ಧಾರವಾಡ: ರಾಜ್ಯದ ಮೂರು ಪ್ರಮುಖ ಮಹಾನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಧಾರವಾಡದಲ್ಲಿ ಇಂದಿನಿಂದ (ಆಗಸ್ಟ್ 16) ನೀತಿ ಸಂಹಿತೆಯನ್ನು ಜಾರಿ ಮಾಡಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಅತ್ತ ವಾರ್ಡ್ ಪುನರ್ ವಿಂಗಡನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ರಿಟ್ ಅರ್ಜಿ ಸಲ್ಲಿಸಿದ್ದು, ಅದರ ತೀರ್ಪು ಸಹ ಇಂದೇ ನಡೆಯಲಿದೆ.
ಸದ್ಯ ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಆ ಪೈಕಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಹ ನಿಗದಿಯಾಗಿದ್ದು, ಅದರನ್ವಯ ಎಲ್ಲ ಸಿದ್ಧತೆಗಳನ್ನು ಜಿಲ್ಲಾ ಚುನಾವಣೆ ಆಯೋಗ ಮಾಡಿಕೊಂಡಿದೆ. ಸೋಮವಾರ ಆಗಸ್ಟ್ 16 ರಿಂದ ಪಾಲಿಕೆ ಚುನಾವಣೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅಧಿಸೂಚನೆ ಹೊರಡಿಸಿದ್ದಾರೆ.
ಒಟ್ಟು 82 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ 837 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು 8 ಲಕ್ಷ 11 ಸಾವಿರದ 537 ಮತದಾರರಿದ್ದಾರೆ. ಇಂದಿನಿಂದಲೇ ಅಧಿಸೂಚನೆ ಆರಂಭಗೊಂಡಿರುವುದರಿಂದ ನಾಮಪತ್ರ ಸಲ್ಲಿಕೆಯೂ ಸಹ ಇಂದೇ ಆರಂಭಗೊಳ್ಳುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಸೆಪ್ಟಂಬರ್ 3 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡನೆ ಹಾಗೂ ಸರ್ಕಾರ ಹೊರಡಿಸಿದ ಮೀಸಲಾತಿ ಪ್ರಶ್ನಿಸಿ ಧಾರವಾಡ ಹೈಕೋರ್ಟ್ಗೆ ಸಲ್ಲಿಸಿರುವ ಮೂರು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆಯೂ ಬಾಕಿ ಇದೆ. ವಿಚಿತ್ರ ಎಂದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಆರಂಭಗೊಂಡಿದ್ದು, ಇಂದೇ ಈ ಅರ್ಜಿಗಳ ವಿಚಾರಣೆಯೂ ನಡೆಯಲಿದೆ. ಹೈಕೋರ್ಟ್ ತೀರ್ಪು ಏನೇ ಇದ್ದರೂ, ಸದ್ಯ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಾವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಐದು ವಾರ್ಡ್ಗೆ ಒಬ್ಬರಂತೆ ನಾಮಪತ್ರ ಸ್ವೀಕರಿಸಲು ತಲಾ 16 ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇನ್ನು ವಿವಿಎಂಗಳನ್ನು ಸಹ ಸಜ್ಜು ಮಾಡಿಕೊಂಡಿದ್ದು, ಚುನಾವಣಾ ನೀತಿ ಸಂಹಿತೆಯ ಮೇಲೆ ನಿಗಾ ಇಡಲು ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣರ ನೇತೃತ್ವದಲ್ಲಿ 8 ತಂಡಗಳನ್ನು ನಿಯೋಜಿಸಲಾಗಿದೆ. ಈ ಚುನಾವಣೆ ನೀತಿ ಸಂಹಿತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಾತ್ರವೇ ಸೀಮಿತವಾಗಿದ್ದು, ಗ್ರಾಮೀಣ ಭಾಗಕ್ಕೆ ಯಾವುದೇ ಅನ್ವಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಒಟ್ಟಾರೆಯಾಗಿ ಪಾಲಿಕೆಗೆ ಸಂಬಂಧಿಸಿ ರಿಟ್ ಅರ್ಜಿ ಹೈಕೋರ್ಟ್ನಲ್ಲಿರುವ ಕಾರಣಕ್ಕೆ ಅದರ ತೀರ್ಪಿಗಾಗಿ ರಾಜಕೀಯ ಪಕ್ಷಗಳು ಕಾಯುತ್ತ ಕುಳಿತಿರುವ ಹಿನ್ನೆಲೆ ಚುನಾವಣೆಯ ದಿನಾಂಕ ನಿಗದಿಯಾಗಿದ್ದರೂ ಸಹ ರಾಜಕೀಯ ಚಟುವಟಿಕೆಗಳು ಇನ್ನೂ ಗರಿಗೆದರಿಲ್ಲ. ಆದರೆ ಜಿಲ್ಲಾ ಚುನಾವಣಾ ಆಯೋಗ ಮಾತ್ರ ತೀರ್ಪು ಏನೇ ಬರಲಿ ನಮ್ಮ ತಯಾರಿಯಲ್ಲಿ ನಾವು ಇರುತ್ತೇವೆ ಎಂಬ ಉತ್ಸಾಹದಿಂದಲೇ ಎಲ್ಲ ರೀತಿಯಿಂದ ಸಜ್ಜುಗೊಳ್ಳುತ್ತಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಗೆಲ್ಲುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್: ಸತೀಶ್ ಜಾರಕಿಹೊಳಿ
ದಾವಣಗೆರೆ: ಜಪಾನ್ ಮಿಯಾ ವಾಕಿ ಮಾದರಿಯಲ್ಲಿ ಹಸಿರು ಬೆಳೆಸಲು ಮುಂದಾದ ಮಹಾನಗರ ಪಾಲಿಕೆ
Published On - 11:39 am, Mon, 16 August 21