
ಹುಬ್ಬಳ್ಳಿ, ಡಿಸೆಂಬರ್ 5: ಆರತಕ್ಷತೆಗೆ ಎಲ್ಲ ಸಿದ್ಧತೆ ನಡೆದಿತ್ತು. ಇನ್ನೇನು ಸಮಾರಂಭ ಶುರುವಾಗಬೇಕು, ಆದರೂ ವಧು ಹಾಗೂ ವರನ ಆಗಮನವಿಲ್ಲ. ಕೊನೆಗೆ ವಧುವಿನ ತಂದೆ ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತ ಬಂದ ಬಂಧುಗಳಿಂದ ಶುಭ ಹಾರೈಕೆ ಸ್ವೀಕರಿಸಿದರು! ಇಂಥದ್ದೊಂದು ಅಪರೂಪದ ವಿದ್ಯಮಾನಕ್ಕೆ ಹುಬ್ಬಳ್ಳಿಯ (Hubballi) ಗುಜರಾತ್ ಭವನ ಸಾಕ್ಷಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಇಂಡಿಗೋ ವಿಮಾನ (IndiGo Flight) ರದ್ದತಿ. ದೇಶದಾದ್ಯಂತ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದರ ಬಿಸಿ ನೂತನ ವಧು ವರರಿಗೂ ತಟ್ಟಿದೆ.
ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಬುಧವಾರ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರ ಆರತಕ್ಷತೆ ಆಯೋಜಿಸಲಾಗಿತ್ತು. ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆಯಾದ ಈ ಜೋಡಿ, ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಹುಬ್ಬಳ್ಳಿಗೆ ಬರಲು ಡಿಸೆಂಬರ್ 2ರ ವಿಮಾನ ಬುಕ್ ಮಾಡಿದ್ದರು. ಕೆಲ ಸಂಬಂಧಿಕರು ಭುವನೇಶ್ವರ–ಮುಂಬೈ–ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದ್ದರು.
ಡಿಸೆಂಬರ್ 2ರ ಬೆಳಗ್ಗೆ 9ರಿಂದ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಅನೇಕ ವಿಮಾನಗಳ ಸಂಚಾರ ರದ್ದಾಗಿದೆ. ಭುವನೇಶ್ವರದಿಂದ ಮೇಧಾ ಕ್ಷೀರಸಾಗರ ಹಾಗೂ ಸಂಗಮ ದಾಸ್ ಪ್ರಯಾಣಿಸಬೇಕಿದ್ದ ವಿಮಾನ ಸಂಚಾರ ಮುಂದಿನ ದಿನ (ಡಿ.3) ಬೆಳಗಿನ 4–5 ಗಂಟೆಗಳವರೆಗೆ ವಿಳಂಬವಾಗುವ ಸಂದೇಶ ಬಂದಿತ್ತು. ಹೀಗಾಗಿ ಅವರು ಪರ್ಯಾಯ ಪ್ರಯಾಣಕ್ಕೆ ಯೋಚಿಸಿರಲಿಲ್ಲ. ಆದರೆ, ಕೊನೇ ಕ್ಷಣದಲ್ಲಿ ಏಕಾಏಕಿ ಡಿಸೆಂಬರ್ 3ರಂದು ಬೆಳಗ್ಗೆ ವಿಮಾನ ಸಂಚಾರವೇ ರದ್ದಾಯಿತು. ಪರಿಣಾಮವಾಗಿ ವಧು-ವರರು ಹುಬ್ಬಳ್ಳಿಗೆ ಆರಕ್ಷತೆ ವೇಳೆಗೆ ತಲುಪಲು ಸಾಧ್ಯವಾಗಲಿಲ್ಲ.
ಈ ನಡುವೆ ಗುಜರಾತ್ ಭವನದಲ್ಲಿ ಆರತಕ್ಷತೆಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದ್ದರಿಂದ, ಕುಟುಂಬಸ್ಥರು ಹೊಸ ಪರಿಹಾರ ಹುಡುಕಿದರು. ಕೊನೆಗೆ ವಧುವಿನ ತಂದೆ-ತಾಯಿ ತಮ್ಮ ಮಗಳು ಹಾಗೂ ಅಳಿಯನ ಬದಲು ವಧು-ವರರ ಕುರ್ಚಿಯಲ್ಲಿ ಕುಳಿತು ಶಾಸ್ತ್ರಗಳನ್ನು ನಡೆಸಿದರು.
ಇದನ್ನೂ ಓದಿ: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಒದ್ದಾಟ
ವಧು ಮೇಧಾ ಮತ್ತು ವರ ಸಂಗಮ ದಾಸ್ ಇಬ್ಬರೂ ಭುವನೇಶ್ವರದಲ್ಲೇ ಸಿದ್ಧರಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರತಕ್ಷತೆಯಲ್ಲಿ ಭಾಗವಹಿಸುವ ಅನಿವಾರ್ಯ ಸ್ಥಿತಿ ಎದುರಾಯಿತು. ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದ ಅನೇಕರು ಪರದಾಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ನಡೆದ ಈ ವಿದ್ಯಮಾನ ಎಲ್ಲರ ಗಮನ ಸೆಳೆದಿದೆ.
Published On - 10:14 am, Fri, 5 December 25