ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಪರಿಣಿತರ ಜೊತೆ ಚರ್ಚೆ, ಸುಧಾರಣೆಗೆ ವಿಶೇಷ ನೆರವು ನೀಡಲಾಗುವುದು: ಸಿಎಂ ಬೊಮ್ಮಾಯಿ

| Updated By: Rakesh Nayak Manchi

Updated on: Jan 31, 2023 | 4:16 PM

ರೈತರ ಮಕ್ಕಳ ಜೊತೆಗೆ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ಕೊಡುತ್ತೇವೆ. ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ ಮಾಡಿದ್ದೇವೆ. ಆದೇಶ ಮಾಡಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಪರಿಣಿತರ ಜೊತೆ ಚರ್ಚೆ, ಸುಧಾರಣೆಗೆ ವಿಶೇಷ ನೆರವು ನೀಡಲಾಗುವುದು: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Image Credit source: FILE PHOTO
Follow us on

ಧಾರವಾಡ: ರಾಜ್ಯದಲ್ಲಿ ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಈ ಬಗ್ಗೆ ಪರಿಣಿತರ ಜೊತೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ಕೂಡ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಜಿಲ್ಲೆಯಲ್ಲಿ ರೈತ ಶಕ್ತಿ ಯೋಜನೆಗೆ (Raitha Shakti Yojana) ಚಾಲನೆ ನೀಡಿ ಮಾತನಾಡಿದ ಅವರು, ರೈತರನ್ನು ಕೂಲಿಕಾರರನ್ನು ಗಟ್ಟಿಗೊಳಿಸಿದರೆ ನಾಡು ಕಟ್ಟಬಹುದು. ದೊಡ್ಡ ದೊಡ್ಡ ಶ್ರೀಮಂತರಿಂದ ರಾಜ್ಯ ಕಟ್ಟಲು ಆಗುವುದಿಲ್ಲ. ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಅಂತಿದ್ದರು. ಈಗ ಅದು ಬದಲಾಗಿದೆ. 21ನೇ ಶತಮಾನದ ದುಡ್ಡಿದ್ದವರದ್ದಲ್ಲ, ದುಡಿಮೆ ಇದ್ದವರೇ ದೊಡ್ಡಪ್ಪ. ಈ ನಿಟ್ಟಿನಲ್ಲಿ ನಾನಾ ರೀತಿಯ ಅನೇಕ ಬದಲಾವಣೆ ಆಗಬೇಕಿದೆ. ಅದಕ್ಕಾಗಿ ನಾನು ಅನೇಕ ವರದಿಗಳನ್ನು ತರಿಸಿದ್ದೇನೆ ಎಂದರು.

ರೈತ ಶಕ್ತಿ ಯೋಜನೆ, ಕೃಷಿ ಯಂತ್ರೋಪಕರಣ ಬಳಕೆಗೆ ಪ್ರೋತ್ಸಾಹ ಹಾಗೂ ಡಿಸೇಲ್‌ಗೆ ಸಬ್ಸಿಡಿ ನೀಡುವ ಯೋಜನೆಯಾಗಿದ್ದು, ಪ್ರತಿ ಎಕರೆಗೆ 250ರೂಪಾಯಿಯಂತೆ ಗರಿಷ್ಠ 5 ಎಕರೆಗೆ 1250ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. 51.80 ಲಕ್ಷ ರೈತರಿಗೆ 383.15 ಕೋಟಿ ರೂ. ಡಿಸೇಲ್ ಸಬ್ಸಿಡಿ ಈ ಯೋಜನೆ ಮೂಲಕ ನೀಡಲಾಗುತ್ತಿದೆ.

ಮುಂದಿನ ಬದಲಾವಣೆ ನೋಡಿ ಕೃಷಿ ಉತ್ಪನ್ನ ಬೆಲೆ ನಿಗದಿ ಮಾಡಬೇಕಿದೆ. ಮುಂದಿನ ಮಳೆ, ಇತರೆ ಹವಾಮಾನ ಅರಿತು ಕೃಷಿಯಲ್ಲಿ ಬಂಡವಾಳ ಹಾಕಬೇಕಿದೆ. ಈಗ ಕೃಷಿಯಲ್ಲಿ ಹಣ ಹಾಕಲು ಅನಿಶ್ಚಿತತೆ ಇದೆ. ಅದನ್ನು‌ ನಿಶ್ಚಿತತೆ ಮಾಡಬೇಕಾಗಿದೆ. ಮುಂದಿನ ಹತ್ತು ವರ್ಷ ರೈತ ಶ್ರಮ ಹಾಕಬೇಕಿದೆ. ಅದರ ಆಧಾರದಲ್ಲಿ ಹೊಸ ನೀತಿ ತರುತ್ತೇವೆ ಎಂದರು.

ಇದನ್ನೂ ಓದಿ: ವಿಕ್ಟರಿ ಸೋಮಣ್ಣ ಎಂದು ಸಚಿವರನ್ನು ಹಾಡಿ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ

ನಮ್ಮ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಆಗಿದೆ. ಮೊದಲು ವಿದೇಶದಿಂದ ಗೋಧಿ ತರಸಬೇಕಿತ್ತು. ಅಮೇರಿಕದಿಂದ ಕುದುರೆಗೆ ಹಾಕುವ ಗೋಧಿ ಕಳುಹಿಸುತ್ತಿದ್ದರು. ಆದರೆ ಇವತ್ತು ಭಾರತದಲ್ಲಿ 150 ಕೋಟಿ ಜನಸಂಖ್ಯೆ ಇದೆ. ಆದರೆ ಆಹಾರದ ಕೊರತೆ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ರೈತರು. ನಮ್ಮ ಹಸಿವಿನ ಚೀಲದ ಹೊಟ್ಟೆಯನ್ನು ರೈತರು ತುಂಬಿಸುತ್ತಿದ್ದಾರೆ ಎಂದರು.

ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆ ತೆಗೆದರೂ ರೈತರ ಬದುಕು ಸುಧಾರಿಸಿಲ್ಲ. ಅದಕ್ಕಾಗಿ ರೈತರ ಮಕ್ಕಳು ವಿದ್ಯಾವಂತರಾಗಬೇಕೆಂದು ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ಮೂಲಕ 11 ಲಕ್ಷ ರೈತರ ಮಕ್ಕಳಿಗೆ 480 ಕೋಟಿ ಕೊಟ್ಟಿದ್ದೇವೆ. ದಾಖಲಾತಿ ಮಾಡಿಸುವ ಎಲ್ಲ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತೇವೆ. ನಾವು ಯಾರಿಂದಲೂ ಅರ್ಜಿ ಪಡೆದಿಲ್ಲ. ನಾವೇ ದಾಖಲೆ ಪಡೆದು ರೈತ ಶಕ್ತಿ ಮತ್ತು ರೈತ ವಿದ್ಯಾನಿಧಿ ಹಣ ಕೊಟ್ಟಿದ್ದೇವೆ ಎಂದರು.

ಅಧಿವೇಶನದಲ್ಲಿ ವಿರೋಧ ಪಕ್ಷಗಳು ರೈತರಿಗೆ ಏನು ಕೊಟ್ಟಿದ್ದೇರಿ ಅಂತಾ ಕೇಳುತ್ತಿದ್ದಾರೆ. ನಾನು ಅವರನ್ನು ಕೇಳುತ್ತೇನೆ ನೀವೆನು ಕೊಟ್ಟಿದ್ದೀರಿ? ಮಳೆಯಾದ ಎರಡೇ ತಿಂಗಳಿನಲ್ಲಿ ನಾವು ಮಳೆ ಹಾನಿ ಪರಿಹಾರ ಕೊಟ್ಟಿದ್ದೇವೆ. ಹಿಂದಿನ ಸರ್ಕಾರಗಳು ಕೊಡುತ್ತಿದ್ದ ಪರಿಹಾರಿಗಳ ಮೊತ್ತ ನಾವು ಏರಿಸಿ ಕೊಟ್ಟಿದ್ದೇವೆ. ರೈತರ ಮಕ್ಕಳ ಜೊತೆಗೆ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ಕೊಡುತ್ತೇವೆ. ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ ಮಾಡಿದ್ದೇವೆ. ಆದೇಶ ಮಾಡಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.

ಇವತ್ತು 47 ಸಾವಿರ ಕೂಲಿಕಾರರ ಮಕ್ಕಳಿಗೆ ಹಣ ಬಿಡುಗಡೆ ಮಾಡುತ್ತೇವೆ. ಇಲ್ಲಿವರೆಗೂ ಯಾರೂ ಅವರ ವಿಷಯ ಮಾತನಾಡಿರಲಿಲ್ಲ. ನನ್ನ ಮನಸ್ಸು ತಡೆಯಲಿಲ್ಲ, ಅವರು ಪಾಪ ಮನವಿ ಸಹ ಕೊಡುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬರ್ತಾರೆ. ಅವರು ಮಕ್ಕಳು ಕಲಿಯಬೇಕು ಅಲ್ವಾ? ಅವರು ಗುಡಿಸಲಿನಿಂದ ಹೊರಗೆ ಬರಬೇಕು ಅಲ್ವಾ, ಅಂತಹ ಕ್ರಾಂತಿಕಾರಿ ಬದಲಾವಣೆ ನಾನು ಮಾಡಿದ್ದೇನೆ. ಬದಲಾವಣೆ ತಳಮಟ್ಟದಿಂದಲೇ ಬರಬೇಕು. ಯಾರೂ ಮಾಡದ ಕಾರ್ಯ ನಾನು ಮಾಡಿದ್ದೇನೆ. ಇದರಿಂದ ನನಗೆ ಹಂಡೆ ಹಾಲು ಕುಡಿದಷ್ಟು ಸಂತೋಷ ಆಗಿದೆ ಎಂದು ಭಾವೋದ್ವೇಗದಿಂದ ಹೇಳಿದರು.

ಕೃಷಿ ಕಾರ್ಮಿಕರ‌ ಮಕ್ಕಳಿಗೂ ವಿದ್ಯಾರ್ಥಿ ವೇತನ

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ಕೃಷಿ ಇಲಾಖೆ ಅಧಿಕಾರಿಗಳು ಜೈ ಕಿಸಾನ್ ಹೇಳಿ ಫೋನ್ ರಿಸೀವ್ ಮಾಡಲು ಹೇಳಿದ್ದೆ. ಇಡೀ ದೇಶಕ್ಕೆ ‌ಅನ್ನ ಕೊಡುವವನು ರೈತ. ಯಾವ ಟಾಟಾ ಬಿರ್ಲಾಗೂ ಅನ್ನ ಕೊಡಲು ಆಗುವುದಿಲ್ಲ. ಕೃಷಿ ನಾಶವಾದರೆ ದೇಶಕ್ಕೆ ದುರ್ಭಿಕ್ಷೆ ಬರುತ್ತದೆ. 12ನೇ ಶತಮಾನದಿಂದ ಇಲ್ಲಿವರೆಗೆ ಎಲ್ಲರೂ ಕೃಷಿ ಮಹತ್ವ ಹೇಳುತ್ತ ಬಂದಿದ್ದರು. ರೈತನ ಮುಖದಲ್ಲಿ ಮಂದಹಾಸ ಇರಬೇಕು ಎನ್ನುವುದು ನಮ್ಮ ಧ್ಯೇಯ. ಅದಕ್ಕಾಗಿಯೇ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ ಕೊಟ್ಟಿದ್ದಾರೆ. ಪ್ರಧಾನಿ ಕೊಡುವ 6000ಕ್ಕೆ ಬಿ.ಎಸ್.ಯಡಿಯೂರಪ್ಪ ಅವರು 4000 ಸೇರಿಸಿ ಕೊಟ್ಟರು ಎಂದರು.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದೇವೆ. ಭಾರತದಲ್ಲಿ ಇಂತಹ ಯೋಜನೆ ಜಾರಿಗೆ ತಂದ ಏಕೈಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಈ ವರ್ಷದಿಂದ ಇದು ಕೃಷಿ ಕಾರ್ಮಿಕರ‌ ಮಕ್ಕಳಿಗೂ ಸಿಗಲಿದೆ. 4.55 ಲಕ್ಷ ಮಕ್ಕಳಿಗೆ 241.86 ಕೋಟಿ ರೂಪಾಯಿ ಇಂದು ಸಿಎಂ ಬಿಡುಗಡೆ ಮಾಡಲಿದ್ದಾರೆ. 51.20 ಲಕ್ಷ ರೈತರಿಗೆ 378 ಕೋಟಿ ರೂ. ಡಿಸೇಲ್ ಸಬ್ಸಿಡಿ ಕೊಡುತ್ತಿದ್ದೇವೆ, ಈ ಹಣ ಇವತ್ತು ರೈತರ ಖಾತೆಗೆ ನೇರವಾಗಿ ಜಮೆ ಆಗಲಿದೆ ಎಂದರು.

ಕೃಷಿ ಸಚಿವರ ಭಾಷಣದ ವೇಳೆ ತಟ್ಟಿದ ಪ್ರತಿಭಟನೆಯ ಬಿಸಿ

ಕೃಷಿ ಯೋಜನೆಗಳ ಚಾಲನೆ ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಭಾಷಣ ಮಾಡುತ್ತಿದ್ದಾಗ ರೈತರ ಪ್ರತಿಭಟನೆ ಎದುರಿಸಬೇಕಾಯಿತು. ಕೆಲವು ರೈತರು ಕೂಗಿ ತಮ್ಮ ಬೇಡಿಕೆ ಹೇಳಿಕೊಂಡದರು, ಇನ್ನು ಕೆಲವರು ಬೆಳಹಾನಿ ಪರಿಹಾರ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಸಚಿವರು ಸ್ಪಷ್ಟನೆ ಕೊಟ್ಟರೂ ರೈತರು ಶಾಂತವಾಗಿಲ್ಲ. ಕೊನೆಗೆ ಪ್ರತಿಭಟಿತ ರೈತರ ಬೇಡಿಕೆ ಆಲಿಸಿತ್ತೇನೆಂದು ಮುಖ್ಯಮಂತ್ರಿಯವರು ಹೇಳಿ ವೇದಿಕೆಯ ಬದಿಗೆ ಬರುವಂತೆ ಕೋರಿದರು. ಬಳಿಕ ರೈತರ ಆಕ್ರೋಶ ಕಡಿಮೆಯಾಯ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Tue, 31 January 23