AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲೊಂದು ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಧಾರವಾಡದಲ್ಲೊಂದು ಘೋರ ದುರಂತ ನಡೆದು ಹೋಗಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ಚಿಕ್ಕ ಮಕ್ಕಳನ್ನು ಸಮೇತ ದಂಪತಿ ಸಹ ದುರಂತ ಅಂತ್ಯಕಂಡಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಘಟನೆ ಸಂಬಂಧ ಸ್ಥಳೀಯರು ಮಮ್ಮಲ ಮರುಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಅಷ್ಟಕ್ಕೂ ಆತ್ಮಹತ್ಯೆಗೆ ಕಾರಣವೇನು? ಜೀವ ಕಳೆದುಕೊಳ್ಳುವಷ್ಟು ಏನಾಗಿತ್ತು?

ಧಾರವಾಡದಲ್ಲೊಂದು ಘೋರ ದುರಂತ:  ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಬಾವಿಗೆ ಹಾರಿ ನಾಲ್ವರು ಆತ್ಮಹತ್ಯೆ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Nov 21, 2025 | 6:36 PM

Share

ಧಾರವಾಡ, (ನವೆಂಬರ್ 21): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಸಮೇತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ತಂದೆ ವಿಠ್ಠಲರಾವ್(85), ಪುತ್ರ ನಾರಾಯಣ ಶಿಂಧೆ(42) ಮಕ್ಕಳಾದ ಶಿವರಾಜ(12), ಶ್ರೀನಿಧಿ(10) ಮೃತ ದುರ್ವೈವಿಗಳು. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ನಾರಾಯಣ ಶಿಂಧೆ ಹಾಗೂ ಶಿಲ್ಪಾ ಶಿಂಧೆ ದಂಪತಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇತ್ತು. ನಾರಾಯಣನ ತಂದೆಯೂ ಇವರೊಂದಿಗೇ ಇರುತ್ತಿದ್ದರು. ಇಂಥ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿಕೊಂಡು ಸಂಸಾರದ ನೌಕೆಯನ್ನು ತೇಲಿಸಿಕೊಂಡು ಹೋಗುತ್ತಿತ್ತು. ನಾರಾಯಣ ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶಿಲ್ಪಾ ಒಬ್ಬರ ಮನೆಯಲ್ಲಿ ವೃದ್ಧೆಯೊಬ್ಬರನ್ನು ನೋಡಿಕೊಳ್ಳೋ ಕೆಲಸ ಮಾಡುತ್ತಿದ್ದರು. ಹಿರಿಯ ಮಗು ಶಿವರಾಜ (12) ಹಾಗೂ ಮಗಳು ಶ್ರೀನಿಧಿ (10) ಶಾಲೆಗೆ ಹೋಗುತ್ತಿದ್ದರು.

ನಿತ್ಯವೂ ಶಾಲೆಗೆ ಮಕ್ಕಳನ್ನು ಬಿಟ್ಟು ಬರೋ ಕೆಲಸ ತಂದೆ ನಾರಾಯಣನದ್ದೇ ಆಗಿತ್ತು. ಇಂದು ಕೂಡ ಇಬ್ಬರೂ ಮಕ್ಕಳನ್ನು ತಯಾರು ಮಾಡಿ, ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಹೋಗುವಾಗ ತಂದೆ 80 ವರ್ಷದ ತಂದೆ ವಿಠ್ಠಲರಾವ್ ಅವರನ್ನೂ ಕರೆದೊಯ್ದಿದ್ದಾರೆ. ಇತ್ತ ಎಂದಿನಂತೆ ಶಿಲ್ಪಾ ಧಾರವಾಡಕ್ಕೆ ಕೆಲಸಕ್ಕೆಂದು ಹೋಗಿದ್ದಾರೆ. ಆದರೆ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರಭಾಗದಲ್ಲಿರೋ ಸಣ್ಣ ಬಾವಿಯೊಂದರಲ್ಲಿ ಓರ್ವ ವ್ಯಕ್ತಿಯ ಶವ ತೇಲುತ್ತಿರೋ ಬಗ್ಗೆ ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಶವವನ್ನು ಹೊರ ತೆಗೆಯುತ್ತಿದ್ದಂತೆಯೇ ಮತ್ತೊಂದು ಶವ ಪತ್ತೆಯಾಗಿದೆ. ಅದನ್ನೂ ತೆಗೆಯುತ್ತಲೇ ಶಾಲಾ ಸಮವಸ್ತ್ರದಲ್ಲಿರೋ ಎರಡು ಮಕ್ಕಳ ಶವಗಳು ಕೂಡ ತೇಲಿ ಬಂದಿವೆ. ಇದೇ ವೇಳೆ ಬಾವಿಯ ತಟದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಆಧಾರದ ಮೇಲೆ ಇದು ನಾರಾಯಣ ಶಿಂಧೆ ಕುಟುಂಬದ್ದು ಅಂತಾ ಪೊಲೀಸರು ಪತ್ತೆ ಮಾಡಿದ್ದಾರೆ.

ನಾರಾಯಣ ಅನೇಕ ಕಡೆಗಳಲ್ಲಿ ಸುಮಾರು 15 ಲಕ್ಷದಷ್ಟು ಸಾಲ ಮಾಡಿದ್ದರಂತೆ. ಆ ಸಾಲವನ್ನು ತೀರಿಸೋದರ ಬಗ್ಗೆ ಸಾಕಷ್ಟು ಆತಂಕವನ್ನೂ ಹೊರಹಾಕುತ್ತಿದ್ದನಂತೆ. ಆದರೆ ಆತನ ಆತಂಕ ಈ ಮಟ್ಟಕ್ಕೆ ತಂದು ನಿಲ್ಲಿಸುತ್ತೆ ಅನ್ನೋದನ್ನು ಶಿಲ್ಪಾ ಊಹಿಸಿರಲಿಲ್ಲ. ಇಂದು ಎಂದಿನಂತೆ ಮಕ್ಕಳು ಹಾಗೂ ತಂದೆಯನ್ನು ಕರೆದೊಯ್ದು ಮೊದಲಿಗೆ ಎರಡೂ ಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ. ಬಳಿಕ ತಂದೆ ಹಾಗೂ ತಾನು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಯಿಂದಾಗಿ ಆತನ ಬಂಧುಗಳೆಲ್ಲ ಕಣ್ಣೀರ ಕೋಡಿಯಲ್ಲಿ ಮುಳುಗುವಂತಾಗಿದೆ.

ಇದೀಗ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆ ಮತ್ತೆ ಬೇರೆ ಯಾವುದಾದರೂ ಕಾರಣವಿರಬಹುದೇ ಅನ್ನೋದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

Published On - 5:07 pm, Fri, 21 November 25