ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಅಂಗಲಾಚಿದರೂ ಯಾರೂ ನೆರವಿಗೆ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು

ಹುಬ್ಬಳ್ಳಿಯಲ್ಲಿ ನಡೆದ ಭೀಕರ ಮರ್ಯಾದಾ ಹತ್ಯೆ ಸಂಚಲನ ಮೂಡಿಸಿದ್ದು, ಅಂತರಜಾತಿ ವಿವಾಹವಾಗಿದ್ದ ಏಳು ತಿಂಗಳ ಗರ್ಭಿಣಿ ಮಾನ್ಯಾಳನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾರೆ. ಇದೀಗ ಪತಿ ವಿವೇಕಾನಂದ ನಡೆದ ಘಟನೆ ಬಗ್ಗೆ ವಿವರಿಸಿದ್ದು, ಮನೆಗೆ ನುಗ್ಗಿ ಹಲ್ಲೆ ಮಾಡುತ್ತಿದ್ದಾಗಲೂ ಯಾರೂ ನೆರವಿಗೆ ಬರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಅಂಗಲಾಚಿದರೂ ಯಾರೂ ನೆರವಿಗೆ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು
ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು
Edited By:

Updated on: Dec 22, 2025 | 12:53 PM

ಹುಬ್ಬಳ್ಳಿ, ಡಿಸೆಂಬರ್ 22: ‘ಅವರು ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ ಹೊಡೆದು ಬಡಿಯುತ್ತಿದ್ದರು. ಆದರೂ ಅಂಗಲಾಚಿದರೂ ಯಾರೊಬ್ಬರೂ ನಮ್ಮ ನೆರವಿಗೆ ಬರಲಿಲ್ಲ’. ಇದು ಧಾರವಾಡ(Dharawad) ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಮರ್ಯಾದಾ ಹತ್ಯೆ ಬಗ್ಗೆ ಮೃತ ಯುವತಿ ಮಾನ್ಯಾಳ ಪತಿ ವಿವೇಕಾನಂದನ ಕಣ್ಣೀರ ಮಾತು. ಘಟನೆ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ವಿವೇಕಾನಂದ, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈ ಬಗ್ಗೆ ಕುಟುಂಬದವರಿಂದ ಕಿರುಕುಳ ಅನುಭವಿಸುತ್ತಿದ್ದ ಮಾನ್ಯಾ, ನನ್ನ ಬಳಿ ಆಶ್ರಯ ಪಡೆದಿದ್ದಳು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು ಎಂದಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಓಡಿಹೋಗಿ ಮದುವೆಯಾಗಿದ್ದೆವು. ಹಾವೇರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೆವು. ಈ ಮಧ್ಯೆ, ಮಾನ್ಯಾ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾವು ಪೊಲೀಸರ ಮುಂದೆ ಹೇಳಿಕೆ ನೀಡಿ, ಇಷ್ಟಪಟ್ಟು ಮದುವೆಯಾಗಿರುವುದಾಗಿ ತಿಳಿಸಿದ್ದೆವು. ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದರಿಂದ ನಿಯಮಿತವಾಗಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದೆ. ಪೋಷಕರು ನಮ್ಮನ್ನು ಹುಡುಕುತ್ತಿದ್ದಾರೆ ಎಂದು ಮಾನ್ಯಾ ಪೊಲೀಸರಿಗೆ ತಿಳಿಸಿದ್ದರು. ಆಗ ಪೊಲೀಸರು ಮಾನ್ಯಾ ಪೋಷಕರನ್ನು ವಿಚಾರಿಸಿದಾಗ, ‘ನಾವು ನಮ್ಮ ಮಗಳನ್ನು ಸತ್ತಳು ಎಂದು ಕೈಬಿಟ್ಟಿದ್ದೇವೆ’ ಎಂದು ಹೇಳಿಕೆ ನೀಡಿದ್ದರು ಎಂಬುದಾಗಿ ವಿವೇಕಾನಂದ ತಿಳಿಸಿದ್ದಾರೆ.

ವಿವೇಕಾನಂದ ಕುಟುಂಬದವರ ಮೇಲೆ ಶನಿವಾರವೇ ನಡೆದಿತ್ತು ಹಲ್ಲೆ

ಘಟನೆ ನಡೆದ ಹಿಂದಿನ, ಅಂದರೆ ಶನಿವಾರ ಸಂಜೆ 5 ರಿಂದ 5:30 ರ ಸುಮಾರಿಗೆ, ಹುಬ್ಬಳ್ಳಿಯ ಗಿರಿಯಾಳ ರಸ್ತೆಯಲ್ಲಿರುವ ಸೇತುವೆ ಬಳಿ ವಿವೇಕಾನಂದ ಅವರ ತಂದೆ ಮತ್ತು ಮಾವನವರ ಮೇಲೆ ಟ್ರ್ಯಾಕ್ಟರ್‌ನಿಂದ ದಾಳಿ ಮಾಡಲಾಗಿದೆ. ಈ ವಿಷಯ ತಿಳಿದ ವಿವೇಕಾನಂದ ಘಟನಾ ಸ್ಥಳಕ್ಕೆ ಹೋದಾಗ, ಅವರ ಮೇಲೂ ಪ್ರಕಾಶ್ ಗೌಡ, ಅರುಣ್, ಗುಗ್ಗೂರಪ್ಪ, ಮುದುಕಪ್ಪ, ಗುರುಸಿದ್ಧಗೌಡ ಸೇರಿದಂತೆ ಹಲವು ಜನರ ಗುಂಪು ಕಲ್ಲುಗಳಿಂದ ಹಲ್ಲೆ ಮಾಡಿದೆ. ವಿವೇಕಾನಂದ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ನಂತರ ಅದೇ ಗುಂಪು ವಿವೇಕಾನಂದ ಅವರ ಮನೆಗೆ ಹೋಗಿ, ಅವರ ತಾಯಿ, ತಂದೆ ಮತ್ತು ದೊಡ್ಡಪ್ಪನವರಿಗೂ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ವಿವೇಕಾನಂದ ಅವರ ತಂದೆ ಮತ್ತು ಮಾವನವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರ ತಾಯಿಗೂ ರಸ್ತೆಯಲ್ಲೇ ಹೊಡೆದಿದ್ದಾರೆ ಎಂಬ ಆರೋಪ ಇದೆ.

ವಿವೇಕಾನಂದ ಮಾತಿನ ವಿಡಿಯೋ

ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾ ನಮ್ಮೊಂದಿಗೆ ಬಹಳ ಚೆನ್ನಾಗಿ ಇದ್ದಳು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ಯಾವುದೇ ರೀತಿಯಲ್ಲಿ ಕಡಿಮೆ ಮಾಡಿರಲಿಲ್ಲ. ತಮ್ಮ ತಂದೆ-ತಾಯಿ ಕೂಡ ಆಕೆಯನ್ನು ಅಪ್ಪ-ಅಮ್ಮನಂತೆಯೇ ನೋಡಿಕೊಂಡಿದ್ದರು ಎಂದು ವಿವೇಕಾನಂದ ಹೇಳಿದ್ದಾರೆ. ಪತ್ನಿಯನ್ನು ಕೊಂದವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಅಪ್ಪನೇ ಗರ್ಭಿಣಿ ಮಗಳನ್ನು ಕುರಿ ಕಡಿದಂಗೆ ಕಡಿದವ್ನೆ’: ಮರ್ಯಾದಾ ಹತ್ಯೆಯ ಭೀಕರತೆ ಬಿಚ್ಚಿಟ್ಟ ಯುವಕನ ದೊಡ್ಡಮ್ಮ

ಕೊಲೆಯಾದ ಮಾನ್ಯಾ ಶವವನ್ನು ಸದ್ಯ ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಎಸ್​ಪಿ ಗುಂಜನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್ ಆಸ್ಪತ್ರೆ ಮುಂದೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ