ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ!

| Updated By: preethi shettigar

Updated on: Oct 20, 2021 | 8:00 AM

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು 2021-22ನೇ ಸಾಲಿನ ಅರ್ಧ ವಾರ್ಷಿಕ ಅವಧಿಯಲ್ಲಿ (ಸೆಪ್ಟೆಂಬರ್ 30 ರವರೆಗೆ) ಆಸ್ತಿ ತೆರಿಗೆ ಮೂಲಕ 49.37 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿ, ದಾಖಲೆ ಮಾಡಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ!
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ
Follow us on

ಧಾರವಾಡ: ರಾಜ್ಯದಲ್ಲಿಯೇ ಅತಿ ದೊಡ್ಡ ಪಾಲಿಕೆ ಎನ್ನುವ ಖ್ಯಾತಿ ಪಡೆದಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. ಈ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ಸದಸ್ಯರು ಬರುತ್ತಾರೆ. ಈ ಅವಳಿ ನಗರಕ್ಕೆ ಬರುವ ಅನುದಾನ ಕಡಿಮೆಯೇ. ಹೀಗಾಗಿ ಪಾಲಿಕೆ ಜನರಿಂದ ಬರುವ ವಿವಿಧ ಬಗೆಯ ತೆರಿಗೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಕಳೆದ ವರ್ಷದಿಂದ ಕಾಡುತ್ತಿರುವ ಕೊರೊನಾದಿಂದಾಗಿ ಪಾಲಿಕೆಗೆ ಬರುತ್ತಿರುವ ತೆರಿಗೆ ತೀರಾನೇ ಕಡಿಮೆಯಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯು 2021-22ನೇ ಸಾಲಿನ ಅರ್ಧ ವಾರ್ಷಿಕ ಅವಧಿಯಲ್ಲಿ (ಸೆಪ್ಟೆಂಬರ್ 30 ರವರೆಗೆ) ಆಸ್ತಿ ತೆರಿಗೆ ಮೂಲಕ 49.37 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿ, ದಾಖಲೆ ಮಾಡಿದೆ.

ಇದು 2020-21ಕ್ಕೆ ಹೋಲಿಸಿದರೆ 6.24 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಕಳೆದ ಸಾಲಿನ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಪಾಲಿಕೆಯು ಆಸ್ತಿ ತೆರಿಗೆಯಿಂದ 43.13 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈ ಬಾರಿ ಹೆಚ್ಚಳವಾಗಲು ಆಸ್ತಿ ತೆರಿಗೆ ದರ ಆಕರಣಿಯಲ್ಲಿ ಪರಿಷ್ಕರಣೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರ ಶೇ. 5 ರಷ್ಟು ರಿಯಾಯಿತಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದ್ದು, ಮುಖ್ಯ ಕಾರಣವಾಗಿದೆ.

ಕೊವಿಡ್‌ನಿಂದ ತೊಂದರೆಯಾದರೂ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ
ಕೊವಿಡ್ ಎರಡನೇ ಅಲೆಯಿಂದ ವ್ಯಾಪಾರ-ವಹಿವಾಟಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಹಿನ್ನಡೆಯಾದರೂ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಮುನ್ನಡೆ ಕಂಡಿರುವುದು ಗಮನಾರ್ಹ ಸಂಗತಿಯಾಗಿದೆ. ಮಹಾನಗರ ಹು – ಧಾ 2021-22ನೇ ಪಾಲಿಕೆಯು ತೆರಿಗೆ ಸಾಲಿನಲ್ಲಿ, ಆಸ್ತಿ ತೆರಿಗೆಯೊಂದರಿಂದಲೇ ಹಿಂಬಾಕಿ ಬಿಟ್ಟು 97 ಕೋಟಿ ರೂಪಾರಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ (ಗುರಿಯಲ್ಲಿ ಆಸ್ತಿ ತೆರಿಗೆ ಹಿಂಬಾಕಿ ಬಿಟ್ಟು). ಈಗಾಗಲೇ ಅದರಲ್ಲಿ ಸುಮಾರು 50 ಕೋಟಿ ರೂಪಾಯಿಯಷ್ಟು ಬಂದಿದೆ. 2020-21ರಲ್ಲಿ 79 ಕೋಟಿ ರೂಪಾಯಿ ಗುರಿ ಇತ್ತು. ಅದರಲ್ಲಿ 71.75 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು.

ದಂಡದ ಮೊತ್ತವೇ 4.53 ಕೋಟಿ ರೂಪಾಯಿ!
ಆಸ್ತಿ ತೆರಿಗೆ ಪಾವತಿಯ ಜೊತೆಗೆ ದಂಡದ ಮೊತ್ತವೂ ಈ ಅವಧಿಯಲ್ಲಿ ಗಮನ ಸೆಳೆದಿದೆ. 2021-22ನೇ ಸಾಲಿನ ಮೊದಲ 6 ತಿಂಗಳ ಅವಧಿಯಲ್ಲಿ ಆಸ್ತಿ ಹೊಂದಿದವರು ದಂಡದ ರೂಪದಲ್ಲಿ 4.53 ಕೋಟಿ ರೂಪಾಯಿ ಪಾವತಿಸಿದ್ದಾರೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 3.66 ಕೋಟಿ ರೂಪಾಯಿ ಪಾವತಿಯಾಗಿತ್ತು. 2020-21ನೇ ಸಾಲಿನಲ್ಲಿ ಪಾಲಿಕೆ ಅಧಿಕಾರಿಗಳು ಒಟ್ಟಾರೆ 12.56 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದರು. ರಿಯಾಯಿತಿ ಅವಧಿ ಮೀರಿ ಪಾವತಿಸುವ ಆಸ್ತಿ ಧಾರಕರಿಗೆ ಪ್ರತಿ ತಿಂಗಳು ಶೇ. 2 ರಷ್ಟು ದಂಡ ವಿಧಿಸಲಾಗುತ್ತದೆ. 2-3 ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡರೆ ದಂಡದ ಮೊತ್ತವೇ ಮೂಲ ಆಸ್ತಿ ತೆರಿಗೆಯ ಮೌಲ್ಯಕ್ಕಿಂತ ದುಪ್ಪಟ್ಟಾಗಿರುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಜಾಗ ಸೇರಿ 1.95 ಲಕ್ಷ ಆಸ್ತಿ
ರಾಜ್ಯದ ಅತಿ ದೊಡ್ಡ ಮಹಾನಗರ ಪಾಲಿಕೆ ಅನ್ನುವ ಹಿರಿಮೆ ಹೊಂದಿರುವ ಅವಳಿ ನಗರದ ಪಾಲಿಕೆ, ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಾಸದ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಮತ್ತು ಖಾಲಿ ಜಾಗ ಸೇರಿ ಒಟ್ಟು 1.95 ಲಕ್ಷ ಆಸ್ತಿಗಳಿವೆ.

ಇನ್ನು ಈ ಬಗ್ಗೆ ಟಿವಿ9 ಡಿಜಿಟಲ್‌ ಜೊತೆಗೆ ಮಾತನಾಡಿದ ಪಾಲಿಕೆ ಆಯುಕ್ತರಾದ ಡಾ. ಸುರೇಶ ಇಟ್ನಾಳ, ಆಸ್ತಿ ತೆರಿಗೆ ಪಾವತಿ ಮೇಲೆ ರಾಜ್ಯ ಸರ್ಕಾರ ಆಗಸ್ಟ್ 31 ರವರೆಗೆ ಶೇ. 5 ರಷ್ಟು ರಿಯಾಯಿತಿ ನೀಡಿದ್ದರಿಂದ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. ಈ ಕಾರಣಕ್ಕೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ಸಾಲಿಗಿಂತ ಹೆಚ್ಚಳವಾಗಿದೆ. 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ಒಟ್ಟಾರೆ 97 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:
Income Tax: ಆದಾಯ ತೆರಿಗೆ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಲ್ಲಿವೆ ಏಳು ವಿಧಾನಗಳು

ಕೊರೊನಾ ಎರಡನೇ ಅಲೆಯಿಂದಾಗಿ ಆರ್ಥಿಕ ಸಂಕಷ್ಟ; ಹು-ಧಾ ಮಹಾನಗರ ಪಾಲಿಕೆಯ ಆದಾಯದಲ್ಲಿ ಕುಸಿತ

 

Published On - 7:56 am, Wed, 20 October 21