ಮುಕಳೆಪ್ಪ ಮದ್ವೆ ಕಹಾನಿಗೆ ಬಿಗ್ ಟ್ವಿಸ್ಟ್: ಕಾಮಿಡಿ ಕಿಲಾಡಿಯ ಅಂತರ್ ಧರ್ಮೀಯ ವಿವಾಹ ರಹಸ್ಯ ಮತ್ತಷ್ಟು ಬಯಲು
ಯೂಟ್ಯೂಬರ್ಗಳಾದ ಮುಕಳೆಪ್ಪಾ ಅಲಿಯಾಸ್ ಖ್ವಾಜಾ ಶಿರಹಟ್ಟಿ ಮತ್ತು ಗಾಯಿತ್ರಿ ಜಾಲಿಹಾಳ್ ಅಂತರಧರ್ಮೀಯ ವಿವಾಹ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ. ನಾವು ಪರಸ್ಪರ ಮತಾಂತರವಾಗಿಲ್ಲ, ಲವ್ ಜಿಹಾದ್ ಕೂಡ ಮಾಡಿಲ್ಲವೆಂದು ಸ್ವತಃ ಖ್ವಾಜಾ ಶಿರಹಟ್ಟಿ ಹೇಳಿಕೆ ನೀಡಿದ್ದ. ಆದ್ರೆ ಯುವತಿ ತಾಯಿ ಖ್ವಾಜಾ ಶಿರಹಟ್ಟಿ ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮತಾಂತರ ಆಗಿಲ್ಲ ಎನ್ನುವುದಾದರೆ ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ ಯಾಕಿಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿ, ಸೆಪ್ಟೆಂಬರ್ 25: ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಮತ್ತು ಗಾಯಿತ್ರಿ ಜಾಲಿಹಾಳ್ ಅಂತರ್ಧರ್ಮೀಯ ಪ್ರೇಮ ವಿವಾಹ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಲವ್ ಜಿಹಾದ್ ಮಾಡಿಲ್ಲ ಎಂದು ಹೇಳಿಕೊಂಡ ದಂಪತಿ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿಲ್ಲ. ಯುವತಿಯ ಕೊರಳಲ್ಲಿ ತಾಳಿ ಇಲ್ಲ, ಹಣೆಯಲ್ಲಿ ಕುಂಕುಮವಿಲ್ಲ.ಕೈಯಲ್ಲಿ ಉರ್ದುವಿನಲ್ಲಿ ಖ್ವಾಜಾನ ಹೆಸರು ಬರೆದುಕೊಂಡಿದ್ದಾಳೆಂದು ಯುವತಿಯ ತಾಯಿ ಆಕ್ರೋಶ ಹೊರ ಹಾಕಿದ್ದಾರೆ.
ಮುಕಳೆಪ್ಪ ಪ್ರಕರಣಕ್ಕೆ ಹೊಸ ತಿರುವು
ಉತ್ತರ ಕರ್ನಾಟಕ ಭಾಗದಲ್ಲಿ ಮುಕಳೆಪ್ಪಾ ಅಂತಲೇ ಪೇಮಸ್ ಆಗಿರುವ ಖ್ಯಾತ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಮತ್ತು ಗಾಯಿತ್ರಿ ಜಾಲಿಹಾಳ್ ಅಂತರ್ಧರ್ಮೀಯ ಪ್ರೇಮ ವಿವಾಹ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಪಾರ್ಮ್ ನಿವಾಸಿಯಾಗಿರೋ ಖ್ವಾಜಾ ಶಿರಹಟ್ಟಿ ವಿರುದ್ದ ಹುಬ್ಬಳ್ಳಿ ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್20 ರಂದು ದೂರು ದಾಖಲಾಗಿತ್ತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜೊತೆಯಲ್ಲಿ ಆಗಮಿಸಿದ್ದ ಯುವತಿಯ ಹೆತ್ತವರು, ದೂರು ನೀಡಿದ್ದರು. ಖ್ವಾಜಾ ಶಿರಹಟ್ಟಿ, ಹುಬ್ಬಳ್ಳಿ ನಗರದ ಲೋಹಿಯಾ ನಗರದ ಇಪ್ಪತ್ತೆರಡು ವರ್ಷದ ಗಾಯಿತ್ರಿ ಜಾಲಿಹಾಳ್ ಎನ್ನುವ ಯುವತಿಯನ್ನು ಪ್ರೀತಿಸಿ ಮೂರು ತಿಂಗಳ ಹಿಂದೆಯೇ ವಿವಾಹವಾಗಿದ್ದಾನೆ.
ಇದನ್ನೂ ಓದಿ ಯೂಟ್ಯೂಬರ್ ಮುಕಳೆಪ್ಪ ಮದುವೆ ಪ್ರಕರಣ: ವಿವಾಹ ನೋಂದಣಾಧಿಕಾರಿ ಕಚೇರಿಗೇ ಬೀಗ, ಸಿಬ್ಬಂದಿಯೂ ನಾಪತ್ತೆ!
ಜೂನ್ 5 ರಂದೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರೋ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಖ್ವಾಜಾ ಮತ್ತು ಗಾಯಿತ್ರಿ ವಿವಾಹವಾಗಿದ್ದಾರೆ. ಖ್ವಾಜಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಆದರೆ ಸ್ವತಃ ಗಾಯಿತ್ರಿಯೇ ಈ ಆರೋಪ ವನ್ನು ತಳ್ಳಿಹಾಕಿದ್ದಾಳೆ. ನಿನ್ನೆಯಷ್ಟೇ (ಸೆ.24) ಖ್ವಾಜಾ ಮತ್ತು ಗಾಯಿತ್ರಿ ಇಬ್ಬರು ಸೇರಿ ವಿಡಿಯೋ ಮಾಡಿ ಹರಿಬಿಟ್ಟಿದ್ದು , ಅದರಲ್ಲಿ ನಾವು ಪರಸ್ಪರ ಮತಾಂತರವಾಗಿಲ್ಲಾ.ಲವ್ ಜಿಹಾದ್ ಕೂಡಾ ಇಲ್ಲ. ನಾವು ಮೂರು ವರ್ಷದಿಂದ ಪ್ರಿತಿಸಿ ಮದುವೆಯಾಗಿದ್ದೇವೆ. ಕಲಾವಿದರಲ್ಲಿ ಜಾತಿ ಧರ್ಮ ತರಬಾರದು. ನಮಗೆ ಬಾಳಲು ಬಿಡಿ ಎಂದು ಮನವಿ ಮಾಡಿದ್ದರು. ಆದರೆ ಖ್ವಾಜಾ ಮಾತಿಗೆ ಗಾಯಿತ್ರಿಯ ತಾಯಿ ಶಿವಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಾಂತರ ಆಗಿಲ್ಲವಾದಲ್ಲಿ ಕೊರಳಲ್ಲಿ ನಮ್ಮ ಹಿಂದೂ ಸಂಪ್ರದಾಯದ ತಾಳಿ ಯಾಕಿಲ್ಲಾ, ಹಣೆಯಲ್ಲಿ ಕುಂಕುಮ ಯಾಕಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ.
ಗಾಯತ್ರಿಯ ತಾಯಿ ಹೇಳಿದ್ದೇನು?
‘ನಾನು ಧಾರವಾಡದ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಮಗಳನ್ನು ಬೇಟಿ ಮಾಡಿದಾಗ ತಾಳಿ ಎಲ್ಲಿದೆ ಎಂದು ಕೇಳಿದೆ. ಮನೆಯಲ್ಲಿ ಇದೆ ಎಂದು ಮಗಳು ಹೇಳಿದಳು. ನಮ್ಮ ಸಂಪ್ರದಾಯದಲ್ಲಿ ಮನೆಯಲ್ಲಿ ತಾಳಿ ಇಡುವುದಿಲ್ಲ. ಖ್ವಾಜಾನ ಹೆಸರನ್ನು ಗಾಯಿತ್ರಿ ತನ್ನ ಕೈಯಲ್ಲಿ ಬರೆಸಿಕೊಂಡಿದ್ದಾಳೆ. ಅದು ಉರ್ದುವಿನಲ್ಲಿದೆ. ಖ್ವಾಜಾ ನನ್ನ ಮಗಳ ತಲೆ ಕೆಡಿಸಿದ್ದಾನೆ. ಇದನ್ನೆಲ್ಲಾ ನೋಡಿ ಹೆತ್ತು ಹೊತ್ತು ಸಾಕಿದ ನಮ್ಮ ಹೊಟ್ಟೆ ಉರಿಯಲ್ವಾ? ಖ್ವಾಜಾ ನನ್ನ ಮಗಳನ್ನು ನಮಗೆ ಬಿಟ್ಟು ಬಿಡು ,ಇಲ್ಲದಿದ್ದರೆ ಸರಿಯಿರಲ್ಲ.’ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Thu, 25 September 25



