ಹುಬ್ಬಳ್ಳಿ, ಮೇ.16: ವಾಣಿಜ್ಯ ನಗರಿ ಹುಬ್ಬಳ್ಳಿ(Hubli)ಯಲ್ಲಿ ನಿನ್ನೆ(ಮೇ.15) ಬೆಳಗಿನ ಜಾವ ನೇಹಾ ಮಾದರಿಯಲ್ಲಿಯೇ ನಗರದ ವೀರಾಪೂರ ಓಣಿಯಲ್ಲಿ ಅಂಜಲಿ(Anjali) ಅಂಬಿಗೇರ ಎಂಬ ಯುವತಿ ಹತ್ಯೆಯಾಗಿತ್ತು. ಕೊಲೆ ಮಾಡಲು ಹಂತಕ ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಆಟೋದಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಹಂತಕ ಆಟೋದಲ್ಲಿ ಬಂದಿರೋ ದ್ರಶ್ಯಗಳ ಜೊತೆಗೆ ಕೊಲೆ ಬಳಿಕ ಆತ ಹೊಸ ಬಸ್ ನಿಲ್ದಾಣಕ್ಕೆ ತೆರಳಿದ ದೃಶ್ಯಗಳು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿ ಶಿವಮೊಗ್ಗಕ್ಕೇ ತೆರಳಿದನಾ? ಎಂಬ ಅನುಮಾನ ವ್ಯಕ್ತವಾಗಿದೆ.
ವೀರಾಪುರ ಓಣಿಯಲ್ಲಿ ಅಂಜಲಿಯನ್ನು ಕೊಲೆ ಮಾಡಲು ಆಟೋದಲ್ಲಿ ಬಂದಿದ್ದ ಆರೋಪಿ ವಿಶ್ವ, ಬೆಳಗಿನ ಜಾವ 5.30 ರ ಸುಮಾರಿಗೆ ಕೊಲೆ ಮಾಡಿದ ನಂತರ ಅಲ್ಲಿಂದ ಆಟೋವನ್ನ ಬಿಟ್ಟು ಭಯದಿಂದಲೇ ಗೋಕುಲ್ ರಸ್ತೆಯಲ್ಲಿನ ಹೊಸ ಬಸ್ ನಿಲ್ದಾಣಕ್ಕೆ ಓಡಿ ಹೋಗಿದ್ದ. ಅಲ್ಲಿ ವಿಶ್ವನಿಗೆ ಎಲ್ಲಿಗೆ ಹೋಗಬೇಕು ಎಂಬ ಅರಿವು ಇಲ್ಲದೇ ಬಸ್ ನಿಲ್ದಾಣದಲ್ಲಿಯೇ ಸುತ್ತಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಶಿವಮೊಗ್ಗ ಬಸ್ಗಳು ನಿಲ್ಲುವ ಜಾಗದಲ್ಲಿ ಈತ ಸುತ್ತಾಡುತ್ತಿದ್ದ. ಈ ಹಿನ್ನಲೆ ಶಿವಮೊಗ್ಗಕ್ಕೇ ತೆರಳಿರಬಹುದು ಎಂಬ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ:ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ
ಒಟ್ಟಾರೆ ಒಂದು ತಿಂಗಳ ಅವಧಿಯಲ್ಲಿ ನಡೆದ ನೇಹಾ ಅಂಜಲಿ ಕೊಲೆ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದಂತೂ ನಿಜ. ಸರ್ಕಾರದ ವಿರುದ್ದ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಮೇಲ್ನೋಟಕ್ಕೆ ಪೊಲೀಸರ ನಿರ್ಲಕ್ಷ್ಯ ಕಂಡುಬಂದಿರೋ ಕಾರಣ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ.ಬಿ ಚಿಕ್ಕೋಡಿ ಹಾಗೂ ಮಹಿಳಾ ಪೇದೆಯನ್ನು ಅಮಾನತ್ತು ಮಾಡಿದ್ದಾರೆ. ಆದ್ರೆ, ಕೊಲೆಯಾಗಿ 48 ಗಂಟೆ ಕಳೆದರೂ ಆರೋಪಿ ಬಂಧನವಾಗದೆ ಇರೋದು ಆಕ್ರೋಶಕ್ಕೆ ಗುರಿಯಾಗಿದೆ. ನಾಳೆ(ಮೇ.17) ಕೂಡ ಹುಬ್ಬಳ್ಳಿಯಲ್ಲಿ ಮಠಾಧೀಪತಿಗಳು ಹೋರಾಟ ಹಮ್ಮಿಕೊಂಡಿದ್ದು, ಅಂಜಲಿ ಕೊಲೆ ಕೇಸ್ ಇನ್ಯಾವ ತಿರುವು ಪಡೆದುಕೊಳ್ಳತ್ತದೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ