ಧಾರವಾಡ, ಮಾ.03: ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳ ಮೇಲ್ತುದಿಯಲ್ಲಿ ಇಬ್ಬನಿ ಕಾಣುತ್ತಿದ್ದರೆ ಅದನ್ನು ನೋಡೋದೇ ಒಂದು ಭಾಗ್ಯ. ಆದರೆ, ಈ ಇಬ್ಬನಿ ಬೀಳುವುದಕ್ಕೂ ಒಂದು ಕಾಲವಿದೆ. ಅದಾಗಲೇ ಬೇಸಿಗೆ ಆರಂಭವಾಗಿದ್ದರೂ ಧಾರವಾಡ (Dharwad)ದಲ್ಲಿ ಈ ರೀತಿ ಬೀಳುತ್ತಿರುವ ಇಬ್ಬನಿಯಿಂದಾಗಿ ಮಾವು ಬೆಳೆಗಾರರು(Mango growers) ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಈ ಬಾರಿ ಮಳೆ ಇಲ್ಲದೇ ಅಂತರ್ಜಲ ಕುಸಿದಿದೆ. ಅಂಥಹದರಲ್ಲಿಯೂ ರೈತರು ಹೇಗೋ ನೀರುಣಿಸಿ ಮರಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅದರಲ್ಲೂ ಈ ಬಾರಿ ಅಕಾಲಿಕ ಮಳೆಯಾಗದೇ ಇದ್ದಿದ್ದಕ್ಕೆ ಗಿಡಗಳು ಹೂವಿನಿಂದ ತುಂಬಿಕೊಂಡಿದ್ದವು. ಇದರಿಂದಾಗಿ ರೈತರು ಉತ್ತಮ ಮಾವಿನ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಎರಡು ದಿನಗಳಿಂದ ಮಂಜು ಬೀಳುತ್ತಿದ್ದು, ಅದು ಮಾವಿನ ಫಸಲಿನ ಮೇಲೆ ಅಡ್ಡ ಪರಿಣಾಮ ಬಿರುವ ಆತಂಕ ಶುರುವಾಗಿದೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಇಬ್ಬನಿ ಬೀಳುತ್ತದೆ. ಆಗಷ್ಟೇ ಗಿಡಗಳಲ್ಲಿ ಹೂವು ಕಟ್ಟಿಕೊಂಡಿರುತ್ತದೆ. ಆದರೆ, ಗಿಡಗಳು ಕಾಯಿ ಕಟ್ಟಿ, ಕಾಯಿಗಳು ದೊಡ್ಡವಾಗುವ ಸಂದರ್ಭದಲ್ಲಿ ಈ ರೀತಿ ಇಬ್ಬನಿ ಬಿದ್ದರೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹೀಗೆ ಇಬ್ಬನಿ ಬೀಳೋದ್ರಿಂದ ಜಿಗುಟು, ಬೂದು ರೋಗಗಳು ಗಿಡಗಳಲ್ಲಿ ಕಾಣಿಸಿಕೊಂಡರೆ ಅಲ್ಲಿಗೆ ಮಾವಿನ ಫಸಲಿನ ಆಸೆಯನ್ನು ಕೈ ಬಿಟ್ಟಂತೆಯೇ. ಏಕೆಂದರೆ ಈ ಜಿಗುಟು ರೋಗದಿಂದ ಮಾವಿನ ಕಾಯಿಯ ಮೇಲೆ ಕಪ್ಪು ಬಣ್ಣ ಹತ್ತಿಕೊಳ್ಳುತ್ತದೆ. ಇದರಿಂದ ದರ ಬರುವುದಿಲ್ಲ.
ಇದನ್ನೂ ಓದಿ:ಬರಗಾಲದ ಮಧ್ಯೆ ರೈತರ ಕೈ ಹಿಡಿದ ಮಾವು ಬೆಳೆ; ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಮಾರುಕಟ್ಟೆಗೆ ಮಾವು ಪ್ರವೇಶ
ಈ ಇಬ್ಬನಿಯ ಮತ್ತೊಂದು ಸಮಸ್ಯೆ ಅಂದರೆ, ಈ ರೀತಿ ಇಬ್ಬನಿ ಬಿದ್ದರೆ ಇದೀಗ ಕಟ್ಟಿಕೊಂಡಿರುವ ಕಾಯಿಗಳು ಕೂಡ ಉದುರಿ ಹೋಗುತ್ತವೆ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಿಗ್ಗೆ ಮಂಜು ಬೀಳುತ್ತಿದ್ದರೆ ಮಧ್ಯಾಹ್ನದ ಹೊತ್ತಿಗೆ ಭಾರೀ ಬಿಸಿಲು ಈ ಬೆಳೆಗೆ ಸಮಸ್ಯೆ ಉಂಟು ಮಾಡುತ್ತಿದೆ. ನಾಲ್ಕಾರು ವರ್ಷಗಳಲ್ಲಿ ಈ ಬಾರಿಯೇ ಗಿಡಗಳು ಉತ್ತಮವಾಗಿ ಹೂವುಗಳನ್ನು ಕಟ್ಟಿಕೊಂಡಿವೆ. ಆದರೆ, ಇದೀಗ ಮಂಜು ಹಾಗೂ ಅತಿ ಬಿಸಿಲಿನಿಂದಾಗಿ ಇಳುವರಿಗೆ ತೊಂದರೆಯಾಗಲಿದೆ. ಹೀಗಾದರೆ ಮತ್ತೆ ಈ ಬಾರಿ ಮಾವಿನ ಫಸಲು ಬರೋದು ಅಷ್ಟಕ್ಕಷ್ಟೇ. ಈ ಬಾರಿಯಾದರೂ ಉತ್ತಮ ಇಳುವರಿ ಪಡೆಯಬಹುದು ಅಂದುಕೊಂಡಿದ್ದ ರೈತರಿಗೆ ಮತ್ತೆ ನಿರಾಸೆ ಆಗುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿಯೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Sun, 3 March 24