ಹುಬ್ಬಳ್ಳಿ ಧಾರವಾಡ: ಅಗ್ನಿಕುಂಡಗಳಂತಾದ ಬಿ.ಆರ್.ಟಿ.ಎಸ್ ಬಸ್; ಉಸಿರಾಡೋದೆ ಕಷ್ಟ ಅಂತೀರೋ ಪ್ರಯಾಣಿಕರು
ಸಾರ್ವಜನಿಕ ಸಂಚಾರವನ್ನು ಜನಪ್ರಿಯಗೊಳಿಸುವ ಉದ್ದೇಶದೊಂದಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ಆರಂಭವಾಗಿರುವ ಬಿ.ಆರ್.ಟಿ.ಎಸ್ ನ ಬಸ್ಗಳೀಗ ಅಗ್ನಿಕುಂಡಗಳಾಗಿ ಬದಲಾಗಿವೆ. ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬಸ್ಗಳೊಳಗೆ ಇರುವ ಎಸಿಗಳೆಲ್ಲಾ ಬಂದ್ ಆಗಿರುವ ಕಾರಣ ಜನರು ಉಸಿರಾಡೋದೇ ಕಷ್ಟವಾಗಿ ಹೋಗಿದೆ.
ಹುಬ್ಬಳ್ಳಿ ಧಾರವಾಡ: ಕಡಿಮೆ ದರದಲ್ಲಿ ಹವಾ ನಿಯಂತ್ರಿತ ಬಸ್ ಸೇವೆ ಎಂಬ ಹಣೆಪಟ್ಟಿಯೊಂದಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನಡುವೆ ಕಾರ್ಯಾಚರಣೆ ನಡೆಸುತ್ತಿರುವ ಬಿಆರ್‌ಟಿಎಸ್ ಬಸ್‌ಗಳು ಅಕ್ಷರಶಃ ಕುದಿಯುವ ಹೊಂಡಗಳಂತಾಗಿವೆ. ಬಿಆರ್ಟಿಎಸ್ನ ಚಿಗರಿ ಬಸ್‌ನಲ್ಲಿ ಎಸಿಗಳು ಕಾರ್ಯನಿರ್ವಹಿಸದ ಕಾರಣಕ್ಕೆ ಪ್ರಯಾಣಿಕರು ನಿತ್ಯ ಸೆಕೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈಗಲೇ ಹೀಗಾದರೆ ಮುಂದಿನ ತಿಂಗಳುಗಳಲ್ಲಿ ಇನ್ನೇನು ಗತಿ ಎಂಬ ಪ್ರಶ್ನೆ ಉದ್ಭವವಾಗಿದೆ. ಕೆಲವು ಬಸ್‌ಗಳಲ್ಲಿ ಎಸಿ ದುರಸ್ತಿಗೆ ಬಂದಿದ್ದರೆ, ಮತ್ತೆ ಕೆಲವು ಬಸ್‌ಗಳಲ್ಲಿ ಎಸಿ ಸರಿಯಾಗಿದ್ದರೂ ಅದನ್ನು ಶುರು ಮಾಡಲು ಚಾಲಕರು ಮನಸ್ಸು ಮಾಡುತ್ತಿಲ್ಲ. ಇದರ ಪರಿಣಾಮ ಉಸಿರುಗಟ್ಟಿಸುವ ವಾತಾವರಣದ ಜೊತೆಗೆ ಸೆಕೆಯಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ನಿತ್ಯ ಅವಳಿ ನಗರದ ಮಧ್ಯೆ 92 ಚಿಗರಿ ಬಸ್‌ಗಳು ಓಡಾಟ ನಡೆಸುತ್ತಿವೆ. ಇವುಗಳಲ್ಲಿ ನಿತ್ಯವೂ ಸಾವಿರಾರು ಜನರು ಪ್ರಯಾಣಿಸುತ್ತಿದ್ದಾರೆ. ಒಂದೊಂದು ಬಸ್ಗೆ ಕೋಟಿ ರೂಪಾಯಿ ಬೆಲೆ. ಎಲ್ಲವೂ ಎಸಿ ಬಸ್ಗಳೇ, ಹೀಗಾಗಿ ಈ ಬಸ್ ಗಳಿಗೆ ಕಿಟಕಿಗಳೇ ಇಲ್ಲ. ಕೊರೊನಾ ಸಂದರ್ಭದಲ್ಲಿ ಎಸಿ ಬಂದ್ ಮಾಡಲು ಸೂಚಿಸಲಾಗಿತ್ತು. ಆದರೆ ಇದೀಗ ಕೊರೊನಾ ಕಾಲ ಮುಗಿದು ಎಲ್ಲವೂ ನಾರ್ಮಲ್ ಸ್ಥಿತಿಗೆ ಬಂದಿದೆ. ಆದರೂ ಈ ಬಸ್‌ಗಳಲ್ಲಿ ಎಸಿ ಮಾತ್ರ ಆನ್ ಆಗುತ್ತಲೇ ಇಲ್ಲ. ಇದೆಲ್ಲದರ ಜೊತೆಗೆ ಇದೀಗ ಬೇರೆ ಬೇರೆ ಸಮಸ್ಯೆಗಳು ಕೂಡ ಉದ್ಭವಿಸುತ್ತಿವೆ. ಅಟೋಮ್ಯಾಟಿಕ್ ಆಗಿ ಬಾಗಿಲು ತೆರೆಯೋ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡು ಬರುತ್ತಿದೆ. ಇನ್ನು ಬಸ್ ನಿಲ್ದಾಣದ ಅಟೋಮ್ಯಾಟಿಕ್ ಬಾಗಿಲು ಕೂಡ ಆಗಾಗ ಕೈಕೊಡುತ್ತಿವೆ. ಇದರಿಂದಾಗಿ ಹೈಟೆಕ್ ಬಸ್ ಮತ್ತು ಹೈಟೆಕ್ ಪ್ರಯಾಣ ಅನ್ನುತ್ತಿದ್ದ ಈ ವ್ಯವಸ್ಥೆ ಇದೀಗ ಸಂಪೂರ್ಣ ಹಳ್ಳ ಹಿಡಿದು ಹೋಗುತ್ತಿದೆ.
ಇದನ್ನೂ ಓದಿ:‘ಹುಬ್ಬಳ್ಳಿ: ದೇವರ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ಅಪಘಾತ: 8ಕ್ಕೂ ಹೆಚ್ಚು ಜನರಿಗೆ ಗಾಯ
ಈ ಬಗ್ಗೆ ಬಿಆರ್‌ಟಿಎಸ್ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಅವರನ್ನು ಕೇಳಿದರೆ, ಎಲ್ಲ ಬಸ್‌ಗಳಲ್ಲಿ ಎಸಿಗಳು ಚೆನ್ನಾಗಿಯೇ ಇವೆ. ಈ ಬಗ್ಗೆ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮಾಹಿತಿ ನೀಡಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳೋದಾಗಿ ಹೇಳುತ್ತಾರೆ. ಒಟ್ಟಿನಲ್ಲಿ ಜನರು ಚಿಗರಿ ಬಸ್ ನಲ್ಲಿ ಹೋಗಬೇಕು ಅಂದುಕೊಂಡರೆ ಇದೀಗ ಅದಕ್ಕೂ ಕಲ್ಲು ಬಿದ್ದಂತಾಗುತ್ತಿರೋದು ವಿಪರ್ಯಾಸದ ಸಂಗತಿಯೇ ಸರಿ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ