
ಧಾರವಾಡ, (ಸೆಪ್ಟೆಂಬರ್ 26): ಜಿಲ್ಲೆಯ ಮಿಶ್ರಿಕೋಟಿ ಗ್ರಾಮವು ಕಲಘಟಗಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಇಲ್ಲಿ ವಾಸವಾಗಿದ್ದಾರೆ. ಅದರಲ್ಲಿ ಹಿಂದೂ ಧರ್ಮೀಯರೇ ಸರಿಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಆದರೆ ಹಿಂದೂ ಧರ್ಮೀಯರ ಮನೆಯಲ್ಲಿ ಯಾರಾದ್ರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಜಾಗವೇ ಇಲ್ಲದಂತಾಗಿದೆ. ಸಾವಿರಾರು ಜನರು ಇರುವ ಈ ಗ್ರಾಮದಲ್ಲಿ ಸತ್ತವರನ್ನು ಹೂಳಲು ಸ್ಮಶಾನದ ಸಮಸ್ಯೆ ಉಂಟಾಗಿದೆ. ನೂರಾರು ವರ್ಷಗಳಿಂದ ಬಳಸುತ್ತಿದ್ದ ಸ್ಮಶಾನದ ಜಾಗವನ್ನು ವ್ಯಕ್ತಿಯೋರ್ವ ತನ್ನದೆಂದು ಅನ್ಯಧರ್ಮೀಯರಿಗೆ ಮಾರಾಟ ಮಾಡಿದ್ದಾನೆ. ಇದೀಗ ಭೂಮಿ ಖರೀದಿ ಮಾಡಿದವರು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾರಾದರೂ ಮೃತಪಟ್ಟರೇ ಈ ಗ್ರಾಮಸ್ಥರಿಗೆ ದೊಡ್ಡ ಚಿಂತೆಯಾಗುತ್ತೆ.
ಈ ಗ್ರಾಮದಲ್ಲಿ ಸ್ವಂತ ಭೂಮಿಯಿದ್ದವರು ತಮ್ಮ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಿದ್ದರೆ, ತುಂಡು ಭೂಮಿಯೂ ಇಲ್ಲದಿರುವ ಸಾವಿರಾರು ಜನರು ಯಾರಾದ್ರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅನೇಕ ದಶಕಗಳಿಂದ ಮಿಶ್ರಿಕೋಟಿಯಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ನಾಲ್ಕು ಎಕರೆ 34 ಗುಂಟೆ ಭೂಮಿಯಿತ್ತು. ಅಲ್ಲಿಯೇ ಗ್ರಾಮದ ಹಿಂದೂ ಧರ್ಮೀಯರು ಮೃತಪಟ್ಟಾಗ ಅಲ್ಲಿಯೇ ಅವರ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಹೀಗಾಗಿ ಗ್ರಾಮದ ಜನರಿಗೆ ಎಂದಿಗೂ ಅಂತ್ಯಸಂಸ್ಕಾರದ ಚಿಂತೆ ಕಾಡಿರಲಿಲ್ಲ.
ಆದರೆ ಕಳೆದ ಹದಿನೈದು ವರ್ಷಗಳಿಂದ ರುದ್ರಭೂಮಿ ವಿವಾದ ಆರಂಭವಾಗಿದ್ದು, ಗ್ರಾಮದ ಜನರ ಸಂಕಷ್ಟವನ್ನು ಹೆಚ್ಚಿಸುತ್ತಿದೆ. ಗ್ರಾಮದ ಜನರು ಬಳಸುತ್ತಿದ್ದ ರುದ್ರಭೂಮಿ ಜಾಗ ಗ್ರಾಮದ ಬಡಿಗೇರ್ ರನ್ನುವವರು ತಮ್ಮದೆಂದು ವಾದಿಸುತ್ತಿದ್ದರು. ಆದರೂ ಕೂಡ ತಮ್ಮ ಜಾಗದ 34 ಗುಂಟೆಗಳಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿದ್ದರು. ಆದರೆ ಬಡಿಗೇರ್ ಕುಟುಂಬ ಈಗ ಹುಬ್ಬಳ್ಳಿ ಮೂಲದ ಅನ್ಯಧರ್ಮೀಯರೊಬ್ಬರಿಗೆ ಮಾರಾಟ ಮಾಡಿದ್ದಾರೆ.ಹೀಗಾಗಿ ರುದ್ರಭೂಮಿ ಸಮಸ್ಯೆ ಮತ್ತೆ ಕಾಡಲು ಆರಂಭಿಸಿದೆ.
ಇದನ್ನೂ ಓದಿ ಮುಕಳೆಪ್ಪ ನಮ್ ಮಗಳನ್ನು ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಡುತ್ತಾನೆ: ಆತಂಕ ವ್ಯಕ್ತಪಡಿಸಿದ ಯುವತಿಯ ತಾಯಿ
ಭೂಮಿಯನ್ನು ಖರೀದಿ ಮಾಡಿರೋ ಅನ್ಯಧರ್ಮೀಯ ವ್ಯಕ್ತಿ ಇದು ತನಗೆ ಸೇರಿದ ಭೂಮಿ ಎಂಬ ಕಾರಣಕ್ಕೆ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಎರಡು ದಿನಗಳ ಹಿಂದೆ ವ್ಯಕ್ತಿಯೋರ್ವ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಹೋದವರ ಮೇಲೆ ಪುಡಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾನೆ. ಇದು ಹಿಂದೂ ಧರ್ಮೀಯರ ಸಿಟ್ಟಿಗೆ ಕಾರಣವಾಗಿದೆ. ತಮ್ಮ ಪೂರ್ವಜರ ಕಾಲದಿಂದ ಇದೇ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬಂದಿರುವ ಹಿಂದೂಗಳು ಈಗ ನಮಗೆ ಅವಕಾಶ ನೀಡದೇ ಇದ್ದರೆ ಹೇಗೆ ಎಂದು ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಅವಕಾಶ ನೀಡದೇ ಇದ್ದರೆ ಅವರ ಮನೆ ಮುಂದೆ ಹೋಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನು 1975 ರ ದಾಖಲಾತಿಯಲ್ಲಿ 34 ಗುಂಟೆ ಸ್ಮಶಾನ ಜಾಗ ಅಂತ ಉಲ್ಲೇಖವಿದೆ. ಆದರೆ ನಂತರದ ದಾಖಲಾತಿಗಳಲ್ಲಿ ಹಾಗಿಲ್ಲ. ಈ ಹಿಂದಿನ ಮಾಲೀಕರು ಅಧಿಕಾರಿಗಳ ಮೂಲಕ ಅದನ್ನು ತಗೆಸಿ ಹಾಕಿದ್ದಾರೆ ಎಂದು ಗ್ರಾಮದ ಜನರು ಹೇಳುತ್ತಿದ್ದಾರೆ. ಇನ್ನು ಗ್ರಾಮದ ಸ್ಮಶಾನದ ಜಾಗ ವಿಚಾರವಾಗಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಇಲ್ಲಿವರಗೆ ಯಾರು ಸ್ಪಂಧಿಸಿಲ್ಲ.