ಧಾರವಾಡದ ಐಐಟಿ ನೂತನ ಕಟ್ಟಡ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇದೇ ಮಾರ್ಚ್ 12 ರಂದು ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬರಲಿದ್ದಾರೆ. ಕಾರ್ಯಕ್ರಮದ ಸಿದ್ಧತಾ ಕಾರ್ಯಗಳನ್ನು ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಮಂಗಳವಾರ ವೀಕ್ಷಣೆ ಮಾಡಿದರು. ಮುಗಿಲೆತ್ತರಕ್ಕೆ ಎದ್ದು ನಿಂತಿರೋ ಕಟ್ಟಡ; ದೂರದಿಂದಲೇ ಗಮನ ಸೆಳೆಯುವಂಥ ವಿನ್ಯಾಸ; ಕಟ್ಟಡದ ಮುಂದಿನ ವಿಶಾಲ ಮೈದಾನದಲ್ಲಿ ಸಿದ್ಧಗೊಳ್ಳುತ್ತಿರೋ ಬೃಹತ್ ವೇದಿಕೆ; ವೇದಿಕೆ ನಿರ್ಮಾಣದ ಕಾರ್ಯವನ್ನು ಪರಿಶೀಲಿಸುತ್ತಿರೋ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) – ಧಾರವಾಡದ ಐಐಟಿ ನೂತನ ಕಟ್ಟಡ ಕಾಮಗಾರಿ ಇದೀಗ ಮುಕ್ತಾಯವಾಗಿದ್ದು, ಅದರ ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಬರುತ್ತಿದ್ದಾರೆ. ಮಾರ್ಚ್ 12 ರಂದು ಕಟ್ಟಡದ ಉದ್ಘಾಟನೆ ನಡೆಯಲಿದ್ದು (Dharwad IIT Inauguration), ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ಧಾರವಾಡದ ಚಿಕ್ಕಮಲ್ಲಿಗೆವಾಡ ಗ್ರಾಮದ ವ್ಯಾಪ್ತಿಯಲ್ಲಿ ತಲೆ ಎತ್ತಿ ನಿಂತಿರೋ ಅದ್ಭುತ ಕಟ್ಟಡದ ಪಕ್ಕವೇ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಮಾರ್ಚ್ 12 ರಂದು ಮಂಡ್ಯ ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ಪ್ರಧಾನಿ ಮೋದಿ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬಳಿಕ ಹುಬ್ಬಳ್ಳಿ ಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸೋ ಪ್ರಧಾನಿ ಮೋದಿ, ಅನೇಕ ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಏಷ್ಯಾದ ಅತಿ ಉದ್ದದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾರ್ಮ್ ಸೇರಿದಂತೆ ಅನೇಕ ಕಾಮಗಾರಿಗಳ ಉದ್ಘಾಟನೆಯನ್ನು ಇದೇ ಕಾರ್ಯಕ್ರಮದಲ್ಲಿ ನೆರವೇರಿಸಲಿದ್ದಾರೆ. ಒಟ್ಟು 5 ಸಾವಿರ ಕೋಟಿ ರೂಪಾಯಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಅಂದಿನ ಕಾರ್ಯಕ್ರಮದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯಿಂದಲೇ ಸುಮಾರು ಎರಡು ಲಕ್ಷ ಜನರು ಭಾಗವಹಿಸಲಿದ್ದಾರೆ. ಇನ್ನು ಇತ್ತೀಚಿಗೆ ಧಾರವಾಡಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಐಐಟಿಗೆ ಜಾಗ ನೀಡಿದ್ದು ನಮ್ಮ ಸರಕಾರ. ನಾವು ಮಾಡಿದ ಅಡುಗೆಯನ್ನು ಬಡಿಸಲು ಮೋದಿ ಬರುತ್ತಿದ್ದಾರೆ ಅಂತಾ ಲೇವಡಿ ಮಾಡಿದ್ದರು.
ಸಿದ್ದರಾಮಯ್ಯ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಜೋಶಿ, ಸಿದ್ದರಾಮಯ್ಯ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಏಕೆಂದರೆ ಕಾಂಗ್ರೆಸ್ ನವರು ಕೆಲಸ ಮಾಡದೇ ಇರೋದಕ್ಕೆ ಬಿಜೆಪಿಗೆ ಅವಕಾಶ ಸಿಕ್ಕಿದೆ ಅನ್ನೋ ಥರ ಮಾತನಾಡುತ್ತಿದ್ದಾರೆ. ಅವರು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಹೆಚ್ಚು ಓಡಾಡಿದ್ದಾರೆ. ಹೀಗಾಗಿ ರಾಹುಲ್ ಥರಾನೇ ಮಾತಾಡುತ್ತಿದ್ದಾರೆ.
ರಾಹುಲ್ ಅವರಿಗೆ ತಿಳಿವಳಿಕೆ ಇಲ್ಲ. ಹೀಗಾಗಿ ರಾಹುಲ್ ಈ ರೀತಿ ಮಾತಾಡಿದರೆ ಅನುಕಂಪ ತೋರಿಸಬಹುದು. ಆದರೆ ಸಿದ್ದರಾಮಯ್ಯ ಆ ರೀತಿ ಮಾತಾಡಿದರೆ ಏನು ಹೇಳಬೇಕು ಅಂತಾ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಹೆಚ್ಚು ಕಾಲ ಕಳೆದಿದ್ದರಿಂದ ಅವರಂತೆಯೇ ಮಾತಾಡುತ್ತಿದ್ದಾರೆ ಅಂತಾ ಮಾತಿನಲ್ಲಿಯೇ ಚುಚ್ಚಿದರು.
A warm welcome to Prime Minister Shri @narendramodi Ji to Dharwad.
The Prime Minister will be in Dharwad on the 12th of March to inaugurate the newly constructed building of the prestigious Indian Institute of Technology and several other key projects. pic.twitter.com/Sr2I9hyStB
— Pralhad Joshi (@JoshiPralhad) March 8, 2023
ಸಿದ್ಧತೆ ಪರಿಶೀಲನೆ ವೇಳೆ ಜೋಶಿ ರೋಡ್ ರೋಲರ್ ಹತ್ತಿ ಕುಳಿತು, ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಅಲ್ಲಿದ್ದವರು ರೋಲರ್ ಓಡಿಸುವಂತೆ ಹೇಳಿದರಾದರೂ, ಅದು ತಪ್ಪು ಅಂತಾ ನಕ್ಕ ಜೋಶಿಯವರು ಅಲ್ಲಿಂದು ಇಳಿದು ಬಂದರು. ಇದೀಗ ಮೋದಿ ಆಗಮನಕ್ಕಾಗಿ ವಿದ್ಯಾಕಾಶಿ ಧಾರವಾಡ ಎದುರು ನೋಡುತ್ತಿದೆ. ಕಳೆದ ತಿಂಗಳಷ್ಟೇ ಹುಬ್ಬಳ್ಳಿಗೆ ಬಂದಿದ್ದ ಮೋದಿ ಇದೀಗ ಧಾರವಾಡಕ್ಕೂ ಬರುತ್ತಿರೋದು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸಾಕಷ್ಟು ಜೋಷ್ ಉಂಟು ಮಾಡುತ್ತಿರೋದಂತೂ ಸತ್ಯ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:05 pm, Wed, 8 March 23