Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕೆಆರ್ ಪುರಂನಲ್ಲೂ ದರೋಡೆ ಗ್ಯಾಂಗ್ ಪ್ರತ್ಯಕ್ಷ: 15 ದಿನಗಳಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ

ಕಳ್ಳತನ, ದರೋಡೆ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗಿವೆ. ಬೀದರ್, ಮಂಗಳೂರು, ಮೈಸೂರು ದರೋಡೆ ಪ್ರಕರಣಗಳು ಸದ್ದು ಮಾಡುತ್ತಿದ್ದಂತೆಯೇ, ರಾಜ್ಯಾದ್ಯಂತ ನಡೆದ ಸಣ್ಣಪುಟ್ಟ ಕಳ್ಳತನ, ದರೋಡೆ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಬೆಂಗಳೂರಿನ ಕೆಆರ್ ಪುರಂನಲ್ಲೂ ದರೋಡೆ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರಿನ ಕೆಆರ್ ಪುರಂನಲ್ಲೂ ದರೋಡೆ ಗ್ಯಾಂಗ್ ಪ್ರತ್ಯಕ್ಷ: 15 ದಿನಗಳಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jan 21, 2025 | 2:24 PM

ಬೆಂಗಳೂರು, ಜನವರಿ 21: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ದರೋಡೆ, ಕಳ್ಳತನ ಪ್ರಕರಣಗಳು ದಿನದಿನಕ್ಕೂ ಹೆಚ್ಚಾಗುತ್ತಿವೆ. ಕೆಆರ್ ಪುರಂನಲ್ಲೂ ದರೋಡೆ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮಧ್ಯರಾತ್ರಿ 2.30ರ ವೇಳೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿದೆ. ಈ ಗ್ಯಾಂಗ್​ನ ಮೂವರು ಕಿತ್ತಗನೂರಿನಲ್ಲಿ ರಾಜಾರೋಷವಾಗಿ ಮನೆಗಳ ಬಳಿ ಓಡಾಡಿದ್ದಾರೆ.

ಕೆಆರ್ ಪುರಂ ಸುತ್ತಮುತ್ತ ಓಡಾಡಿ ಸಂಚು ಹೂಡುತ್ತಿರುವ ಖದೀಮರು ಕಳೆದ 15 ದಿನದಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ, ದರೋಡೆ ಮಾಡಿದ್ದಾರೆ. ಇವರು ಕಾರಿನಲ್ಲಿ ಮಾಸ್ಕ್ ಹಾಕಿಕೊಂಡು ನುಗ್ಗುತ್ತಾರೆ. ಪಕ್ಕಾ ಸಿನಿಮಾ ಶೈಲಿಯಲ್ಲಿ ಬಾಗಿಲು, ಲಾಕ್ ಮುರಿದು ಚಿನ್ನಾಭರಣ, ಹಣ ಲೂಟಿ ಮಾಡುತ್ತಾರೆ. ಕಳ್ಳರ ಹಾವಳಿಗೆ ಕಿತ್ತಗನೂರು, ಟಿಸಿ ಪಾಳ್ಯ, ಆವಲಹಳ್ಳಿ ಜನರು ಆತಂಕಕ್ಕೊಳಗಾಗಿದ್ದಾರೆ. 4-5 ಲೇಔಟ್​ನ ನಿವಾಸಿಗಳು ಹೈರಾಣಾಗಿದ್ದಾರೆ.

ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಖದೀಮಳೊಬ್ಬಳು, ಮನೆ ಬಳಿ ಜನರಲ್ ಸ್ಟೋರ್ ನಡೆಸುತ್ತಿದ್ದ ವೃದ್ಧೆಯ ಪರಿಚಯ ಮಾಡಿಕೊಂಡಿದ್ದಾಳೆ. ಶೌಚಾಲಯಕ್ಕೆ ಹೋಗಬೇಕೆಂದು ಮನೆ ಕೀ ಪಡೆದ ಕಳ್ಳಿ ಸಹೀದಾ ಬಾನು, ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಳೆ. ವೃದ್ಧೆ ದೂರಿನ ಮೇರೆಗೆ ಹುಳಿಮಾವು ಪೊಲೀಸರು, ಆರೋಪಿ ಸಹೀದಾ ಬಾನು ಬಂಧಿಸಿ 136 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಸಂಬಳ ಕೊಡದಿದ್ದಕ್ಕೆ ಮಾಲೀಕನ ಮನೆಯಲ್ಲೇ ಕಳ್ಳತನ

4 ತಿಂಗಳ ಸಂಬಳ ಕೊಡದಿದ್ದಕ್ಕೆ ತಾನು ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲೇ ಸಿದ್ದು ಎಂಬಾತ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಆರೋಪಿ ಸಿದ್ದು, ಅರುಂಧತಿ ಮಿಶ್ರಾ ಎಂಬುವರ ಬಳಿ ಕಾರು ಚಾಲಕನಾಗಿ ಸೇರಿದ್ದ. ಆದರೆ, ಅರುಂಧತಿ ಬಳಿಯೂ ಆರೋಪಿ ಸಿದ್ದು ಕೆಲಸ ಬಿಟ್ಟಿದ್ದರಿಂದ 4 ತಿಂಗಳ ಸಂಬಳ ಕೊಟ್ಟಿರಲಿಲ್ಲ. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದನ್ನೂ ಗಮನಿಸಿದ ಆರೋಪಿ, ನಕಲಿ ಕೀ ಬಳಸಿ ಕಳ್ಳತನ ಕೃತ್ಯ ಎಸಗಿದ್ದ. ಸದ್ಯ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದು, 682 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಶ್ರೀಸಾಯಿ ಗೋಲ್ಡ್ ಪ್ಯಾಲೇಸ್​ನ ಚಿನ್ನ ಕಳವು

ಎಂಎಲ್​ಸಿ ಶರವಣ ಒಡೆತನದ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್​ನ ಚಿನ್ನ ಕಳವಾಗಿದೆ. ಹಾಲ್ ಮಾರ್ಕ್ ಹಾಕಲು 1 ಕೆಜಿ 249 ಗ್ರಾಂ ಚಿನ್ನಾಭರಣಗಳನ್ನು ಮ್ಯಾನೇಜರ್ ಭೀಮರಾಜು ನಗರ್ತಪೇಟೆ ಕೋನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್​ಗೆ ನೀಡಿದ್ದರು. ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟಡ್ ವಿರುದ್ಧ ದೂರು ದಾಖಲಾಗಿದ್ದು, ನಮ್ಮ ಕೆಲಸಗಾರ ಕಳ್ಳತನ ಮಾಡಿದ್ದಾನೆಂದು ಭರತ್ ಹೇಳುತ್ತಿದ್ದಾರೆ.

ರಾಜ್ಯದಲ್ಲಿ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತಿವೆ ಎಂದು ‘ಟಿವಿ9’ಗೆ ಪರಿಷತ್ ಸದಸ್ಯ ಶರವಣ ಹೇಳಿದ್ದಾರೆ. ಅಲ್ಲದೇ, ಚಿನ್ನದಂಗಡಿ ನಡೆಸಬೇಕಾ ಬಿಡಬೇಕಾ ಅನ್ನೋ ಭಯ ಶುರುವಾಗಿದೆ. ಗೃಹ ಇಲಾಖೆ ಇದ್ಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿದೆ ಎಂದಿದ್ದಾರೆ.

ಏತನ್ಮಧ್ಯೆ, ಬೆಂಗಳೂರಿನಲ್ಲಿ ಓಲಾ ಕಾರ್ ಬುಕ್ ಮಾಡಿದ ವ್ಯಕ್ತಿಯ ಜೊತೆ ಸ್ನೇಹ ಬೆಳಸಿ ಅವನದ್ದೇ ಮನೆಯಲ್ಲಿ 18 ಲಕ್ಷ ರೂ. ಕದ್ದಿದ್ದ ಖದೀಮ ಚಾಲಕ ಸತೀಶ್​ನನ್ನು ಚಂದ್ರಾಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜನವರಿ 2ರಂದು ಊರಿಗೆ ತೆರಳುತ್ತಿದ್ದ ಪ್ರಕಾಶ್ ಕ್ಯಾಬ್ ಬುಕ್ ಮಾಡಿದ್ದ ವೇಳೆ ಸ್ನೇಹ ಬೆಳಸಿದ್ದ ಚಾಲಕ ಸತೀಶ್, ಪ್ರಕಾಶ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡಿದ್ದಾನೆ. ಪ್ರಕಾಶ್ ಊರಿಗೆ ಹೋಗುತ್ತಿದ್ದಂತೆ ಮನೆ ಬೀಗ ಮುರಿದು 18 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ದೋಚಿದ್ದಾನೆ. ತನಿಖೆ ವೇಳೆ ಆಟೋ ಇಎಂಐ ಕಟ್ಟಲು ಮನೆ ಕಳ್ಳತನ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕುಖ್ಯಾತ ಮನೆಗಳ್ಳ ಆಪಲ್ ಸಂತೋಷ್, ರವಿಕುಮಾರ್​ರಿಂದ 12 ಲಕ್ಷ ರೂ. ಮೌಲ್ಯದ 30 ಬೈಕ್, 103 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಕೊಪ್ಪಳದಲ್ಲಿ ಅಂಗಡಿ ಮಾಲೀಕನಿಗೆ ಚಾಕು ತೋರಿಸಿ ದರೋಡೆ

ಕೊಪ್ಪಳ ಜಿಲ್ಲೆಯ ವಣಗೇರಾ ಗ್ರಾಮದಲ್ಲಿ ಅಂಗಡಿ ಮಾಲೀಕನಿಗೆ ಚಾಕು ತೋರಿಸಿ ದರೋಡೆ ಮಾಡಿರುವ ಘಟನೆ ನಡೆದಿದೆ. ಶರಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿ 7 ಸಾವಿರಕ್ಕಿಂತ ಹೆಚ್ಚು ನಗದು, ಮೊಬೈಲ್ ಕಸಿದು ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜ.18 ರಂದು ರಾತ್ರಿ ದರೋಡೆಕೋರರು ಅಂಗಡಿಗೆ ನುಗ್ಗಿದ್ರ ಬಗ್ಗೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ಬೈಕ್​ನಲ್ಲಿ ಬಂದು ಮಾಂಗಲ್ಯ ಸರ ಕದ್ದೊಯ್ದ ಖದೀಮರನ್ನು ಪೊಲೀಸರು ಒಂದೇ ಗಂಟೆಯೊಳಗೆ ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಹಳೆತಿಮ್ಮನಹಳ್ಳಿ ಹೊರವಲಯದ ಜಮೀನಿನಲ್ಲಿ ಹೂವು ಬಿಡಿಸುತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಖದೀಮರು ಪರಾರಿಯಾಗಿದ್ದರು. ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗೌರಿಬಿದನೂರು ರಸ್ತೆ ತ್ಯಾಜ್ಯ ವಿಲೇವಾರಿ ಬಳಿ ಹೋಗುತ್ತಿದ್ದ ಇಬ್ಬರನ್ನು ಪೊಲೀಸರು ಪರಿಶೀಲಿಸಿದಾಗ ಚಿನ್ನದ ಸರ ಪತ್ತೆಯಾಗಿದ್ದು, ಖಾಕಿ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಎಂಎಲ್​ಸಿ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್​ನ ಚಿನ್ನ ಕಳವು

ಕೋಲಾರದ ವೇಮಗಲ್​ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2.20 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಮತ್ತು 50 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಹುಬ್ಬಳ್ಳಿಯ ಹಳೇ ಸಿಆರ್ ಮೈದಾನದಲ್ಲಿ ಹುಬ್ಬಳ್ಳಿ ಕಮಿಷನರ್ ಶಶಿಕುಮಾರ್ ಪರೇಡ್ ನಡೆಸಿದ್ದಾರೆ. ಕಳ್ಳತನ, ದರೋಡೆ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ 17 ಪೊಲೀಸ್ ಠಾಣೆಗಳ ವ್ಯಾಪ್ತಿಯ 500 ಜನರನ್ನು ಕರೆತಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Tue, 21 January 25