ಖಾಸನೀಸ್ ಸಹೋದರರ ವಂಚನೆ ಪ್ರಕರಣಕ್ಕೆ ಮರುಜೀವ: ಹಣ ಕಳೆದುಕೊಂಡವರಿಂದ ಅರ್ಜಿ ಸ್ವೀಕಾರ

ಕಲಘಟಗಿಯ ಹರ್ಷ ಎಂಟರ್‌ಟೈನ್‌ಮೆಂಟ್ ಬಹುಕೋಟಿ ವಂಚನೆ ಪ್ರಕರಣ ಮತ್ತೆ ಸದ್ದು ಮಾಡಿದೆ. ಹತ್ತು ವರ್ಷಗಳ ಹಿಂದೆ ಸಾವಿರಾರು ಹೂಡಿಕೆದಾರರನ್ನು ಮೋಸಗೊಳಿಸಿದ್ದ ಖಾಸನೀಸ್ ಸಹೋದರರ ವಿರುದ್ಧ ಜಿಲ್ಲಾಡಳಿತವು ಕ್ಲೇಮ್ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಜಪ್ತಿ ಮಾಡಿದ ಆಸ್ತಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹಣ ಕಳೆದುಕೊಂಡ ಸಂತ್ರಸ್ತರಲ್ಲಿ ಅಲ್ಪ ಪ್ರಮಾಣದ ಮರುಪಾವತಿಯ ಆಶಾಭಾವನೆ ಚಿಗುರಿದೆ.

ಖಾಸನೀಸ್ ಸಹೋದರರ ವಂಚನೆ ಪ್ರಕರಣಕ್ಕೆ ಮರುಜೀವ: ಹಣ ಕಳೆದುಕೊಂಡವರಿಂದ ಅರ್ಜಿ ಸ್ವೀಕಾರ
ಹರ್ಷ ಎಂಟರ್‌ಟೈನ್‌ಮೆಂಟ್ ವಂಚನೆ
Edited By:

Updated on: May 13, 2026 | 6:58 PM

ಧಾರವಾಡ, ಮೇ.13: ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕಲಘಟಗಿಯ ಖಾಸನೀಸ್ ಸಹೋದರರ ‘ಹರ್ಷ ಎಂಟರ್ಟೈನ್‌ಮೆಂಟ್’ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ವಂಚನೆಗೆ ಒಳಗಾದ ಹೂಡಿಕೆದಾರರಿಂದ ಜಿಲ್ಲಾಡಳಿತವು ಕ್ಲೇಮ್ ಅರ್ಜಿಗಳನ್ನು ಪಡೆಯುತ್ತಿರುವುದು ಸಂತ್ರಸ್ತರಲ್ಲಿ ಅಲ್ಪ ಆಸೆ ಚಿಗುರಿಸಿದೆ.

2016-17ರಲ್ಲಿ ಕಲಘಟಗಿಯ ಸತ್ಯಬೋಧ, ಸಂಜೀವ್ ಮತ್ತು ಶ್ರೀಕಾಂತ್ ಖಾಸನೀಸ್ ಎಂಬ ಸಹೋದರರು ‘ಹರ್ಷ ಎಂಟರ್ಟೈನ್‌ಮೆಂಟ್’ ಕಂಪನಿ ಸ್ಥಾಪಿಸಿ, ಶೇ. 7ರಷ್ಟು ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿದ್ದರು. ಷೇರು ಮಾರುಕಟ್ಟೆ ಮತ್ತು ಸಿನೆಮಾ ನಿರ್ಮಾಣದಲ್ಲಿ ಈ ಹಣ ಹೂಡಿ ನಷ್ಟ ಅನುಭವಿಸಿದಾಗ, ಸುಮಾರು 8,000 ಜನರು ತಮ್ಮ ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ವಂಚನೆಗೆ ಒಳಗಾದವರಿಂದ ಜಿಲ್ಲಾಡಳಿತವು ಏಪ್ರಿಲ್ 27 ರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಮೇ 26ರ ವರೆಗೆ ಅವಕಾಶ ನೀಡಲಾಗಿದೆ. ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯ ಸಾವಿರಾರು ಜನರು ಸರತಿಯಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ.ಈಗಾಗಲೇ ಸಿಐಡಿ ತನಿಖೆಯ ವೇಳೆ ಜಪ್ತಿಯಾಗಿದ್ದ ಕೆಲವು ವಾಹನಗಳನ್ನು (ಬುಲೆಟ್, ಓಮಿನಿ ಮತ್ತು ಇನ್ನೋವಾ) ಹರಾಜು ಮಾಡಲಾಗಿದ್ದು, ಸುಮಾರು 9.30 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಜಪ್ತಿಯಾಗಿರುವ ಮನೆ, ಜಮೀನು ಸೇರಿದಂತೆ ಇತರ ಸ್ಥಿರ ಆಸ್ತಿಗಳ ಹರಾಜು ಪ್ರಕ್ರಿಯೆಗೆ ಕೋರ್ಟ್ ಅನುಮತಿಗಾಗಿ ಕಾಯಲಾಗುತ್ತಿದೆ. ದಶಕದ ಹಿಂದೆ ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ಧರು ಮತ್ತು ಅವರ ಕುಟುಂಬಸ್ಥರು, ಬಿಸಿಲು-ಮಳೆ ಎನ್ನದೇ ಅರ್ಜಿ ಸಲ್ಲಿಸುತ್ತಿದ್ದು, “ಕಳೆದುಕೊಂಡ ಹಣದಲ್ಲಿ ಅಲ್ಪ ಪ್ರಮಾಣವಾದರೂ ಮರಳಿ ಸಿಗಬಹುದು” ಎಂಬ ಆಶಾವಾದ ಹೊಂದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us