ತಕ್ಷಣವೇ ಆರ್ಸಿಬಿ ಸಂಭ್ರಮಾಚರಣೆ ಬೇಡವೆಂದರೂ ಕೇಳಿಲ್ಲ: ಪೊಲೀಸ್ ಅಧಿಕಾರಿಗಳಿಂದ ತೀವ್ರ ಅಸಮಾಧಾನ
ಆರ್ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಪೊಲೀಸರ ಸಲಹೆಯನ್ನು ಧಿಕ್ಕರಿಸಿ ತಕ್ಷಣವೇ ಕಾರ್ಯಕ್ರಮ ಆಯೋಜಿಸಿದ್ದೇ ಘಟನೆಗೆ ಮುಖ್ಯ ಕಾರಣ ಎಂಬುದನ್ನು ವರದಿಯೊಂದು ಬಹಿರಂಗಪಡಿಸಿದೆ. ಸರ್ಕಾರ ಮತ್ತು ಆರ್ಸಿಬಿ ಆಡಳಿತ ಮಂಡಳಿಯು ಪೊಲೀಸ್ ಸಲಹೆಯನ್ನು ಕಡೆಗಣಿಸಿ ಕಾರ್ಯಕ್ರಮವನ್ನು ಹಠಾತ್ತಾಗಿ ಆಯೋಜಿಸಿತ್ತು ಎಂಬುದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಜೂನ್ 5: ಆರ್ಸಿಬಿ (RCB) ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಕಾಲ್ತುಳಿತ (Bangalore Stampede) ಸಂಭವಿಸಿ 11 ಮಂದಿ ಮೃತಪಟ್ಟ ಬೆನ್ನಲ್ಲೇ, ಹಠಾತ್ತಾಗಿ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಪೊಲೀಸರ ಸಲಹೆ ಧಿಕ್ಕರಿಸಿ ತಕ್ಷಣದ ಸಂಭ್ರಮಾಚರಣೆ ಮಾಡಿದ್ದೇ ಘಟನೆಗೆ ಪ್ರಮುಖ ಕಾರಣವಾಯಿತು ಎಂಬುದೂ ಇದರಿಂದ ತಿಳಿದುಬಂದಿದೆ. ತಕ್ಷಣವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವ ಬದಲು ಒಂದು ವಾರದ ನಂತರ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಅದನ್ನು ಕಡೆಗಣಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಪತ್ರಿಕಾ ವರದಿಯೊಂದು ಉಲ್ಲೇಖಿಸಿದೆ.
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಹಲವು ಯೋಜನೆ ಹಾಕಿಕೊಂಡಿದ್ದ ಸರ್ಕಾರ, ಫ್ರಾಂಚೈಸಿ!
ಆರಂಭಿಕ ಯೋಜನೆಯ ಪ್ರಕಾರ, ಆಟಗಾರರನ್ನು ವಿಧಾನಸೌಧದಿಂದ ಬಾಳೇಕುಂದ್ರಿ ವೃತ್ತಕ್ಕೆ ಮೆರವಣಿಗೆ ಮೂಲಕ ಕರೆತರಲು ಉದ್ದೇಶಿಸಲಾಗಿತ್ತು. ನಂತರ ಕಬ್ಬನ್ ರಸ್ತೆ, ಎಂಜಿ ರಸ್ತೆ ಮತ್ತು ಅಂತಿಮವಾಗಿ ಕ್ವೀನ್ಸ್ ವೃತ್ತದ ಬಳಿಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವುದು ಎಂದು ಹೇಳಲಾಗಿತ್ತು. ಆದರೆ, ಯಾವುದೇ ಮೆರವಣಿಗೆಯನ್ನು ನಡೆಸಬೇಡಿ ಎಂದು ನಾವು ಮನವಿ ಮಾಡಿದ್ದೆವು. ಒಂದೇ ಸ್ಥಳದಲ್ಲಿ ಸಂಘಟಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಹೇಳಿದ್ದೆವು. ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆತಂದು ಅಲ್ಲಿಯೇ ಕಾರ್ಯಕ್ರಮ ಮುಗಿಸುವಂತೆ ಸಲಹೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ನಮ್ಮ ಮಾತು ಕೇಳಲೇ ಇಲ್ಲ: ಪೊಲೀಸ್ ಅಧಿಕಾರಿಗಳ ಬೇಸರ
ಪೊಲೀಸ್ ಅಧಿಕಾರಿಗಳ ಸಲಹೆ ನಂತರವೂ ಸರ್ಕಾರ ಮತ್ತು ಆರ್ಸಿಬಿ ಆಡಳಿತ ಮಂಡಳಿ ಬುಧವಾರವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾದವು ಎಂದು ವರದಿ ತಿಳಿಸಿದೆ. ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು ಇಂದು ಅಥವಾ ನಾಳೆ ಹೊರಡುತ್ತಾರೆ ಎಂಬುದು ಅವರ ವಾದವಾಗಿತ್ತು. ಸಾಮಾನ್ಯವಾಗಿ, ಸರ್ಕಾರವು ಇಂಥ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಬಯಸುತ್ತದೆ. ಒಂದು ವೇಳೆ ಸಂಭ್ರಮಾಚರಣೆಗೆ ಸರ್ಕಾರ ನಿರಾಕರಿಸಿದ್ದರೆ, ಅದು ಮತ್ತೊಂದು ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದನ್ನು ವರದಿ ಉಲ್ಲೇಖಿಸಿದೆ.
ಮಂಗಳವಾರ ರಾತ್ರಿಯಿಂದಲೇ ಬೆಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ಬೆಳಗಿನ ಜಾವ 3.30 ರವರೆಗೆ ಮತ್ತು ಹೊರವಲಯದಲ್ಲಿ ಬೆಳಗಿನ ಜಾವ 4.30 ರ ವರೆಗೆ ವಿಜಯೋತ್ಸವ ಆಚರಣೆಗಳು ನಡೆದಿದ್ದವು. ಬೆಳಗಿನ ಜಾವ 5.30 ರವರೆಗೆ, ಪೊಲೀಸ್ ಆಯುಕ್ತರಿಂದ ಹಿಡಿದು ಕಾನ್ಸ್ಟೇಬಲ್ಗಳವರೆಗೆ ನಮ್ಮ ಎಲ್ಲಾ ಸಿಬ್ಬಂದಿ ಬೀದಿಗಳಲ್ಲಿದ್ದರು ಮತ್ತು ಸಂಪೂರ್ಣವಾಗಿ ದಣಿದಿದ್ದರು. ಇದು ಸಂಪೂರ್ಣ ಹುಚ್ಚುತನ. ಈ ರೀತಿಯ ಉನ್ಮಾದವನ್ನು ನಾವು ಎಂದಿಗೂ ನೋಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏಕಾಏಕಿ ಲಕ್ಷಾಂತರ ಜನ ಬಂದರು!
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿಜಯೋತ್ಸವಕ್ಕೆ ಸುಮಾರು 30,000 ದಿಂದ 40,000 ಜನರು ಆಗಮಿಸುವ ನಿರೀಕ್ಷೆ ನಗರ ಪೊಲೀಸರಿಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದ್ದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ 11 ಜನ ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿದಲ್ಲಿ ಮೃತಪಟ್ಟವರು ಯಾರೆಲ್ಲ? ಇಲ್ಲಿದೆ ಪೂರ್ಣ ವಿವರ
ಕ್ರೀಡಾಂಗಣದ 35,000 ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 am, Thu, 5 June 25








