ಹುಬ್ಬಳ್ಳಿ: ಮಕ್ಕಳ ಅನ್ನಕ್ಕೂ ಕನ್ನ ಹಾಕಿದ ‘ಕೈ’ ನಾಯಕಿ, ಗೋಡೌನ್ನಲ್ಲಿ ಸಂಗ್ರಹಿಸಿದ್ದ ಪೌಷ್ಟಿಕ ಆಹಾರ ಜಪ್ತಿ
ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಪೌಷ್ಟಿಕ ಆಹಾರವನ್ನು ಕಾಂಗ್ರೆಸ್ ಮುಖಂಡೆಯೊಬ್ಬರು ಅಕ್ರಮವಾಗಿ ಸಾಗಿಸಿ ಬಚ್ಚಿಟ್ಟಿರುವುದು ಹುಬ್ಬಳ್ಳಿಯಲ್ಲಿ ತಿಳಿದುಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಫುಡ್ ಕಿಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅತ್ತ ಕಾಂಗ್ರೆಸ್ ನಾಯಕಿ ಸದ್ಯ ತಲೆಮರೆಸಿಕೊಂಡಿದ್ದಾರೆ.

ಹುಬ್ಬಳ್ಳಿ, ಫೆಬ್ರವರಿ 17: ಅದು ಮಕ್ಕಳಿಗೆ ಸೇರಬೇಕಾದ ಪೌಷ್ಟಿಕ ಆಹಾರ. ಆದರೆ ಮಕ್ಕಳ ಅನ್ನಕ್ಕೂ ಕನ್ನ ಹಾಕಲಾಗುತ್ತಿದೆ. ವಿಪರ್ಯಾಸ ಎಂಬಂತೆ, ಮಕ್ಕಳ ಅನ್ನಕ್ಕೆ ಕನ್ನ ಹಾಕುತ್ತಿರುವುದು ಬೇರೆ ಯಾರೂ ಅಲ್ಲ. ರಾಜಕೀಯ ನಾಯಕರೇ. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಾಣಂತಿಯರು ಮೃತಪಡುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳಲ್ಲಿಯೂ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ಕೊಡಿ ಎಂದು ಕಳುಹಿಸಿಕೊಡುತ್ತಿದ್ದರೆ, ಇತ್ತ ಪ್ರಭಾವಿಗಳು ಮಕ್ಕಳ ತಟ್ಟೆಗೂ ಕೈ ಹಾಕಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಸಣ್ಣ ಮಕ್ಕಳಿಗೆ ನೀಡುವ ಹಾಲಿನ ಪೌಡರ್, ಗೋಧಿ, ಬೇಳೆ, ಬೆಲ್ಲ ಸೇರಿದಂತೆ ಪೌಷ್ಟಿಕ ಅಹಾರಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾರೆ. ಪತಿ ಫಾರೂಕ್ ಜೊತೆ ಸೇರಿಕೊಂಡು ಗೋಡೌನ್ಲ್ಲಿ ಅಕ್ರಮವಾಗಿ ಫುಡ್ ಪಾಕೇಟ್ಗಳನ್ನು ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ, ತಹಶಿಲ್ದಾರ್ ನೇತೃತ್ವದಲ್ಲಿ ಗಬ್ಬೂರಿನ ಪ್ಲಾಸ್ಟಿಕ್ ಸಂಗ್ರಹ ಮಾಡುವ ಹಳೇ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗೋಡೌನ್ನಲ್ಲಿ ರಾಶಿ ರಾಶಿ ಮೂಟೆಗಳು ಸಿಕ್ಕಿವೆ.
ಆರೋಪಿ ಕಿಲ್ಲೇದಾರ ಅಂಗನವಾಡಿ ಕಾರ್ಯಕರ್ತೆಯರ ಸಂಘ ಕಟ್ಟಿಕೊಂಡು ಓಡಾಡಿತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕಿಯಾಗಿ ಹೆಸರು ಮಾಡಿದ್ದರು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರಿನ ಮೇಲೆ ಬೈತೂಲ್ಲಾ ಕಿಲ್ಲೇದಾರ, ಪತಿ ಫಾರೂಕ್ ಹಾಗೂ ಕಾರು ಚಾಲಕ ಮತ್ತು ಕಾರು ಮಾಲೀಕರ ಮೇಲೆ ದೂರು ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆಯೇ ಬೈತೂಲ್ಲಾ ಕಿಲ್ಲೇದಾರ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: 18 ವರ್ಷದ ಹುಡುಗಿ ಜೊತೆ 50 ರ ವ್ಯಕ್ತಿಯ ಲವ್ವಿ ಡವ್ವಿ, ಅಜ್ಜಿ ಮನೆಯಲ್ಲಿದ್ದ ಹುಡುಗಿ ನಾಪತ್ತೆ
ಆರೋಪಿ ಬೈತೂಲ್ಲಾ ಕಿಲ್ಲೇದಾರ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರ ಜೊತೆ ಫೋಟೋಗೆ ಪೋಸ್ ಕೊಟ್ಟು ಬಿಲ್ಡಪ್ ಕೊಟ್ಟುಕೊಂಡು ಓಡಾಡುತ್ತಿದ್ದುದೂ ತಿಳಿದುಬಂದಿದೆ. ಈಗ ಅಕ್ರಮ ಎಸಗಿ ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ