ಬರಗಾಲದ ಮಧ್ಯೆ ರೈತರ ಕೈ ಹಿಡಿದ ಮಾವು ಬೆಳೆ; ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಮಾರುಕಟ್ಟೆಗೆ ಮಾವು ಪ್ರವೇಶ
ಧಾರವಾಡ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಮಾವು ಕೂಡ ಒಂದು. ಆದರೆ, ಕಳೆದ ಹಲವಾರು ವರ್ಷಗಳಿಂದ ಮಾವಿನ ಬೆಳೆಗೆ ನಾನಾ ಸಮಸ್ಯೆಗಳು ಎದುರಾಗಿದ್ದರಿಂದ ಬೆಳೆಗಾರರು ಒಂದು ರೂಪಾಯಿ ಆದಾಯ ಪಡೆದಿಲ್ಲ. ಈ ಬಾರಿ ಮಳೆ ಇಲ್ಲದೇ ಇದ್ದರೂ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ.
ಧಾರವಾಡ, ಡಿ.23: ಮಳೆ ಕೊರತೆಯಿಂದಾಗಿ ಈ ವರ್ಷ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಹಾರದ ಬೆಳೆಗಳನ್ನು ಬೆಳೆಯಲಾಗಿಲ್ಲ. ಆದರೆ, ಹೆಚ್ಚು ಮಳೆ ಬೀಳದಿರುವುದು ಮಾವಿನ ಫಸಲಿ(Mango crop)ಗೆ ವರವಾಗಿ ಪರಿಣಮಿಸಿದೆ. ಈ ವರ್ಷ ನಿಗದಿಗಿಂತಲೂ ಮುನ್ನವೇ ಮಾವು ಹೂ ಬಿಡಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದ್ದ ಮಾವು, ಈ ಬಾರಿ ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ. ಅಕಾಲಿಕವಾಗಿ ಮಳೆ ಸುರಿಯದಿದ್ದರೆ, ಉತ್ತಮ ಫಸಲು ಸಿಗುವ ನಿರೀಕ್ಷೆಯೂ ಇದೆ. ಇದರಿಂದಾಗಿ ರೈತರು ಈ ಬಾರಿ ಒಳ್ಳೆಯ ಫಸಲನ್ನು ಪಡೆಯುವ ಖುಷಿಯಲ್ಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಹವಾಮಾನ ವೈಪರೀತ್ಯವಾಗದಿರಲೆಂದು ಬೇಡಿಕೊಳ್ಳುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 15000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ
ರಾಜ್ಯದಲ್ಲಿ 1.60 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 10 ರಿಂದ 14 ಲಕ್ಷ ಮೆಟ್ರಿಕ್ ಟನ್ ಮಾವಿನ ಇಳುವರಿ ಸಿಗುತ್ತದೆ. ಆದರೆ, ಅಧಿಕ ಮಳೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ 7 ರಿಂದ 8 ಲಕ್ಷ ಟನ್ ಮಾತ್ರವೇ ಇಳುವರಿ ದೊರೆತಿತ್ತು. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಂತೂ ಮಾವು ಬಂದಿರಲೇ ಇಲ್ಲ. ಆದರೆ, ಈ ಬಾರಿ ಹೆಚ್ಚಿನ ಮಳೆಯಾಗಿಲ್ಲ. ಅದೇ ಕಾರಣಕ್ಕೆ ಈ ವರ್ಷ 15 ಲಕ್ಷ ಟನ್ ಇಳುವರಿ ಸಿಗಬಹುದೆಂದು ಅಂದಾಜಿಸಲಾಗಿದೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಒಟ್ಟು 15000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಮಾವು ಸಿಗದೇ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಇಲ್ಲಿನ ಆಲ್ಫ್ಯಾನ್ಸೋ ಮಾವಿಗೆ ಅಕ್ಕಪಕ್ಕದ ರಾಜ್ಯಗಳ ಜೊತೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಇಷ್ಟೊಂದು ಬೇಡಿಕೆ ಇದ್ದರೂ ಅದನ್ನು ರಫ್ತು ಮಾಡಲು ರೈತರಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಹೂವು ಚೆನ್ನಾಗಿ ಬಿಟ್ಟಿರೋದ್ರಿಂದ ಮತ್ತು ಅಕಾಲಿಕ ಮಳೆ ಆಗುವುದಿಲ್ಲ ಎನ್ನುವ ಹವಾಮಾನ ಇಲಾಖೆಯ ವರದಿಯಿಂದ ರೈತರು ಖುಷಿಯಾಗಿದ್ದಾರೆ.
ಇದನ್ನೂ ಓದಿ:Miyazaki Mangoes: ಈ ಮಾವಿನ ಹಣ್ಣಿಗೆ ಕೆ.ಜಿಗೆ 3 ಲಕ್ಷ ರೂ.! ಜಪಾನ್ನ ದುಬಾರಿ ಮಾವು ಬೆಳೆದ ಭಾರತೀಯ ರೈತ
ಈ ಬಾರಿಯಾದರೂ ಉತ್ತಮ ಇಳುವರಿ ಬಂದರೆ ಒಳ್ಳೆಯದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಾವು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಅನೇಕ ಕಡೆಗಳಲ್ಲಿ ರೈತರು ಗಿಡಗಳನ್ನು ಕತ್ತರಿಸಿ ಹಾಕಿ, ಬೇರೆ ಬೆಳೆಗಳಿಗೆ ಮೊರೆ ಹೋಗಿದ್ದರು. ಅದರಲ್ಲೂ ಬಹುತೇಕರು ಕಬ್ಬು ಬೆಳೆಗೆ ಮೊರೆ ಹೋಗಿದ್ದರು. ಈ ಬಾರಿಯೂ ಅದೇ ರೀತಿಯಾದರೆ ಮತ್ತಷ್ಟು ಮಾವಿನ ಮರಗಳು ರೈತರ ಸಿಟ್ಟಿಗೆ ಆಹುತಿಯಾಗುತ್ತಿದ್ದವು. ಆದರೆ ಈ ಬಾರಿಯ ಸ್ಥಿತಿ ನೋಡಿದರೆ ಕೊಂಚ ನಿರಾಳತೆ ಆವರಿಸಿದೆ. ಒಟ್ಟಿನಲ್ಲಿ ಈ ಬಾರಿಯಾದರೂ ಉತ್ತಮ ಇಳುವರಿ ಪಡೆಯೋ ಮೂಲಕ ರೈತರು ಒಂದಷ್ಟು ಆದಾಯ ಗಳಿಸಿದರೆ ಸಾಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ