು. ಈ ಹೋರಾಟದ ಮುಂದಾಳತ್ವವನ್ನು ಪ್ರಲ್ಹಾದ್ ಜೋಶಿ, ಬಿಸ್ ಯಡಿಯೂರಪ್ಪ ವಹಿಸಿಕೊಂಡಿದ್ದರು. ದಿಟ್ಟ ಹೋರಾಟದ ಮೂಲಕ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿಯೇ ಬಿಟ್ಟರು. ಈ ಹೋರಾಟ ಪ್ರಲ್ಹಾದ್ ಜೋಶಿ ಅವರಿಗೆ ರಾಜಕೀಯ ದಿಕ್ಕು ತೋರಿಸಿತ್ತು.
ಇದನ್ನೂ ಓದಿ: Pralhad Joshi Oath: ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ
ಸಂಸದ ಪ್ರಲ್ಹಾದ್ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ 2004ರಲ್ಲಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಮತ್ತೆ 2009ರಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕಣಕ್ಕೆ ಇಳಿದು ವಿಜಯಪತಾಕೆ ಹಾರಿಸಿದ್ದರು. ಸಂಸದ ಪ್ರಲ್ಹಾದ್ ಜೋಶಿ ಅವರು 2014 ರಿಂದ 2016 ರವರೆಗೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು.
ಇದನ್ನೂ ಓದಿ: Dharwad Constituency Result 2024: ಧಾರವಾಡ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಪ್ರಲ್ಹಾದ್ ಜೋಶಿ
ನಂತರ ಮೂರನೇ ಬಾರಿಗೆ 2014ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೇ ಕ್ಷೇತ್ರದಿಂದ 2019 ರಲ್ಲಿ ಗೆದ್ದು ನಾಲ್ಕನೇ ಬಾರಿಗೆ ಸಂಸತ್ತು ಪ್ರವೇಶಿಸಿದ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ. ಇದೀಗ 2024ರಲ್ಲೂ ಗೆಲ್ಲುವ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Wed, 5 June 24