ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ: ಸರ್ಕಾರ ಘೋಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2025 | 10:44 PM

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಾಗಿದೆ. ದಶಕಗಳ ಬೇಡಿಕೆಯ ನಂತರ ಕರ್ನಾಟಕ ಸರ್ಕಾರ ಇಂದು ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿಭಜನೆಯಿಂದ ಧಾರವಾಡದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು 30 ದಿನಗಳೊಳಗೆ ಸಲ್ಲಿಸಬಹುದಾಗಿದೆ.

ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ: ಸರ್ಕಾರ ಘೋಷಣೆ
ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ: ಸರ್ಕಾರ ಘೋಷಣೆ
Follow us on

ಧಾರವಾಡ, ಜನವರಿ 21: ಹುಬ್ಬಳ್ಳಿ- ಧಾರವಾಡವನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಇತ್ತೀಚೆಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿತ್ತು. ಇದೀಗ ಇಂದಿನಿಂದ ಅಧಿಕೃತವಾಗಿ  ಧಾರವಾಡ ಮಹಾನಗರ ಪಾಲಿಕೆ ಎಂದು ಕರ್ನಾಟಕ ಸರ್ಕಾರದಿಂದ ಅಧಿಕೃತ ಗೆಜೆಟ್ ನೋಟಿಫಿಕೇಶನ್​ ಹೊರಡಿಸಲಾಗಿದೆ. ಆ ಮೂಲಕ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಬೇಕು ಅನ್ನೋದು ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಬೇರ್ಪಡಿಸುವ ನಿರ್ಧಾರ ಯಾರೂ ತೆಗೆದುಕೊಂಡಿರಲೇ‌ ಇಲ್ಲ. ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಂಗಡಣೆಗೆ ಅಸ್ತು ಎನ್ನಲಾಗಿತ್ತು. ಆ ನಿಟ್ಟಿನಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆ ಹಾದಿ ಸುಗಮವಾಗಿತ್ತು.

ಇದನ್ನೂ ಓದಿ: ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆ; ಸಂಪುಟ ಸಭೆಯಲ್ಲಿ ನಿರ್ಧಾರ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬೆಂಗಳೂರು ನಂತರದ ದೊಡ್ಡ ಪಾಲಿಕೆಯಾಗಿತ್ತು. ಆದರೆ ಅನುದಾನ ಹಂಚಿಕೆ, ಅಭಿವೃದ್ಧಿ, ಅಧಿಕಾರ ಹಂಚಿಕೆ ಎಲ್ಲದರಲ್ಲಿಯೂ ಧಾರವಾಡಕ್ಕೆ ತಾರತಮ್ಯ ಆಗುತ್ತಲೇ ಇತ್ತು. ಹೀಗಾಗಿ ಹುಬ್ಬಳ್ಳಿಯಿಂದ ಬೇರ್ಪಡಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕೊಡಿ ಎನ್ನುವುದು ದಶಕಗಳ ಹೋರಾಟವಾಗಿತ್ತು.

ಇದಕ್ಕಾಗಿಯೇ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ರಚನೆಯಾಗಿ ಹೋರಾಟವೂ ನಡೆದಿತ್ತು. ಅನೇಕ ಸಿಎಂಗಳಿಗೂ ಮನವಿ ಸಲ್ಲಿಸಲಾಗಿತ್ತು. ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿಯೇ ಈ ಬಗ್ಗೆ ಧಾರವಾಡ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರ ವರದಿ ಕೇಳಿತ್ತು. ಕೊನೆಗೂ ಸರ್ಕಾರಕ್ಕೆ ಪೂರಕ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಅನುಮೋದಿಸಲಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೂ ಬ್ಯಾಂಕ್​ ದರೋಡೆಗೆ ಯತ್ನಿಸಿದ ಕಳ್ಳರು: ಖದೀಮರಿಗೆ ಬಲೆ ಬೀಸಿದ ಪೊಲೀಸ್​

ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ ಎಂದು ಸರ್ಕಾರ ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಹೊರಡಿಸಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಸಾರ್ವಜನಿಕರು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿವಿ ಗೋಪುರ, ಬೆಂಗಳೂರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.