ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡರಾ ಹೆಚ್​ಸಿ ಮಹದೇವಪ್ಪ? ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಸಚಿವ

|

Updated on: Nov 08, 2023 | 8:46 PM

ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ ಎಂದು ಸಚಿವ ಹೆಚ್​ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.

ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡರಾ ಹೆಚ್​ಸಿ ಮಹದೇವಪ್ಪ? ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಸಚಿವ
ಸಚಿವ ಮಹದೇವಪ್ಪ
Follow us on

ಧಾರವಾಡ, ನವೆಂಬರ್​​​​ 8: ಧಾರವಾಡ ಸಪ್ತಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗೆ ಇಂದು ಸಚಿವ ಹೆಚ್​ಸಿ ಮಹದೇವಪ್ಪ (H.C.Mahadevappa) ಭೇಟಿ ನೀಡಿದ್ದರು. ಹಾಸ್ಟೆಲ್‌ನ ಅಡುಗೆ ಮನೆಗೆ ಶೂ ಹೊರಗೆ ಕಳಚಿಟ್ಟು ಹೋಗಿದ್ದರು. ಬಳಿಕ ಹೊರಗಡೆ ಬಂದಾಗ ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತಾಗಿ ಸ್ವತಃ ಸಚಿವ ಹೆಚ್​ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ. ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಹಿಂದೆ ಮೊಣಕಾಲು ನೋವಿಗೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ. ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿಗಳ ಬಳಿ ಕಾಲಿನ ಸಮಸ್ಯೆಯ ಹಿನ್ನಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ ಎಂದಿದ್ದಾರೆ.

ಸಚಿವ ಹೆಚ್​ಸಿ ಮಹದೇವಪ್ಪ ಟ್ವೀಟ್ 

ಸಹಾಯಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಇಂತಹ ಸಣ್ಣಪುಟ್ಟ ವಿವಾದಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ಧನ್ಯವಾದ ತಿಳಿಸಿದ್ದಾರೆ.

ಬಿಜೆಪಿ ಇತಿಹಾಸವೇ ಹಾಗಿದೆ

ಆಪರೇಷನ್ ಕಮಲ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದ ಅವರು, ನಮ್ಮ ಅಧ್ಯಕ್ಷರಿಗೆ ಮಾಹಿತಿ ಇರುತ್ತೆ, ಹೀಗಾಗಿ ಅವರು ಹೇಳಿದ್ದಾರೆ. ನಾನು ಅಧಿಕಾರಿಗಳ ಸಭೆಯಲ್ಲಿದ್ದೇನೆ, ಹೀಗಾಗಿ ಹೆಚ್ಚಿನ ಮಾಹಿತಿ ಇಲ್ಲ. ರಾಜ್ಯದಲ್ಲಿ ಬಹುಮತವಿಲ್ಲದೇ ಬಿಜೆಪಿ 2 ಬಾರಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಇತಿಹಾಸವೇ ಹಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಕ್ಷಕ್ಕೆ ಬರುವಾಗ ಬಿಜೆಪಿಯವರು ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡ್ತಾರೆ: ಸ್ವಪಕ್ಷದ ವಿರುದ್ಧ ಗುಡುಗಿದ ಸೋಮಶೇಖರ್

ಕಿಯೋನಿಕ್ಸ್ ಎಂಡಿಗೆ ಕಡ್ಡಾಯ ರಜೆ ಶಿಕ್ಷೆ ವಿಚಾರವಾಗಿ ಮಾತನಾಡಿರುವ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಗುತ್ತಿಗೆದಾರರು ದೂರು ಕೊಟ್ಟಿದ್ದಾರಂತೆ. ದೂರು ಕೊಟ್ಟಿರುವ ಹಿನ್ನೆಲೆ ವಿಚಾರಣೆ ಆಗುತ್ತದೆ. ಅಂತದ್ದು ಇದ್ದರೆ ತನಿಖೆಯಾಗಬೇಕು. ಅವರು ಯಾರೇ ಆಗಿರಲಿ ಕ್ರಮ ಆಗಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:04 pm, Wed, 8 November 23