
ಹುಬ್ಬಳ್ಳಿ, ಜನವರಿ 12: ಮಹಿಳೆಯೋರ್ವಳ ಜೊತೆಗೆ ಅಕ್ರಮ ಸಂಬಂಧದ ಕಾರಣ ಆಕೆಯ ಕುಟುಂಬಸ್ಥರಿಂದ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವ ವಿದ್ಯಾಲಯದ ಎಂಜಿನಿಯರ್ ವಿಠ್ಠಲ್ ರಾಠೋಡ್(60) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಡಿ.10ರಂದು ವಿಠ್ಠಲ್ ಅವರ ಮೇಲೆ ಹಲ್ಲೆ ನಡೆದಿತ್ತು.
ಕಾನೂನು ವಿವಿಯಲ್ಲಿ ಗುತ್ತಿಗೆ ಕೆಲಸ ಪಡೆದಿದ್ದ ವಿಠ್ಠಲ್ ರಾಠೋಡ್ ಬಳಿ 4-5 ವರ್ಷಗಳಿಂದ ಛತ್ತೀಸ್ಗಢ ಮೂಲದ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಆ ಪೈಕಿ ವಿಮಾಲ ಜೊತೆ ವಿಠ್ಠಲ್ ರಾಠೋಡ್ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಅನೇಕ ಬಾರಿ ಜಗಳ ಕೂಡ ನಡೆದಿತ್ತು. ಜನವರಿ 10ರ ರಾತ್ರಿ ಕೂಡ ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಆ ವೇಳೆ ವಿಠ್ಠಲ್ ಮೇಲೆ ಮೇಘವ್ ಮತ್ತು ಭಗವಾನದಾಸ್ ಹಲ್ಲೆ ಮಾಡಿದ್ದರು. ಬಳಿಕ ಮದ್ಯ ಸೇವಿಸಿ ಬಿದ್ದು ವಿಠ್ಠಲ್ ಗಾಯಗೊಂಡಿರೋದಾಗಿ ಬಿಂಬಿಸಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆಗೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್ಗೆ ಸ್ಫೋಟಕ ಟ್ವಿಸ್ಟ್; ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ
ಘಟನೆ ಬಗ್ಗೆ ಅನುಮಾನಗೊಂಡು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿದೆ. ಛತ್ತೀಸ್ಗಢ ಮೂಲದ ದಂಪತಿ ಮತ್ತು ಮಗ ಸೇರಿ ವಿಜಯಪುರದ ಅರಕೇರಾ ತಾಂಡಾ ಮೂಲದ ನಿವಾಸಿ ವಿಠ್ಠಲ್ರನ್ನು ಕೊಂದಿದ್ದು, ಪ್ರಕರಣ ಸಂಬಂಧ ಮೇಘವ, ಭಗವಾನದಾಸ್ ಹಾಗೂ ವಿಮಲಾಳನ್ನು ಬಂಧಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.