ಹುಬ್ಬಳ್ಳಿ: ಕರ್ನಾಟಕ ಸರ್ಕಾರ ಗೃಹಜ್ಯೋತಿ ಯೋಜನೆಯಡಿ (Gruha Jyothi) ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತದೆ ಎಂದು ತಜ್ಞರು ಅಭಿಪ್ರಯಾ ಪಟ್ಟಿದ್ದಾರೆ. ಈ ಮಧ್ಯೆಯೇ ರಾಜ್ಯ ಸರ್ಕಾರದ ಅದೆಷ್ಟೋ ಇಲಾಖೆಗಳು ಎಸ್ಕಾಂಗಳಿಗೆ (ESCOM) ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿವೆ. ಅದೇರೀತಿ ಹೆಸ್ಕಾಂ (HESCOM) ವ್ಯಾಪ್ತಿಯ ಸರ್ಕಾರಿ ಇಲಾಖೆಗಳು 885 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಿಲ್ಲ. ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಸರ್ಕಾರಿ ಇಲಾಖೆಗಳು ವಿದ್ಯುತ್ ಬಿಲ್ ಕಟ್ಟಬೇಕಿವೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಅತಿ ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿದ್ದು, 616 ಕೋಟಿ ರೂ. ಬಿಲ್ ಬಾಕಿ ಕಟ್ಟಬೇಕಿದೆ. ಪಟ್ಟಣ ಅಭಿವೃದ್ಧಿ ಇಲಾಖೆ 99 ಕೋಟಿ, ಸಣ್ಣ ನೀರಾವರಿ ಇಲಾಖೆ 36 ಕೋಟಿ, ಕರ್ನಾಟಕ ನೀರಾವರಿ ನಿಗಮ 19 ಕೋಟಿ, ಕೃಷ್ಣ ಭಾಗ್ಯ ನಿಗಮ 6.80 ಕೋಟಿ, ಬಹುಗ್ರಾಮ ನೀರು ಸರಬರಾಜು ಇಲಾಖೆ 48 ಕೋಟಿ, ಇತರೆ ಸರ್ಕಾರಿ ಇಲಾಖೆಗಳು 25.65 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ. ಒಟ್ಟು ಸರ್ಕಾರಿ ಇಲಾಖೆಗಳಿಂದಲೇ 885 ಕೋಟಿ ರೂ. ವಿದ್ಯುತ್ ಬಿಲ್ ಹೆಸ್ಕಾಂಗೆ ಬರಬೇಕಿದೆ. ಇನ್ನೂ ಹೆಸ್ಕಾಂ ಬಾಕಿ ಬಿಲ್ ವಸೂಲಿಗಾಗಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸಿದೆ.
ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿ ಯೋಜನೆಯ ಲಾಭ ಪಡೆದವರೆಷ್ಟು, ವಂಚಿತರಾದವರೆಷ್ಟು? ಇಲ್ಲಿದೆ ಮಾಹಿತಿ
ರಾಜ್ಯ ನಿರಾವರಿ ಇಲಾಖೆ ನಾಲ್ಕು ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಕಳೆದ ತಿಂಗಳು ನಡೆದ 16ನೇ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಏತ ನೀರಾವರಿ ಯೋಜನೆಗೆ ಉಚಿತ ವಿದ್ಯುತ್ ಕೊಡಿ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಏತ ನೀರಾವರಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯುತ್ಗೆ ಬಿಲ್ ಕಟ್ಟಿಲ್ಲ. ಕೋಟಿ ಕೋಟಿ ಹಣ ಬಾಕಿ ಇಟ್ಟುಕೊಂಡಿದ್ದಾರೆ ಎಂದ್ದಿದ್ದರು.
ಅಲ್ಲದೇ ತುಮಕೂರು ಗ್ರಾಮಾಂತರ, ಚನ್ನಪಟ್ಟಣದಲ್ಲಿ ಕೆರೆ ತುಂಬಿಸಲು ಏತ ನೀರಾವರಿ ಯೋಜನೆ ಬೇಕು ಅಂತಾರೆ. ಆದರೆ ಯಾರು ಸಹ ಇಂಧನ ಇಲಾಖೆಗೆ ಹಣ ಕೊಡುತ್ತಿಲ್ಲ. ತುಮಕೂರು ಗ್ರಾಮಾಂತರದಲ್ಲಿ ಆರು ಕೋಟಿ ರೂ. ಹಣ ಬಾಕಿ ಉಳಿದಿದೆ. ಚನ್ನಪಟ್ಟಣದಲ್ಲಿ ಐದು ಕೋಟಿ ರೂ. ಹಣ ಬಾಕಿ ಇದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ