ಮನಕಲಕುವಂತಿದೆ ಅಯ್ಯಪ್ಪ ಮಾಲಾಧಾರಿಗಳ ಸಾವು: ಇದ್ದ ಬೊಬ್ಬರನ್ನೇ ಕಳೆದುಕೊಂಡ 4 ಕುಟುಂಬಗಳು

| Updated By: ವಿವೇಕ ಬಿರಾದಾರ

Updated on: Dec 29, 2024 | 2:03 PM

ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದು, ಆರು ಜನರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಅಯ್ಯಪ್ಪ ಮಾಲಾಧಾರಿಗಳ ಹಿನ್ನೆಲೆ ಮನಕಲಕುವಂತಿದೆ. ಮನೆಗೆ ಆಸರಾಗಬೇಕಿದ್ದ ತರುಣರು ಮಸಣ ಸೇರಿದ್ದು, ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ತನ್ನ ಭಕ್ತರ ಮೇಲೆ ಅಯ್ಯಪ್ಪ ಸ್ವಾಮಿಗೆ ಯಾಕಿಷ್ಟು ಸಿಟ್ಟು ಅಂತ ಮೃತ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಮನಕಲಕುವಂತಿದೆ ಅಯ್ಯಪ್ಪ ಮಾಲಾಧಾರಿಗಳ ಸಾವು: ಇದ್ದ ಬೊಬ್ಬರನ್ನೇ ಕಳೆದುಕೊಂಡ 4 ಕುಟುಂಬಗಳು
ಮೃತ ಅಯ್ಯಪ್ಪ ಮಾಲಾಧಾರಿಗಳು
Follow us on

ಹುಬ್ಬಳ್ಳಿ, ಡಿಸೆಂಬರ್​ 29: ಕಳೆದ ಭಾನುವಾರ ತಡರಾತ್ರಿ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಪೋಟ (Cylinder Blast) ಪ್ರಕರಣ ಹುಬ್ಬಳ್ಳಿ-ಧಾರವಾಡ (Hubballi-Dharwad) ಜನರನ್ನು ಬೆಚ್ಚಿ ಬಿಳಿಸಿದೆ. ಸಿಲಿಂಡರ್​ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪ ಮಾಲಾಧಾರಿಗಳಲ್ಲಿ (Ayyappa Maladhari) 6 ಮಂದಿ ಮೃತಪಟ್ಟಿದ್ದಾರೆ. ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ತನ್ನ ಭಕ್ತರ ಮೇಲೆ ಅಯ್ಯಪ್ಪ ಸ್ವಾಮಿಗೆ ಯಾಕಿಷ್ಟು ಸಿಟ್ಟು ಅಂತ ಮೃತ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಅಯ್ಯಪ್ಪ ಮಾಲಾಧಾರಿಗಳ ಕುಟುಂಬದ ಸ್ಥಿತಿ ಮನಕಲಕುವಂತಿದೆ. ವಯಸ್ಸಾದ ತಂದೆ-ತಾಯಿಗೆ ಆಸರೆಗೋಲು ಆಗಬೇಕಿದ್ದ, ಹಿರಿಯ ಮಗನಾಗಿ ಮನೆಯ ಜವಾಬ್ದಾರಿ ಹೊರಬೇಕಿದ್ದ ಮಕ್ಕಳು ಮಸಣ ಸೇರಿದ್ದು ಮಾತ್ರ, ದುರಾದೃಷ್ಟಕರ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಹೇಳತೀರದು.

ಸಂಜಯ್ ಸವದತ್ತಿ, ರಾಜು ಮೂಗೇರಿ, ಲಿಂಗರಾಜ ಬೀರನೂರ ಮನೆಗೆ ಒಬ್ಬರೇ ಗಂಡು ಮಕ್ಕಳು. ಲಿಂಗರಾಜ ಬಿರನೂರ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯಲ್ಲಿ ಕೆಲಸ ಮಾಡಿ‌, ಬರುತ್ತಿದ್ದ ವೇತನದಲ್ಲಿ ಸಂಸಾರದ ಬಂಡಿಯನ್ನು ನಡೆಸುತ್ತಿದ್ದರು. ಇನ್ನು, ರಾಜು ತರಕಾರಿ ಮಾರಿ, ಬಂದ ಆಧಾಯದಲ್ಲಿ ಮನೆ ನಡೆಸುತ್ತಿದ್ದರು. ಒಬ್ಬೊಬ್ಬರೇ ಮಕ್ಕಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯತ್ತಿದೆ.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾವು

ರವಿವಾರ ತಡರಾತ್ರಿ ಮೃತಪಟ್ಟ 30 ವರ್ಷದ ಶಂಕರ್ ಕಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅನಿಲ್ ಘಟಕದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಶಂಕರ್, ದೊಡ್ಡಮ್ಮನ ಆರೈಕೆಯಲ್ಲಿ ಬೆಳದಿದ್ದನು.

ಬೇಡ ಅಂದರೂ ಮಾಲೆ ಹಾಕಿದ್ದ ಶಂಕರ್​: ದೊಡ್ಡಮ್ಮ

ನನ್ನ ಮಗ ಶಂಕರ್ ಕಿಮ್ಸ್​ನಲ್ಲಿ ಕೆಲಸ ಮಾಡತಿದ್ದನು. ಅಲ್ಲಿಯೇ ಸಾವಾಗಿದೆ. ಈ ತರಹ ಆಗತ್ತೆ ಎಂದು ಭಾವಿಸರಲಿಲ್ಲ. ಬಹಳ ಒಳ್ಳೆಯ ಹುಡಗ. ಮದುವೆ ಮಾಡಲು ಆತನಿಗೆ ಹುಡಗಿ ಹುಡುಕುತಿದ್ವಿ. ಎರಡ್ಮೂರು ತಿಂಗಳಲ್ಲಿ ಮದುವೆ ಮಾಡಬೇಕು ಅಂದುಕೊಂಡಿದ್ವಿ. ಇದೀಗ ಹೀಗೆ ಅಗಿದೆ. ಬೇಡ ಅಂದರೂ ಮಾಲೆ ಹಾಕಿದ್ದ ಎಂದು ದೊಡ್ಡಮ್ಮ ಮಂಜುಳಾ ಕಣ್ಣೀರು ಹಾಕಿದ್ದಾರೆ.

ಅಯ್ಯಪ್ಪ ಕೃಪೆ ತೋರಲಿಲ್ಲ: ಶಂಕರ್​ ಸಹೋದರಿ

ಕೊರೊನಾ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದನು. ಆದರೆ, ಅವನ ಮೇಲೆ ಅಯ್ಯಪ್ಪ ಕೃಪೆ ತೋರಲಿಲ್ಲ. ಶಿಕ್ಷೆ ಕೊಡಲಿ ಆದರೆ ಇಂತಹ ಕೆಟ್ಟ ಶಿಕ್ಷೆ ಕೊಡಬಾರದಿತ್ತು. ಶಂಕರನ ಕಳೆದುಕೊಂಡ ದುಃಖ ನಮಗೆ ಭರಿಸಲು ಆಗುವುದಿಲ್ಲ. ಮಾಲೆ ಹಾಕಬೇಡ ಅಂತ ನಾವೆಲ್ಲ ಹೇಳಿದ್ವಿ ಎಂದು ಶಂಕರ್​ ಸಹೋದರಿ ಗೋಳಾಡಿದ್ದಾರೆ. ಮೃತ ಮಂಜು ವಾಗ್ಮೋಡೆ ಡಿಪ್ಲೊಮಾ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದನು.‌

ಒಟ್ಟಿನಲ್ಲಿ 9 ಮಾಲಾಧಾರಿಗಳ ಪೈಕಿ ಆರು ಜನ ಮೃತಪಟ್ಟಿದ್ದು, ಇನ್ನೂ ಮೂರು ಮಾಲಾಧಾರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಇವರನ್ನಾದರೂ ಮಣಿಕಂಠ ಕಾಪಾಡಲಿ ಎನ್ನುವುದು ಅಸಂಖ್ಯಾತ ಅಯ್ಯಪ್ಪ ಭಕ್ತರ ಪ್ರಾರ್ಥನೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:00 pm, Sun, 29 December 24