ಹುಬ್ಬಳ್ಳಿ, ಫೆಬ್ರವರಿ 18: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರವನ್ನು (Anganwadi Children’s Nutritious Food) ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಸೇರಿದಂತೆ 26 ಮಂದಿ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು (Hubballi Police) ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಫೆಬ್ರವರಿ 15 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಗೋದಾಮಿನ ಮೇಲೆ ದಾಳಿ ಮಾಡಿದ್ದರು. ಈ ವೇಳ ಮಕ್ಕಳ ಅಹಾರ, ಗರ್ಭಿಣಿಯರ ಆಹಾರವನ್ನು ಸಂಗ್ರಹ ಮಾಡಿದ್ದು ಪತ್ತೆಯಾಗಿತ್ತು. ಬಳಿಕ, ಅಧಿಕಾರಿಗಳು ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು ನೀಡುದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಗೋದಿ ರವ, ಹಾಲಿನ ಪುಡಿ, ಬೆಲ್ಲ, ಹೆಸರುಕಾಳು ಮತ್ತು ಅಕ್ಕಿ ಸೇರಿದಂತೆ ನಾಲ್ಕು ಲಕ್ಷ ಮೌಲ್ಯದ ಅಹಾರದ ಪಾಕೆಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಗೋದಾಮು ಮಾಲೀಕ ಹಾಗೂ ಬಾಡಿಗೆ ಪಡೆದುಕೊಂಡವರು ಸೇರಿ ಮೊದಲು ಎಂಟು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಅವರಿಂದ ಮಾಹಿತಿ ಪಡೆದ ಬಳಿಕ ಸುಮಾರು 18 ಅಂಗನವಾಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಪಾಕೆಟ್ಗನ್ನು ಸಂಗ್ರಹಿಸಿರುವುದು ಕಂಡು ಬಂದಿದೆ. ಹೀಗಾಗಿ, 18 ಜನ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಾಲಗಿದೆ ಎಂದು ಹೇಳಿದರು.
ಇದೊಂದು ಗಂಭೀರ ಪ್ರಕರಣವಾಗಿದ್ದು, ಇದರ ಪ್ರಮುಖ ಇಬ್ಬರು ಸೂತ್ರಧಾರರು ನಾಪತ್ತೆಯಾಗಿದ್ದಾರೆ. ಸೂತ್ರಧಾರರು ಹೊರರಾಜ್ಯದಲ್ಲಿದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಅವರನ್ನು ಬಂಧಿಸುತ್ತೇವೆ.
ಒಟ್ಟು ನಾಲ್ಕು ವಿಭಾಗದ ಫಲಾನುಭವಿಗಳ ಅಹಾರ ಧಾನ್ಯ ಸಂಗ್ರಹ ಮಾಡಿದ್ದರು. ಇದೊಂದು ಕೆಟ್ಟ ಅಪರಾಧ, ನನಗೆ ಈ ಪ್ರಕರಣದಲ್ಲಿ ಯಾರೂ ಒತ್ತಡ ಹಾಕಿಲ್ಲ ಎಂದರು.
ಶಿವಕುಮಾರ್ ದೇಸಾಯಿ (ಬುಲೆರೋ ವಾಹನದ ಮಾಲೀಕ), ಬಸವರಾಜ್ ಭದ್ರಶೆಟ್ಟಿ (ವಾಹನದ ಚಾಲಕ), ಮಹಮ್ಮದ್ ಗೌಸ್ (ಗೋಡೌನ್ ಮಾಲೀಕ), ಗೌತಮ್ ಸಿಂಗ್ ಠಾಕೂರ (ಗೋಡೌನ್ ಬಾಡಿಗೆದಾರ), ಮಂಜುನಾಥ ಮಾದರ, ಪಕ್ಕಿರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ್ ಬಂಧಿತರು.
ಶಾಮೀನಬಾನು ಮುಜಾವರ್, ಬಿಬೀ ಆಯಿಷಾ, ರೇಷ್ಮಾ ವಡ್ಡೋ, ಶಾಹೀನ್ ಚಕ್ಕೆಹಾರಿ, ಫೈರೋಜಾ ಮುಲ್ಲಾ, ಬಿಬಿಆಯಿಷಾ ಷೇಕ್, ಶಮೀಮಾ ಬಾನು ದಾರುಗಾರ, ಮೆಹಬೂಬಿ ಹಲ್ಯಾಳ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾ ಕೌಸರ್, ಹೀನಾ ಕೌಸರ್ ಮೇಸ್ತ್ರೀ, ಶೀಲಾ ಹಿರೇಮಠ, ಶೃತಿ ಕೊಟಬಾಗಿ, ಪರವೀನ್ ಬಾನು ಖಲೀಪ, ರೇಣುಕಾ ಕಮಲದಿನ್ನಿ, ಗಂಗಮ್ಮ ಪಾಂಡರೆ ಬಂಧಿತ ಅಂಗನವಾಡಿ ಕಾರ್ಯಕರ್ತೆಯರು.
ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ಸೇರಬೇಕಾದ ಸುಮಾರು ನಾಲ್ಕು ಲಕ್ಷ ಮೌಲ್ಯದ ಬೆಲ್ಲ ಅಕ್ಕಿ, ಬೇಳೆ ಗೋದಿ ಸೇರಿ ವಿವಿಧ 18 ಆಹಾರ ಧಾನ್ಯಗಳ ಪಾಕೆಟ್ ಪೊಲೀಸರು ಸೀಜ್ ಮಾಡಿದ್ದಾರೆ. ಅಕ್ರಮವಾಗಿ ಆಹಾರ ಧಾನ್ಯ ಸಾಗಾಟ ಮಾಡಲು ಬಳಸುತ್ತಿದ್ದ KA 25 AB 8346 ಗೂಡ್ಸ್ ವಾಹನವನ್ನು ಹುಬ್ಬಳ್ಳಿ ಕಸಬಾಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ್ ಪತಿ ಫಾರೂಕ್ಗೆ ಸೇರಿದ ಗಬ್ಬೂರ ಬಳಿಯ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಗೋದಾಮಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಆಹಾರ ಪತ್ತೆಯಾಗಿತ್ತು. ಈ ಸಂಬಂಧ ಹುಬ್ಬಳ್ಳಿಯ ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫಾರೂಕ್ ಸೇರಿ ಮೂವರು ಆರೋಪಿಗಳ ವಿರುದ್ದ ದೂರು ದಾಖಲಾಗಿತ್ತು. ದೂರು ಆಧರಿಸಿ ಹುಬ್ಬಳ್ಳಿಯ ಕೇಶ್ವಾಪುರ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.
ಅಂಗನವಾಡಿಗೆ ಸೇರಬೇಕಾಗಿದ್ದ ಆಹಾರವನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಫಾರೂಕ್ ಪತ್ನಿ ಬೈತಲ್ಲೂ ಕಿಲ್ಲೇದಾರ್ ವಿರುದ್ಧ ಹಿಂದೂಗಳ ಭಾವನೆಗೆ ದಕ್ಕೆಯಾಗುವಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೈತೂಲ್ಲಾ ಕಿಲ್ಲೇದಾರ ಮಾತಾಡಿದ ಆಡಿಯೋವನ್ನು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಬಿಡುಗಡೆ ಮಾಡಿದ್ದಾರೆ. “ಕಿಲ್ಲೆದಾರ ಆ್ಯಂಟಿ ಸೋಶಿಲಿಸ್ಟ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆ. ಮುಸಲ್ಮಾನ ಏರಿಯಾದಲ್ಲಿ ಗಣತಿಗೆ ಬಂದ್ರೆ ಹೊಡೆಯಿರಿ ಎಂದು ಹೇಳಿದ್ದಾರೆ. ಆ ಆಡಿಯೋ ನನಗೆ ಸಿಕ್ಕಿದೆ. ಬೈತಲ್ಲೂ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರಿಗೆ ಬೈದಿದ್ದಾರೆ. ಅಂಗನವಾಡಿ ಟೀಚರ್ ಅಂತಾ ನೇಮಕ ಆಗಿ ಮೋದಿ ಕುರಿತು ಕೆಟ್ಟ ಪದ ಬಳಸಿದ್ದಾರೆ. ಹರಾಮ್ ಕೋರ್ ಅನ್ನೋ ಶಬ್ದ ಬಳಸಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ನಡಿದಿದೆ” ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪ ಮಾಡಿದರು.
“ಬೈತೂಲ್ಲಾ ಕಿಲ್ಲೇದಾರ ತನಗೆ ಪರಿಚಯ ಇರುವವರ ಜೊತೆ ಮಾತಾಡಿದ್ದಾಳೆ. ವಿಭೂತಿ ಬಗ್ಗೆಯೂ ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಬೈತೂಲ್ಲಾ ಕಿಲ್ಲೇದಾರ ಹಿಂದೂಗಳ ಭಾವನೆ ಕೆಣಕಿದ್ದಾರೆ. ಬೈತಲ್ಲೂ ಕಿಲ್ಲೇದಾರ ಅಮಾನತ್ತು ಮಾಡದೆ ಹೋದರೇ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ: ಮಕ್ಕಳ ಅನ್ನಕ್ಕೂ ಕನ್ನ ಹಾಕಿದ ‘ಕೈ’ ನಾಯಕಿ, ಗೋಡೌನ್ನಲ್ಲಿ ಸಂಗ್ರಹಿಸಿದ್ದ ಪೌಷ್ಟಿಕ ಆಹಾರ ಜಪ್ತಿ
ಬೈತಲ್ಲೂ ಹಿಂದೂಗಳ ಭಾವನೆಗೆ ದಕ್ಕೆಯಾಗುವಂತೆ ಮಾತಾಡಿರುವ ಆಡಿಯೋ ಸಿಕ್ಕಿದೆ. ಆಡಿಯೋ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲೀಗಲ್ ಒಪನಿಯನ್ ಪಡೆದ ಬಳಿಕ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Tue, 18 February 25