ಸಿಎಂ ಹೇಳಿ 20 ದಿನವಾದ್ರೂ ಬಂದಿಲ್ಲ ಗೃಹಲಕ್ಷ್ಮಿ ದುಡ್ಡು, ಎಲ್ಲೋಯ್ತು 5 ಸಾವಿರ ಕೋಟಿ ರೂ: ಮಹೇಶ್ ಟೆಂಗಿನಕಾಯಿ ಪ್ರಶ್ನೆ

ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆಯಾಗದೇ ಇರುವುದು ಮತ್ತೆ ಸದ್ದುಮಾಡುವ ಸಾಧ್ಯತೆ ಹೆಚ್ಚಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಇದೀಗ ಮತ್ತೆ ದನಿಯೆತ್ತಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. 5 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ.

ಸಿಎಂ ಹೇಳಿ 20 ದಿನವಾದ್ರೂ ಬಂದಿಲ್ಲ ಗೃಹಲಕ್ಷ್ಮಿ ದುಡ್ಡು, ಎಲ್ಲೋಯ್ತು 5 ಸಾವಿರ ಕೋಟಿ ರೂ: ಮಹೇಶ್ ಟೆಂಗಿನಕಾಯಿ ಪ್ರಶ್ನೆ
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಗೃಹಲಕ್ಷ್ಮಿ ಯೋಜನೆ ಸಂಗ್ರಹ ಚಿತ್ರ
Edited By:

Updated on: Dec 29, 2025 | 12:02 PM

ಹುಬ್ಬಳ್ಳಿ, ಡಿಸೆಂಬರ್ 29: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬಿಡುಗಡೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಆರೋಪಿಸಿದರು.

ಈ ವಿಷಯವನ್ನು ತಾವು ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು. ಅಧಿವೇಶನದ ವೇಳೆ ಸಿಎಂ ಆದಷ್ಟು ಬೇಗ ಹಣ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಆದರೆ ಸಿಎಂ ಹೇಳಿ ಇಪ್ಪತ್ತು ದಿನಗಳಾದರೂ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂದು ಟೀಕಿಸಿದರು.

ಐದು ಸಾವಿರ ಕೋಟಿ ರೂ. ಹಣ ಎಲ್ಲಿ: ಟೆಂಗಿನಕಾಯಿ ಪ್ರಶ್ನೆ

ಪೂರಕ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ಐದು ಸಾವಿರ ಕೋಟಿ ರೂಪಾಯಿ ಹಣದ ಯಾವುದೇ ಪ್ರಸ್ತಾಪವೇ ಇಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯ್ತು ಎಂಬುದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಟೆಂಗಿನಕಾಯಿ ಆಗ್ರಹಿಸಿದರು.

ಇನ್ನು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ತಾಕೀತು ಮಾಡಲಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಆರೋಪಿಸಿದರು. ಹತ್ತನೇ ತಾರೀಖಿನಿಂದಲೇ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಫೆಬ್ರವರಿ–ಮಾರ್ಚ್ ತಿಂಗಳ ಹಣದ ಬಗ್ಗೆ ಮಾಹಿತಿ ಕೇಳಿದ್ದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದರು.

ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷಮೆಗೆ ಪ್ರತಿಪಕ್ಷ ಪಟ್ಟು

ಇತರೆ ಜಿಲ್ಲೆಗಳಿಗೂ ಮಾಹಿತಿ ಕೇಳಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಮೊದಲು ಹಣ ಜಮೆಯಾಗಿದೆ ಎಂಬ ಗೊಂದಲಕಾರಿ ಉತ್ತರ ನೀಡಿದ ಅಧಿಕಾರಿಗಳು, ನಂತರ ಕೆಲ ಜಿಲ್ಲೆಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಜಮೆಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ