ಗೂಂಡಾ ಕಾಯ್ದೆಯಡಿ ಪ್ರಕರಣ, ಗಡೀಪಾರು: ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಹುಬ್ಬಳ್ಳಿ ಪೊಲೀಸರಿಂದ ಖಡಕ್ ಕ್ರಮ

ರಾಜ್ಯದ ಛೋಟಾ ಮುಂಬೈ ಎಂದೇ ಹುಬ್ಬಳ್ಳಿ ಖ್ಯಾತಿ ಪಡೆದಿದೆ. ಆದರೆ ಇಲ್ಲಿ ರೌಡಿಗಳ ಹಾವಳಿ ಕೂಡಾ ಮೀತಿಮೀರಿದೆ. ಇದೇ ಕಾರಣಕ್ಕೆ ಕೊಲೆ, ಕೊಲೆ ಯತ್ನ, ದರೋಡೆ, ಮೀಟರ್ ಬಡ್ಡಿ ದಂಧೆ ಹಾವಳಿ ಪ್ರಕರಣಗಳು ಹೆಚ್ಚಾಗಿವೆ. ಇದೀಗ ರೌಡಿಗಳ ಪುಂಡಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಅವಳಿ ನಗರ ಪೊಲೀಸರು ರೌಡಿಗಳನ್ನು ಗಡೀಪಾರು ಮಾಡುವುದು, ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ.

ಗೂಂಡಾ ಕಾಯ್ದೆಯಡಿ ಪ್ರಕರಣ, ಗಡೀಪಾರು: ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಹುಬ್ಬಳ್ಳಿ ಪೊಲೀಸರಿಂದ ಖಡಕ್ ಕ್ರಮ
ಹುಬ್ಬಳ್ಳಿ ಪೊಲೀಸ್ (ಸಂಗ್ರಹ ಚಿತ್ರ)
Edited By:

Updated on: Jun 06, 2025 | 8:50 AM

ಹುಬ್ಬಳ್ಳಿ, ಜೂನ್ 6: ಹುಬ್ಬಳ್ಳಿಯು (Hubballi) ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದರೆ, ಅತ್ತ ಧಾರವಾಡ (Dharawad) ಶಿಕ್ಷಣದಿಂದ ಹೆಸರು ಮಾಡಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ನಗರಗಳು ವೇಗವಾಗಿ ಬೆಳೆಯುತ್ತಿವೆ. ಜನಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಇಂತಹ ಅವಳಿ ನಗರದಲ್ಲಿ ದುಡಿದು ಬದುಕು ಕಟ್ಟಿಕೊಳ್ಳುತ್ತಿರುವವರು ಒಂದಡೆಯಾದರೆ, ದುಡಿಯದೇ ಬೆದರಿಸಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ರೌಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ದಬ್ಬಾಳಿಕೆ, ದೌರ್ಜನ್ಯ ಕೂಡಾ ಹೆಚ್ಚಾಗುತ್ತಿದೆ. ಪೊಲೀಸರ ಅಂಕಿಅಂಶ ಪ್ರಕಾರ, ಅವಳಿ ನಗರದಲ್ಲಿ ಸರಿಸುಮಾರು 1700 ರೌಡಿಶೀಟರ್ ಗಳಿದ್ದಾರೆ. ಇದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಪೊಲೀಸರ ಸಂಖ್ಯೆಗಿಂತಲೂ ಹೆಚ್ಚು! ಹೀಗಾಗಿ ಅವಳಿ ನಗರದಲ್ಲಿ ಅಪರಾಧ ಕೃತ್ಯಗಳು ಕೂಡಾ ಹೆಚ್ಚಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಹಫ್ತಾ ವಸೂಲಿ, ಮೀಟರ್ ಬಡ್ಡಿ ದಂಧೆ, ಕೊಲೆ, ಕೊಲೆಗೆ ಯತ್ನ ಸೇರಿದಂತೆ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹದಿನೈದಕ್ಕೂ ಹೆಚ್ಚು ರೌಡಿಗಳ ಕಾಲಿಗೆ ಗುಂಡು ಹೊಡೆಯಲಾಗಿದೆ. ಅನೇಕರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ. ಆದರೂ ಕೂಡ ರೌಡಿಗಳ ಅಟ್ಟಾಹಸ ಹೆಚ್ಚಾಗಿದ್ದರಿಂದ, ಇದೀಗ ಪೊಲೀಸರು ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವ ಪ್ರಕ್ರಿಯೆಯನ್ನೂ ಆರಂಭಿಸಿದ್ದಾರೆ. ಮೇಲಿಂದ ಮೇಲೆ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದ ನಾಲ್ವರು ರೌಡಿಗಳ ಮೇಲೆ ಗುಂಡಾ ಆ್ಯಕ್ಟ್ ಹಾಕಿ, ಜೈಲಿಗಟ್ಟಿದ್ದಾರೆ.

ನಾಲ್ವರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್, ಜೈಲಿಗೆ

ಸಾಗರ್ ಲಕ್ಕುಂಡಿ, ಸೈಂಟಿಸ್ಟ್ ಮಂಜ್ಯಾ, ದಾವೂದ್ ನದಾಪ್, ಲಕ್ಷ್ಮಣ್ ಎಂಬ ನಾಲ್ವರು ರೌಡಿಗಳ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನಾಲ್ವರನ್ನು ಕೂಡಾ ರಾಜ್ಯದ ಕಲಬುರಗಿ, ಮೈಸೂರು ಸೇರಿದಂತೆ ಬೇರೆ ಬೇರೆ ಜೈಲಿಗೆ ಅಟ್ಟಲಾಗಿದೆ. ನಾಲ್ವರ ಮೇಲು ಕೂಡಾ ತಲಾ ಹತ್ತರಿಂದ ಹದಿನೈದು, ಕೊಲೆ, ಕೊಲೆ ಯತ್ನ, ಮಾರಕಾಸ್ತ್ರಗಳನ್ನು ಹಿಡಿದು ಬೆದರಿಕೆ ಹಾಕಿರುವುದು ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ನಾಲ್ವರಿಗೂ ಪೊಲೀಸರು ಹತ್ತಾರು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಪೊಲೀಸರ ಮಾತಿಗೂ ಬಗ್ಗದೆ, ಮತ್ತೆ ತಮ್ಮ ಚಾಳಿಯನ್ನೇ ಮುಂದುವರಿಸಿದ್ದರಿಂದ ಅವರನ್ನು ಜೈಲಿಗಟ್ಟಲಾಗಿದೆ.

ಇದನ್ನೂ ಓದಿ
ತಕ್ಷಣವೇ ಸಂಭ್ರಮಾಚರಣೆ ಬೇಡವೆಂದರೂ ಕೇಳಿಲ್ಲ: ಪೊಲೀಸರಿಂದ ತೀವ್ರ ಅಸಮಾಧಾನ
ಬೆಂಗಳೂರು ಕಾಲ್ತುಳಿತದಲ್ಲಿ ಮೃತಪಟ್ಟವರು ಯಾರೆಲ್ಲ? ಇಲ್ಲಿದೆ ಪೂರ್ಣ ವಿವರ
ಬೆಂಗಳೂರಲ್ಲಿ ಕಾಲ್ತುಳಿತ; ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣವೆಂದ ಬಿಜೆಪಿ
ಐಪಿಎಲ್ ಸಂಭ್ರಮದಲ್ಲಿ ಸೂತಕ; ಯಡವಟ್ಟಾಗಿದ್ದೆಲ್ಲಿ, ಹೊಣೆ ಯಾರು?

31 ರೌಡಿಗಳ ಗಡೀಪಾರು

ಕಳೆದ ಜನವರಿಯಲ್ಲಷ್ಟೇ ಅವಳಿ ನಗರದ 52 ರೌಡಿಗಳನ್ನು ಗಡೀಪಾರು ಮಾಡಲಾಗಿತ್ತು. ಇದೀಗ ಮತ್ತೆ 31 ರೌಡಿಗಳನ್ನು ಗಡೀಪಾರು ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಒಟ್ಟು 83 ರೌಡಿಗಳನ್ನು ಗಡೀಪಾರು ಮಾಡಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಇವರನ್ನೆಲ್ಲಾ ಗಡೀಪಾರು ಮಾಡಲಾಗಿದೆ. ಇನ್ನೂ ಅನೇಕರ ಪಟ್ಟಿ ಸಿದ್ದಮಾಡಿಟ್ಟುಕೊಂಡಿರುವ ಪೊಲೀಸರು ಅವರಿಗೆಲ್ಲಾ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಅಪರಾಧ ಕೃತ್ಯದಲ್ಲಿ ಶಾಮೀಲಾದರೆ, ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವುದು ಅಥವಾ ಗಡೀಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 am, Fri, 6 June 25