ಹುಬ್ಬಳ್ಳಿ: 18 ವರ್ಷದ ಹುಡುಗಿ ಜೊತೆ 50 ರ ವ್ಯಕ್ತಿಯ ಲವ್ವಿ ಡವ್ವಿ, ಅಜ್ಜಿ ಮನೆಯಲ್ಲಿದ್ದ ಹುಡುಗಿ ನಾಪತ್ತೆ
ಎರಡು ವರ್ಷ ಹಿಂದಿನಿಂದಲೇ ಹುಡುಗಿಯೊಬ್ಬಳ ಜತೆ ಲವ್ವಿ ಡವ್ವಿ ಆರಂಭಿಸಿದ್ದ ಸುಮಾರು 50ರ ವಯಸ್ಸಿನ ವ್ಯಕ್ತಿ ಒಬ್ಬ ಇದೀಗ ಹುಡುಗಿಯನ್ನು ಅಪರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಾಗಿದೆ. ಆದರೆ, ಬಾಲಕಿಯ ಪತ್ತೆಯಾಗದಿರುವುದು ಪೋಷಕರ ಆತಂಕ ಹೆಚ್ಚಿಸಿದೆ.

ಹುಬ್ಬಳ್ಳಿ, ಫೆಬ್ರವರಿ 13: 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ 18 ವರ್ಷ ವಯಸ್ಸಿನ ಹುಡುಗಿ ಜೊತೆ ಓಡಿಹೋಗಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ. ವಿಚಿತ್ರವೆಂದರೆ, ಹುಡುಗಿಯನ್ನು ಪಟಾಯಿಸಿದ್ದಾನೆ ಎನ್ನಲಾದ ವ್ಯಕ್ತಿ ತಲೆಮರೆಸಿಕೊಂಡಿಲ್ಲ. ಆದರೆ, ಹುಡುಗಿ ಸುಮಾರು 40 ದಿನಗಳಿಂದ ನಾಪತ್ತೆಯಾಗಿದ್ದಾಳೆ. ಈ ವಿಚಾರವಾಗಿ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಂದಹಾಗೆ, ಆರೋಪಿಯನ್ನು ಹುಬ್ಬಳ್ಳಿಯ ಚಾಲುಕ್ಯ ನಗರದ ಪ್ರಕಾಶ್ ಎಂದು ಗುರುತಿಸಲಾಗಿದೆ. ಸದ್ಯ ಕೇಶಾಪೂರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮದುವೆಯಾಗಿ ಎರಡು ಮಕ್ಕಳಿರುವ ಆರೋಪಿ ಪ್ರಕಾಶ್, 2 ವರ್ಷದ ಹಿಂದೆಯೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ, ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ಆಕೆಯ ಮನಃ ಪರಿವರ್ತನೆ ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ, ಆರೋಪಿಯ ವಿರುದ್ಧ ದೂರು ನೀಡಿದ್ದರು. ಇದರಂತೆ ಆತನ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಬಳಿಕ ಹುಬ್ಬಳ್ಳಿಯಲ್ಲಿಯೇ ಇದ್ದರೆ ಸಮಸ್ಯೆ ಆಗುತ್ತದೆ ಎಂದು ಹುಡುಗಿಯನ್ನು ಮನೆಯವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಅಂದಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು. ಆದರೆ ಆಕೆ, ಜನವರಿ 3 ರಂದು ಅಲ್ಲಿಂದ ನಾಪತ್ತೆಯಾಗಿದ್ದಾಳೆ. ಆ ಬಳಿಕ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆರೋಪಿ ಪ್ರಕಾಶ್ ಆಕೆಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಇದೀಗ ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಧಾರವಾಡ: ಪೊಲೀಸರು ಸೃಷ್ಟಿಸಿದ್ದ ಜಡ್ಜ್ ಪಾತ್ರದಿಂದ ಬಲೆಗೆ ಬಿದ್ದ ಪೋಕ್ಸೋ ಆರೋಪಿ
ಮಗಳ ಬಗ್ಗೆ ಯಾವುದೇ ಮಾಹಿತಿ ಸಿಗದೇ ಕಳೆದ ಒಂದು ತಿಂಗಳಿನಿಂದ ಕಣ್ಣಿಟ್ಟಿರುವ ಪೋಷಕರು, ಊಟ ನಿದ್ದೆ ಬಿಟ್ಟು ಬೀದಿ ಬೀದಿಗಳಲ್ಲಿ ಮಗಳ ಫೋಟೋ ಹಿಡಿದು ಹುಡುಕುತ್ತಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡುವ ಮೂಲಕ ಅವರ ಮೊರೆ ಹೋಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ