ಧಾರವಾಡ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಕ್ಕಮಕ್ಕಳ ಸೆರೆಬ್ರಲ್ ಪಾಲ್ಸಿ ರೋಗ ಪತ್ತೆಗೆ ನೂತನ ಯಂತ್ರ ಆವಿಷ್ಕಾರ

| Updated By: guruganesh bhat

Updated on: Sep 30, 2021 | 7:22 PM

ಮಕ್ಕಳು ಬೆಳೆದಂತೆ ನಡೆಯುವಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ನಡೆಯುವ ವಿಧಾನ ಸೇರಿದಂತೆ ಅನೇಕ ವರ್ತನೆಗಳಿಂದ ಅವರಲ್ಲಿನ ಲೋಪ ಕಂಡು ಬರುತ್ತದೆ. ಇದನ್ನು ಸೆರೆಬ್ರಲ್ ಪಾಲ್ಸಿ ರೋಗ ಎನ್ನಲಾಗುತ್ತದೆ.

ಧಾರವಾಡ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಕ್ಕಮಕ್ಕಳ ಸೆರೆಬ್ರಲ್ ಪಾಲ್ಸಿ ರೋಗ ಪತ್ತೆಗೆ ನೂತನ ಯಂತ್ರ ಆವಿಷ್ಕಾರ
ನೂತನ ಯಂತ್ರದೊಂದಿಗೆ ಸಂಶೋಧಕರ ತಂಡ
Follow us on

ಧಾರವಾಡ: ಚಿಕ್ಕಮಕ್ಕಳಲ್ಲಿ ಸೆರೆಬ್ರಲ್ ಪಾಲ್ಸಿ ಎಂಬ ರೋಗ ಪತ್ತೆ ಹಚ್ಚುವುದು ತುಂಬಾನೇ ಕಷ್ಟಕರ. ಈ ರೋಗವನ್ನು ವೈದ್ಯರು ಭೌತಿಕವಾಗಿ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬರುತ್ತಾರೆ. ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಈ ರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ನೂತನ ಯಂತ್ರವೊಂದನ್ನು ಶೋಧಿಸಿದ್ದಾರೆ.

ಚಿಕ್ಕಮಕ್ಕಳಲ್ಲಿ ಕಂಡು ಬರುವ ಸೆರೆಬ್ರಲ್ ಪಾಲ್ಸಿ ಅನ್ನುವ ರೋಗ ಪೋಷಕರನ್ನು ಸಾಕಷ್ಟು ಕಂಗೆಡಿಸುತ್ತದೆ. ಇನ್ನು ಈ ರೋಗದಿಂದ ಬಳಲುವ ಮಕ್ಕಳಿಗೆ ದೈಹಿಕ ವ್ಯಾಯಾಮ ಮಾಡಿಸೋದಂತೂ ದೊಡ್ಡ ಕಷ್ಟದ ಕೆಲಸ‌. ಈ ಕೆಲಸವನ್ನು ಸರಳವಾಗಿ ಮಾಡಲು ಧಾರವಾಡದ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಸತೀಶ ಭೈರಣ್ಣವರ್ ಹೊಸ ಯಂತ್ರವೊಂದನ್ನು ಸಂಶೋಧಿಸಿದ್ದಾರೆ. ಮಕ್ಕಳ ಜನನದ ಸಮಯದಲ್ಲಿ ಹಲವು ಕಾರಣಗಳಿಂದ ವಿಕಲಚೇತನ ಅಥವಾ ಬುದ್ದಿ ಬೆಳವಣಿಗೆ ಆಗದೇ ಇರುವಂತಹ ಉದಾಹರಣೆಗಳಿರುತ್ತವೆ. ಮಕ್ಕಳು ಬೆಳೆದಂತೆ ನಡೆಯುವಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ನಡೆಯುವ ವಿಧಾನ ಸೇರಿದಂತೆ ಅನೇಕ ವರ್ತನೆಗಳಿಂದ ಅವರಲ್ಲಿನ ಲೋಪ ಕಂಡು ಬರುತ್ತದೆ. ಇದನ್ನು ಸೆರೆಬ್ರಲ್ ಪಾಲ್ಸಿ ರೋಗ ಎನ್ನಲಾಗುತ್ತದೆ. ಇಂತಹ ಮಕ್ಕಳಿಗೆ ಬಂದಿರುವ ರೋಗವನ್ನು ವೈದ್ಯರು ಈ ಮೊದಲು ಭೌತಿಕವಾಗಿಯೇ ಪತ್ತೆ ಹಚ್ಚಬೇಕಿತ್ತು. ಇದೀಗ ಎಸ್‌ಡಿಎಂ ಸಂಸ್ಥೆಯಲ್ಲಿರುವ ಕ್ರಾಫ್ಟಿಂಗ್ ಟೆಕ್ನಾಲಜಿಸ್ ತಂಡವು ಟ್ರೆಡ್ ಮಿಲ್ ಆಧಾರಿತ ಫುಟ್ ಪ್ರೆಷರ್ ಅನಲೈಜರ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಪಾದದ‌ಲ್ಲಿನ ಬದಲಾವಣೆ ಗುರುತಿಸಲು ಸಹಾಯ
ಈ ಯಂತ್ರದ ಮೂಲಕ ಮಕ್ಕಳ ಪಾದದ ಭಂಗಿಯಲ್ಲಿನ ಬದಲಾವಣೆಯನ್ನು ಯಂತ್ರಕ್ಕೆ ಅಳವಡಿಸಲಾದ ಸ್ಕ್ರೀನ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದು. ಜೊತೆಗೆ ಈ ತಂತ್ರಜ್ಞಾನದ ಮೂಲಕ ಮಕ್ಕಳ ಪಾದದ ಒತ್ತಡದ ದತ್ತಾಂಶವನ್ನು ಸ್ವಯಂಚಾಲಿತವಾಗಿ ವೈದ್ಯರಿಗೆ ಕಳುಹಿಸಲಾಗುತ್ತದೆ. ಈ ಆಧಾರದ ಮೇಲೆ ವೈದ್ಯರು ಮುಂದಿನ ಚಿಕಿತ್ಸೆ ಮಾಡಲು ಅನುಕೂಲ. ಈ ಟ್ರೆಡ್ ಮಿಲ್ ಆಧಾರಿತ ಫುಟ್ ಪ್ರೆಷರ್ ಅನಲೈಜರ್ನಲ್ಲಿ ಮಕ್ಕಳು ವಾಕಿಂಗ್ ಮಾಡುವಾಗ ಬೇಸರ ಬಂದರೆ, ಸ್ಕೀನ್ ಮೇಲೆ ಆಟಗಳನ್ನು ಕೂಡ ಅಳವಡಿಸಲಾಗಿದೆ. ಇದರಿಂದಾಗಿ ಮಕ್ಕಳು ಸಾಕಷ್ಟು ಹೊತ್ತಿನವರೆಗೆ ಟ್ರೆಡ್ ಮಿಲ್ ನಲ್ಲಿ ನಡೆದಾಡಬಹುದು. ಮಕ್ಕಳಿಗೆ ಮನರಂಜನೆ ಜೊತೆಗೆ ದೈಹಿಕ ವ್ಯಾಯಾಮವೂ ಆಗುತ್ತದೆ.

ಎಸ್​ ಡಿ ಎಂ ಇಂಜಿನಿಯರಿಂಗ್ ಕಾಲೇಜು ಧಾರವಾಡ

ಈ ಯಂತ್ರದ ಸಂಶೋಧನೆಗೆ ವಿದ್ಯಾರ್ಥಿನಿ ಅಮೂಲ್ಯ ಕುಲಕರ್ಣಿ ಹಾಗೂ ಡಾ. ಸಂಜಯ ಸಹಕಾರ ಕೂಡ ಇದೆ. ಈ ಯಂತ್ರದ ಉತ್ಪಾದನೆಗೆ 60 ಸಾವಿರ ರೂಪಾಯಿ ವೆಚ್ಚವಾಗಲಿದೆ. ಮನೆಯಲ್ಲಿ ಅದಾಗಲೇ ಟ್ರೆಡ್ ಮಿಲ್ ಇದ್ದರೆ, ಅದಕ್ಕೆ ಈ ಯಂತ್ರವನ್ನು ಅಳವಡಿಸದರೆ, ಕೇವಲ 25 ಸಾವಿರದಷ್ಟು ಮಾತ್ರ ಖರ್ಚಾಗಲಿದೆ.

ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿದೆ : ಡಾ. ಸತೀಶ ಭೈರಣ್ಣವರ್
ಈ ಯಂತ್ರದ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಯಂತ್ರದಿಂದ ರೋಗಿಗಳ ಪೋಷಕರ ಜೊತೆಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸಾಕಷ್ಟು ಅನುಕೂಲವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಇದನ್ನು ಮನೆಯಲ್ಲಿ ಇಟ್ಟುಕೊಳ್ಳಹುದು ಅನ್ನುತ್ತಾರೆ ಇದನ್ನು ಸಂಶೋಧಿಸಿದ ಡಾ. ಸತೀಶ ಭೈರಣ್ಣನವರ್.

ಟಿವಿ9 ಡಿಜಿಟಲ್‌ ಜತೆ‌ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಗೋಪಿನಾಥ ಅವರು, ಇದೊಂದು ಅದ್ಭುತ ಸಂಶೋಧನೆ. ಈ ಯಂತ್ರವನ್ನು ಸಂಶೋಧಿಸಲು ಡಾ. ಸತೀಶ ಮತ್ತು ತಂಡದವರು ಸಾಕಷ್ಟು ಶ್ರಮವಹಿಸಿದ್ದಾರೆ. ಯಂತ್ರವನ್ನು ಸಂಶೋಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಶುಭಾಶಯ ತಿಳಿಸಿದ್ದಾರೆ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ
ಹಿರಿಯ ವರದಿಗಾರ
ಟಿವಿ-9, ಧಾರವಾಡ

ಇದನ್ನೂ ಓದಿ: 

Hubballi Dharwad NH 4: ಧಾರವಾಡದ ಸಾವಿನ ರಸ್ತೆ ಅಗಲೀಕರಣಕ್ಕೆ ಸಿಕ್ತು ಗ್ರೀನ್ ಸಿಗ್ನಲ್! ವರ್ಷಗಳ ಕನಸು ನನಸು?

Temple Tour: ಕೋಲಾರದಲ್ಲಿದೆ ದಿನಕರನ ಏಕೈಕ ದಿವ್ಯ ಮಂದಿರ