ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಹೃದಯಾಘಾತ

| Updated By: ganapathi bhat

Updated on: Aug 23, 2021 | 3:43 PM

ಸಪ್ಟೆಂಬರ್ 3ರಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದೆ. ಆಗಸ್ಟ್ 16 ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಅಗಸ್ಟ್ 23 ಕೊನೆ ದಿನ ಎಂದು ಸೂಚನೆ ನೀಡಲಾಗಿದೆ.

ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಹೃದಯಾಘಾತ
ಆನಂದ್ ಜಾಧವ್
Follow us on

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕಿದ್ದ ಅಭ್ಯರ್ಥಿಗೆ ಲಘು ಹೃದಯಾಘಾತ ಆದ ಘಟನೆ ಧಾರವಾಡದಲ್ಲಿ ನಡೆದಿದೆ. ನಾಮಪತ್ರ ಸಲ್ಲಿಸುವುದಕ್ಕೆ ಬಿ ಫಾರಂ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ್ ಜಾಧವ್ ನಿನ್ನೆ (ಆಗಸ್ಟ್ 22) ರಾತ್ರಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ್ ಅವರಿಂದ ಬಿ ಫಾರಂ ವಾಪಸ್ ಪಡೆಯಲಾಗಿದೆ. ಹೀಗಾಗಿ ಹೇಮಂತ್ ಗುರ್ಲಹೊಸೂರ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ಆನಂದ್ ಜಾಧವ್ ​ವಾರ್ಡ್ ಸಂಖ್ಯೆ 13ಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಆದರೆ, ಕೊನೆಯ ವೇಳೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಅವರು ಚುನಾವಣೆಯಿಂದ ಹೊರಗೆ ಉಳಿಯುವಂತಾಗಿದೆ. ​ವಾರ್ಡ್ ಸಂಖ್ಯೆ 13ಕ್ಕೆ ಈಗ ಹೇಮಂತ್ ಗುರ್ಲಹೊಸೂರ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಆನಂದ್ ಜಾಧವ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಪ್ಟೆಂಬರ್ 3ರಂದು ಚುನಾವಣೆ
ಸಪ್ಟೆಂಬರ್ 3ರಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದೆ. ಆಗಸ್ಟ್ 16 ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಹುಬ್ಬಳ್ಳಿ- ಧಾರವಾಡದ 82 ವಾರ್ಡ್​ಗಳಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಅಗಸ್ಟ್ 23 ಕೊನೆ ದಿನ ಎಂದು ಸೂಚನೆ ನೀಡಲಾಗಿದೆ. ಅಗಸ್ಟ್ 24 ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅಗಸ್ಟ್ 26 ಕೊನೆ ದಿನ ಎಂದು ತಿಳಿದುಬಂದಿದೆ.

ಆಗಸ್ಟ್ 16 ರಿಂದ ಸೆಪ್ಟೆಂಬರ್ 6 ರ ವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಹಿತೆ ಜಾರಿಯಲ್ಲಿರುತ್ತದೆ. ಪಾಲಿಕೆ ಚುನಾವಣೆಗೆ ಸುಮಾರು 837 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 4,07,954 ಗಂಡು, 4,07,954 ಹೆಣ್ಣು, 86 ಇತರೆ ಸೇರಿದಂತೆ ಒಟ್ಟು 8,11,537 ಜನರು ಪಾಲಿಕೆ ಮತದಾನ ಮಾಡಲಿದ್ದಾರೆ. 16 ಚುನಾವಣಾ ಅಧಿಕಾರಿ, 16 ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ.

ರಾಜಕೀಯ ಚಟುವಟಿಕೆಗೆ ಅನುಮತಿ ಪಡೆಯಲು ಎರಡು ಕಚೇರಿಗಳನ್ನು ಸ್ಥಾಪಿಸಲಾಗುತ್ತದೆ. ಇವಿಎಂ ಮತ ಯಂತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯುತ್ತದೆ. 100 ಜನರಿಗೆ ಮಾತ್ರ ಬಹಿರಂಗ ಪ್ರಚಾರ ಮಾಡಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸುವ ದಿನದಂದು ಬಹಿರಂಗ ಮೆರವಣಿಗೆಗೆ ಅವಕಾಶವಿರಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉತ್ತಮ ದರ್ಜೆ ಶಾಲೆ, ಉಚಿತ ಲ್ಯಾಪ್​ಟಾಪ್; ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪ್ರಣಾಳಿಕೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಎಲ್ಲಾ ವಾರ್ಡ್​ಗಳಲ್ಲೂ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧೆ: ಸತೀಶ್ ಜಾರಕಿಹೊಳಿ

Published On - 3:42 pm, Mon, 23 August 21