Dharwad: ಮನೆ ಕಳೆದುಕೊಂಡವರ ಗೋಳು ಕೇಳೋರೇ ಇಲ್ಲ; ಉಳ್ಳವರ ಜೇಬಿಗಷ್ಟೇ ಪರಿಹಾರದ ಹಣ

| Updated By: ಸಾಧು ಶ್ರೀನಾಥ್​

Updated on: Sep 30, 2021 | 11:54 AM

ಧಾರವಾಡ: ಕಳೆದ ಎರಡು ವರ್ಷಗಳಿಂದ ಮಳೆಯಿಂದ ಮನೆ ಹಾನಿಯಾಗೊಳಗಾದವರು ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಹೀಗೆ ಮನೆ ಕಳೆದುಕೊಂಡವರಿಗೆ ಪರಿಹಾರಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳೋದೇ ಎಲ್ಲ ಕಡೆ ಗೊಂದಲವಾಗಿ ಹೋಗಿದೆ. ಇಂಥದ್ದರ ಮಧ್ಯೆಯೇ ಉಳ್ಳವರೇ ಪರಿಹಾರದ ಹಣವನ್ನು ನುಂಗಲು ನಿಂತಿರುವ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ಕಂಡು ಬಂದಿವೆ. ಬೀಳದ ಮನೆಗೆ ಲಕ್ಷ ಲಕ್ಷ ರೂಪಾಯಿ ಪರಿಹಾರ ಪಡೆದಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಅಧಿಕಾರವಿದ್ದವರು ಏನನ್ನಾದರೂ ಮಾಡಬಹುದು ಅನ್ನುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ. ಕೋಟೂರು ಗ್ರಾಮದಲ್ಲಿ ಬೀಳದ ಮನೆಗೆ […]

Dharwad: ಮನೆ ಕಳೆದುಕೊಂಡವರ ಗೋಳು ಕೇಳೋರೇ ಇಲ್ಲ; ಉಳ್ಳವರ ಜೇಬಿಗಷ್ಟೇ ಪರಿಹಾರದ ಹಣ
ಧಾರವಾಡ : ಉಳ್ಳವರ ಜೇಬಿಗೆ ಪರಿಹಾರದ ಹಣ, ಮನೆ ಕಳೆದುಕೊಂಡವರ ಗೋಳು ಕೇಳೋರೇ ಇಲ್ಲ
Follow us on

ಧಾರವಾಡ: ಕಳೆದ ಎರಡು ವರ್ಷಗಳಿಂದ ಮಳೆಯಿಂದ ಮನೆ ಹಾನಿಯಾಗೊಳಗಾದವರು ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಹೀಗೆ ಮನೆ ಕಳೆದುಕೊಂಡವರಿಗೆ ಪರಿಹಾರಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳೋದೇ ಎಲ್ಲ ಕಡೆ ಗೊಂದಲವಾಗಿ ಹೋಗಿದೆ. ಇಂಥದ್ದರ ಮಧ್ಯೆಯೇ ಉಳ್ಳವರೇ ಪರಿಹಾರದ ಹಣವನ್ನು ನುಂಗಲು ನಿಂತಿರುವ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ಕಂಡು ಬಂದಿವೆ. ಬೀಳದ ಮನೆಗೆ ಲಕ್ಷ ಲಕ್ಷ ರೂಪಾಯಿ ಪರಿಹಾರ ಪಡೆದಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಅಧಿಕಾರವಿದ್ದವರು ಏನನ್ನಾದರೂ ಮಾಡಬಹುದು ಅನ್ನುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ.

ಕೋಟೂರು ಗ್ರಾಮದಲ್ಲಿ ಬೀಳದ ಮನೆಗೆ 5 ಲಕ್ಷ ರೂಪಾಯಿ ಪರಿಹಾರ

ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಬಿಡುಗಡೆಯಾಗಿರುವ ಪರಿಹಾರದ ಬಗ್ಗೆ ಇದೀಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ನ ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶಂಕ್ರಯ್ಯ ಮಠಪತಿ ವಿರುದ್ಧ ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಗ್ರಾಮದಲ್ಲಿ ಅವರ ಮನೆ ಬಿದ್ದಿದೆ ಅಂತಾ ಅವರಿಗೆ 5 ಲಕ್ಷ ರೂಪಾಯಿ ಪರಿಹಾರ ಬಂದಿದೆ. ಅಸಲಿಗೆ ಆ ಮನೆ ಬಿದ್ದೇ ಇಲ್ಲ ಅನ್ನುವುದು ಗ್ರಾಮಸ್ಥರ ಆರೋಪ.

ಕೋಟೂರು ಗ್ರಾಮದಲ್ಲಿ ಬೀಳದ ಮನೆಗೆ 5 ಲಕ್ಷ ರೂಪಾಯಿ ಪರಿಹಾರ- ಗ್ರಾಮಸ್ಥರ ಆರೋಪ.

ಅವರು ತಮ್ಮ ಅಧಿಕಾರವಧಿಯಲ್ಲಿ ಪ್ರಭಾವ ಬಳಸಿ, ತಮ್ಮ ಮನೆಯನ್ನು ಎ ಕೆಟಗರಿಯಲ್ಲಿ ಸೇರಿಸಿ, 5 ಲಕ್ಷ ರೂಪಾಯಿ ಪರಿಹಾರವನ್ನು ಪಡೆದಿದ್ದಾರೆ ಅನ್ನುವುದೇ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ನೂರಾರು ಮನೆಗಳು ಬಿದ್ದಿದ್ದರೂ ಕೇವಲ ನಾಲ್ಕೇ ಮನೆಗಳಿಗೆ ಪರಿಹಾರ ನೀಡಲಾಗಿದೆ.

ಅದರಲ್ಲಿ ಈ ಶಂಕ್ರಯ್ಯ ಮಠಪತಿ ಅವರ ಮನೆಯೂ ಒಂದು. ಒಂದು ವೇಳೆ ಮನೆ ಬಿದ್ದಿತ್ತು ಅಂದರೆ ಅದಕ್ಕೆ ಪರಿಹಾರ ನೀಡಿದ್ದರೆ ತಪ್ಪಲ್ಲ. ಆದರೆ ಬೀಳದ ಮನೆ ಸಂಪೂರ್ಣವಾಗಿ ಬಿದ್ದಿದೆ ಅಂತಾ ಹೇಳಿ, ಎ ಕೆಟಗರಿಯಲ್ಲಿ ಈ ರೀತಿ ಹಣ ಲೂಟಿ ಮಾಡಿರೋದು ಎಷ್ಟರಮಟ್ಟಿಗೆ ಸರಿ ಅನ್ನುವುದು ಗ್ರಾಮಸ್ಥರ ಪ್ರಶ್ನೆ.

ಗ್ರಾಮದಲ್ಲಿ ಬಿದ್ದಿರುವ ಮನೆಗಳ ಸಂಖ್ಯೆ 134, ಪರಿಹಾರ ಸಿಕ್ಕಿದ್ದು ಮನೆಗಳಿಗೆ 4 ಮಾತ್ರ

ಗ್ರಾಮದಲ್ಲಿ ಬಿದ್ದಿರುವ ಮನೆಗಳ ಸಂಖ್ಯೆ 134, ಪರಿಹಾರ ಸಿಕ್ಕಿದ್ದು ಮನೆಗಳಿಗೆ 4 ಮಾತ್ರ

ಈ ಗ್ರಾಮದಲ್ಲಿ ಈ ಸಲದ ಮಳೆಗೆ ಮಾತ್ರವಲ್ಲ ಕಳೆದ ಸಲದ ಮಳೆಗೂ ಸಹ ಸಾಕಷ್ಟು ಮನೆಗಳು ಬಿದ್ದಿವೆ. ಆ ಸಮಯದಲ್ಲಿಯೂ ಅನೇಕರಿಗೆ ಸೂಕ್ತ ಪರಿಹಾರ ಬಂದೇ ಇಲ್ಲ. ಈ ಸಲದ ಮಳೆಗೆ ಗ್ರಾಮದಲ್ಲಿ ಒಟ್ಟು 134 ಮನೆಗಳು ಬಿದ್ದಿದ್ದವು. ಬಿದ್ದ ಮನೆಗಳಿಗೆ ಪರಿಹಾರ ನೀಡುವಂತೆ ಮಾಲಿಕರು ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದಾರೆ.

ಆದರೆ ಯಾರಿಗೂ ಇದುವರೆಗೂ ಪರಿಹಾರ ಬಂದಿಲ್ಲ. ಆದರೆ ಇದೀಗ 4 ಮನೆಗಳಿಗೆ ಮಾತ್ರ ಪರಿಹಾರ ಬಂದಿದ್ದು, ಫಲಾನುಭವಿಗಳೆಲ್ಲಾ ಪ್ರಭಾವಿಗಳೇ ಅನ್ನುವುದು ಗ್ರಾಮಸ್ಥರ ಆರೋಪ. ಅದರಲ್ಲೂ ಶಂಕ್ರಯ್ಯ ಮಠಪತಿ ಅವರ ಮನೆ ಮುಂದೆಯೇ ದೊಡ್ಡದೊಂದು ಮನೆ ಬಿದ್ದಿದೆ. ಅದಕ್ಕೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಆದರೆ ಬೀಳದೇ ಇರೋ ಮನೆಗೆ ಪರಿಹಾರ ನೀಡಿದ್ದಕ್ಕೆ ಇದೀಗ ಗ್ರಾಮಸ್ಥರೆಲ್ಲಾ ಆಕ್ರೋಶಗೊಂಡಿದ್ದಾರೆ.

ಸದ್ಯ ಕೋಟೂರು ಗ್ರಾಮದಲ್ಲಿ ಮನೆ ಹಾನಿ ಪರಿಹಾರ ಆಯ್ಕೆಯ ವಿಚಾರವೇ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಆಗುತ್ತಿದೆ. ಪಂಚಾಯತಿ ರಾಜಕೀಯ ಕೂಡ ಇದರೊಳಗೆ ನುಗ್ಗಿ ಹೋಗಿದೆ. ಇದೇ ರೀತಿ ಈ ಹಿಂದೆಯೂ ಅನೇಕ ಗ್ರಾಮಗಳಲ್ಲಿ ಘಟನೆಗಳು ನಡೆದಾಗ ಅಧಿಕಾರಿಗಳ ತಲೆ ದಂಡವಾಗಿತ್ತು.

ಇಲ್ಲಿಯೂ ಅದೇ ರೀತಿ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ಸ್ಥಳೀಯರ ಆಗ್ರಹ. ಒಟ್ಟಿನಲ್ಲಿ ಸರಕಾರದ ಸೌಲಭ್ಯಗಳು ಬರೀ ಉಳ್ಳವರ ಪಾಲಾದರೆ, ಸಾಮಾನ್ಯ ಹಾಗೂ ಬಡ ಜನರು ಹೇಗೆ ಇದನ್ನೆಲ್ಲಾ ಸಹಿಸಿಕೊಳ್ಳಬೇಕು ಅನ್ನೋದೇ ಇದೀಗ ಎಲ್ಲರ ಮುಂದಿರುವ ಪ್ರಶ್ನೆ.

ಬೀಳದ ಮನೆಗೆ ಅಧಿಕಾರಿಗಳು ಪರಿಹಾರ ನೀಡಿದ್ದು ಏಕೆ ಮತ್ತು ಹೇಗೆ? – ಪ್ರವೀಣ ಕಮ್ಮಾರ

ಒಂದು ವೇಳೆ ಮಾಜಿ ಅಧ್ಯಕ್ಷ ಶಂಕ್ರಯ್ಯ ಮಠಪತಿ ಅವರ ಮನೆ ಬಿದ್ದಿತ್ತು ಅಂದರೆ ಅದಕ್ಕೆ ಪರಿಹಾರ ನೀಡಿದ್ದರೆ ತಪ್ಪಲ್ಲ. ಆದರೆ ಮನೆ ಬೀಳದೇ ಅಧಿಕಾರಿಗಳು ಅದ್ಹೇಗೆ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತಾರೆ ಅಂತಾ ಪ್ರಶ್ನಿಸುತ್ತಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ ಕಮ್ಮಾರ.

ಟಿವಿ9 ಡಿಜಿಟಲ್ ಜತೆಗೆ ಮಾತನಾಡಿದ ಅವರು, ಮಠಪತಿ ಅವರು ತಮ್ಮ ಪ್ರಭಾವವನ್ನು ಬಳಸಿ ಪರಿಹಾರ ತೆಗೆದುಕೊಂಡಿದ್ದಾರೆ. ಇಡೀ ಊರಲ್ಲಿ 134 ಮನೆಗಳು ಬಿದ್ದಿರೂ ಅಧಿಕಾರಿಗಳ ಕಣ್ಣಿಗೆ ಅವು ಕಂಡಿಲ್ಲ. ಆದರೆ ಬೀಳದೇ ಇರೋ ಮಠಪತಿ ಅವರ ಮನೆ ಕಂಡಿದ್ದು ವಿಚಿತ್ರ. ಈ ಬಗ್ಗೆ ನಾವೆಲ್ಲ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಜಿಲ್ಲಾಧಿಕಾರಿಗಳು ಇದರಲ್ಲಿ ಅಕ್ರಮವೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅನ್ನುತ್ತಾರೆ ಪ್ರವೀಣ ಕಮ್ಮಾರ.

ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ – ಶಂಕ್ರಯ್ಯ ಮಠಪತಿ

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಾಜಿ ಅಧ್ಯಕ್ಷ ಶಂಕರಯ್ಯ ಮಠಪತಿ, ನನ್ನ ಮೇಲೆ ಮಾಡಿರೋ ಆರೋಪ ಸಂಪೂರ್ಣ ಸುಳ್ಳಾಗಿದೆ. ಬಿದ್ದಿರೋದು ನನ್ನದೇ ಮನೆ. ಮುಂದಿನ ಒಂದು ಕೊಠಡಿ ಮಾತ್ರ ಚೆನ್ನಾಗಿ ಕಾಣುತ್ತದೆ. ಆದರೆ ಹಿಂಭಾಗದಲ್ಲಿ ಎಲ್ಲವೂ ಬಿದ್ದು ಹೋಗಿದೆ.
ಸರ್ಕಾರದ ನಿಯಮಾವಳಿ ಪ್ರಕಾರವೇ ಪರಿಹಾರಕ್ಕೆ ನನ್ನ ಮನೆ ಆಯ್ಕೆಯಾಗಿದೆ. ಉಳಿದವರು ಏಕೆ ಪರಿಹಾರಕ್ಕೆ ಆಯ್ಕೆಯಾಗಿಲ್ಲ ಅನ್ನುವುದು ನನಗೆ ಗೊತ್ತಿಲ್ಲ. ಯಾವುದೇ ತನಿಖೆ ಮಾಡಿದರೂ ನಾನು ಎದುರಿಸುವುದಕ್ಕೆ ಸಿದ್ದ ಎನ್ನುತ್ತಾರೆ.
– ನರಸಿಂಹಮೂರ್ತಿ ಪ್ಯಾಟಿ