Income Tax: ಆದಾಯ ತೆರಿಗೆ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಲ್ಲಿವೆ ಏಳು ವಿಧಾನಗಳು

TV9 Digital Desk

| Edited By: Srinivas Mata

Updated on: Oct 18, 2021 | 11:31 AM

ವಯಕ್ತಿಕವಾಗಿ ತೆರಿಗೆ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇರುವ 7 ದಾರಿಗಳು ಯಾವುವು ಎಂಬುದರ ವಿವರ ಇಲ್ಲಿದೆ. ಕೆಲವು ಹೂಡಿಕೆ ಹಾಗೂ ವೆಚ್ಚಗಳನ್ನು ಮಾಡಿದಲ್ಲಿ ತೆರಿಗೆ ಜವಾಬ್ದಾರಿ ಕಡಿಮೆ ಆಗುತ್ತದೆ.

Income Tax: ಆದಾಯ ತೆರಿಗೆ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಲ್ಲಿವೆ ಏಳು ವಿಧಾನಗಳು
ಸಾಂದರ್ಭಿಕ ಚಿತ್ರ

ನಿಮಗೆ ತೆರಿಗೆ ವ್ಯಾಪ್ತಿಗೆ ಬರುವ ಆದಾಯ ಇದ್ದರೆ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಯಾವುದೇ ಮಾರ್ಗವಿಲ್ಲ. ಆದರೆ ಹಣಕಾಸಿನ ವರ್ಷದ ಆರಂಭದಿಂದಲೇ ಸರಿಯಾದ ಯೋಜನೆ ಮಾಡಿದರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಭಾರತದಲ್ಲಿ ಆದಾಯ ತೆರಿಗೆ ನಿಯಮಗಳು ಕೆಲವು ವೆಚ್ಚಗಳು ಮತ್ತು ಹೂಡಿಕೆಗಳನ್ನು ತೆರಿಗೆಯಿಂದ ವಿನಾಯಿತಿ ನೀಡಿವೆ. ಕೆಲವು ಹೂಡಿಕೆಗಳನ್ನು ಅಥವಾ ಖರ್ಚುಗಳನ್ನು ಮಾಡಿದರೆ ತೆರಿಗೆ ವಿನಾಯಿತಿ, ಕಡಿತಕ್ಕೆ ಅರ್ಹರಾಗಿರುತ್ತಾರೆ. ಆದ್ದರಿಂದ ಅಂತಹ ಹೂಡಿಕೆ ಮತ್ತು ವೆಚ್ಚಗಳನ್ನು ಮಾಡುವ ಮೂಲಕ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಬಹುದು.

ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡುವ 7 ವಿಧಾನಗಳು ಇಲ್ಲಿವೆ: 1. ಜೀವವಿಮೆ ಪ್ರೀಮಿಯಂ, ಪಿಂಚಣಿ ಯೋಜನೆಗಳು, ಭವಿಷ್ಯ ನಿಧಿಗಾಗಿ ಪಾವತಿಗಳು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ ಜೀವ ವಿಮಾ ಕಂತು ಪ್ರೀಮಿಯಂ, ಭವಿಷ್ಯ ನಿಧಿ, ಪಿಪಿಎಫ್, ಇಎಲ್‌ಎಸ್‌ಎಸ್ ಯೋಜನೆಗಳಲ್ಲಿ ಹೂಡಿಕೆ, ಇಬ್ಬರು ಮಕ್ಕಳಿಗೆ ಪಾವತಿಸುವ ಬೋಧನಾ ಶುಲ್ಕ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಗೃಹ ಸಾಲದ ಅಸಲು ಮರುಪಾವತಿಯ 1.50 ಲಕ್ಷ ರೂಪಾಯಿವರೆಗೆ ಕಡಿತ ಮುಂತಾದವಕ್ಕೆ ಪಡೆಯಲು ಅವಕಾಶ ನೀಡುತ್ತದೆ. ವರ್ಷಾಶನ ಯೋಜನೆಗಳು ಮತ್ತು ವಿಮಾ ಕಂಪೆನಿಗಳ ಪಿಂಚಣಿ ಯೋಜನೆಗಳಿಗಾಗಿ ಪಾವತಿಸಿದ ಪ್ರೀಮಿಯಂ ಅನ್ನು ಸೆಕ್ಷನ್ 80CCC ಅಡಿಯಲ್ಲಿ ಕಡಿತಕ್ಕಾಗಿ ಕ್ಲೇಮ್ ಮಾಡಬಹುದು. ಅದೇ ರೀತಿ, ಸೆಕ್ಷನ್ 80 CCD (1) ಅಡಿಯಲ್ಲಿ ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಲ್ಲಿ ಮಾಡಿದ ಹೂಡಿಕೆಗಳ ಮೇಲೆ ಕಡಿತವನ್ನು ಪಡೆಯಬಹುದು. ಆದರೆ ಮೇಲಿನ ಎಲ್ಲ ಮೂರು ವಿಭಾಗಗಳ ಅಡಿಯಲ್ಲಿ ಒಟ್ಟು ಕಡಿತವು ರೂ.1.50 ಲಕ್ಷವನ್ನು ಮೀರುವಂತಿಲ್ಲ.

2. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ (NPS) ಸೆಕ್ಷನ್ 80 CCD (1B) ಅಡಿಯಲ್ಲಿ ಉದ್ಯೋಗಿಯು NPSನಲ್ಲಿ ಮಾಡಿದ ಹೂಡಿಕೆಗಳ ಮೇಲೆ ರೂ. 50,000 ವರೆಗೆ ಹೆಚ್ಚುವರಿ ಕಡಿತವನ್ನು ಪಡೆಯಬಹುದು. ಇದು ಸೆಕ್ಷನ್ 80CCD (1) ಅಡಿಯಲ್ಲಿ ಮಾಡಿದ ಹೂಡಿಕೆಯ ಮೇಲ್ಪಟ್ಟು ಹೆಚ್ಚಾಗಿದೆ. ಸೆಕ್ಷನ್ 80 CCD2 ಅಡಿಯಲ್ಲಿ ಉದ್ಯೋಗದಾತರು NPSಗೆ ನೀಡಿದ ಕೊಡುಗೆಗೆ ಕಡಿತವನ್ನು ಪಡೆಯಬಹುದು. ಆದರೆ ತೆರಿಗೆ ಲಾಭದ ವ್ಯಾಪ್ತಿಯು ಉದ್ಯೋಗದಾತರ ವರ್ಗವನ್ನು ಅವಲಂಬಿಸಿರುತ್ತದೆ.

-ಒಂದು ವೇಳೆ ಉದ್ಯೋಗದಾತ ಪಿಎಸ್​ಯು ರಾಜ್ಯ ಸರ್ಕಾರ ಅಥವಾ ಯಾವುದೇ ಇತರ ಖಾಸಗಿ ವಲಯದ ಕಂಪೆನಿಯಾಗಿದ್ದರೆ ಕಡಿತದ ಮಿತಿ ಮೂಲ ಸಂಬಳ ಮತ್ತು ಡಿಯರ್​ನೆಸ್ ಭತ್ಯೆ (ಡಿಎ)ಯ ಶೇ 10ರಷ್ಟಿರುತ್ತದೆ.

– ಒಂದು ವೇಳೆ ಉದ್ಯೋಗದಾತ ಕೇಂದ್ರ ಸರ್ಕಾರವಾಗಿದ್ದರೆ ಕಡಿತದ ಮಿತಿ ಮೂಲ ವೇತನ ಮತ್ತು ಡಿಎ ಸೇರಿ ಶೇ 14 ಆಗಿದೆ.

3. ಮನೆ ಆಸ್ತಿಯಿಂದ ಆದಾಯ ಸೆಕ್ಷನ್ 24 (ಬಿ) ಅಡಿಯಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಪಾವತಿ, ಸ್ವಂತಕ್ಕಾಗಿ ಸ್ವಾಧೀನಪಡಿಸಿಕೊಂಡ ಆಸ್ತಿಯ ನವೀಕರಣಕ್ಕೆ ಪಡೆದ ಸಾಲದ ಮೇಲೆ ರೂ 2 ಲಕ್ಷದವರೆಗೆ ತೆರಿಗೆ ಅನುಕೂಲ ಪಡೆಯಬಹುದು. ಆದರೆ ಗೃಹ ಸಾಲದ ಮೂಲ ಮರುಪಾವತಿಗೆ ಪಾವತಿಸಿದ ಮೊತ್ತವನ್ನು ಸೆಕ್ಷನ್ 80ಸಿ ಅಡಿಯಲ್ಲಿ ಒಟ್ಟಾರೆ 1.50 ಲಕ್ಷ ರೂಪಾಯಿ ಮಿತಿ ಅಡಿಯಲ್ಲಿ ಕ್ಲೇಮ್ ಮಾಡಬಹುದು. ಆದರೆ ಹೊಸ ತೆರಿಗೆ ಪದ್ಧತಿಯನ್ನು ಆರಿಸಿದ್ದರೆ ಈ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

4. ಆರೋಗ್ಯ ವಿಮಾ ಪ್ರೀಮಿಯಂಗೆ ಪಾವತಿ ಸ್ವಯಂ ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಆರೋಗ್ಯ ತಪಾಸಣೆಗಾಗಿ ಆರೋಗ್ಯ ವಿಮೆಯನ್ನು ಖರೀದಿಸಲು ಪಾವತಿಸಿದ ಪ್ರೀಮಿಯಂ ಮೇಲೆ ಸೆಕ್ಷನ್ 80ಡಿ ಅಡಿಯಲ್ಲಿ ಕಡಿತವನ್ನು ಪಡೆಯಬಹುದು. ಆದರೆ ಅದಕ್ಕೂ ವಿವಿಧ ಮಿತಿಗಳಿವೆ:

ಸ್ವಯಂ/ಸಂಗಾತಿ ಅಥವಾ ಅವಲಂಬಿತ ಮಕ್ಕಳು ಅಥವಾ ಪೋಷಕರಿಗಾಗಿ: ಸೆಕ್ಷನ್ 80ಡಿ ಅಡಿಯಲ್ಲಿ 25,000 ರೂಪಾಯಿ ಕಡಿತವನ್ನು ಅನುಮತಿಸಲಾಗಿದೆ. ಕ್ಲೇಮೆಂಟ್ ಅಥವಾ ಯಾವುದೇ ಕುಟುಂಬದ ಸದಸ್ಯರು ಹಿರಿಯ ನಾಗರಿಕರಾಗಿದ್ದರೆ ಈ ಕಡಿತವು 50,000 ರೂಪಾಯಿ ತನಕ ಇದೆ. ಪ್ರಿವೆಂಟಿವ್ ಆರೋಗ್ಯ ತಪಾಸಣೆಗಾಗಿ ಸೆಕ್ಷನ್ 80ಡಿ ಅಡಿಯಲ್ಲಿ ಕೇವಲ ರೂ. 5000 ಕಡಿತವನ್ನು ಅನುಮತಿಸಲಾಗಿದೆ. ಸೆಕ್ಷನ್ 80ಡಿ ಅಡಿಯಲ್ಲಿ ಹಿರಿಯ ನಾಗರಿಕರಿಗಾಗಿ ಮಾಡಿದ ವೈದ್ಯಕೀಯ ವೆಚ್ಚದ ಮೇಲೆ ರೂ. 50,000 ಕಡಿತವನ್ನು ಪಡೆಯಬಹುದು.

5. ದಿವ್ಯಾಂಗ ಅವಲಂಬಿತರ ನಿರ್ವಹಣೆ/ಚಿಕಿತ್ಸೆಗಾಗಿ ವೆಚ್ಚಗಳು ದಿವ್ಯಾಂಗ ಅವಲಂಬಿತರ ನಿರ್ವಹಣೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳ ಮೇಲೆ ರೂ. 75,000ವರೆಗಿನ ಕಡಿತವನ್ನು ಪಡೆಯಬಹುದು. ಆದರೆ ತೀವ್ರ ಅಂಗವೈಕಲ್ಯದ ಸಂದರ್ಭದಲ್ಲಿ (ಶೇ 80 ಅಥವಾ ಹೆಚ್ಚು) ಕಡಿತವು ರೂ. 1.25 ಲಕ್ಷದವರೆಗೆ ಪಡೆಯಬಹುದು.

6. ವೈದ್ಯಕೀಯ ಚಿಕಿತ್ಸೆಗಾಗಿ ಪಾವತಿ ಸೆಕ್ಷನ್ 80 ಡಿಡಿ(1 ಬಿ) ಅಡಿಯಲ್ಲಿ ನಿರ್ದಿಷ್ಟ ರೋಗಗಳಿಗೆ ಸ್ವಯಂ ಮತ್ತು ಅವಲಂಬಿತ ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳಿಗಾಗಿ ರೂ.40,000 ವರೆಗಿನ ಕಡಿತವನ್ನು ಪಡೆಯಬಹುದು. ಕುಟುಂಬದ ಯಾವುದೇ ಸದಸ್ಯರು ಹಿರಿಯ ನಾಗರಿಕರಾಗಿದ್ದರೆ ಈ ಕಡಿತ ಮಿತಿಯು 1 ಲಕ್ಷ ರೂಪಾಯಿಗೆ ಹೆಚ್ಚಾಗುತ್ತದೆ.

7. ಶಿಕ್ಷಣ ಸಾಲದ ಮೇಲಿನ ಬಡ್ಡಿ ಸೆಕ್ಷನ್ 80ಇ ಅಡಿಯಲ್ಲಿ ಒಬ್ಬ ವ್ಯಕ್ತಿಯು ಉನ್ನತ ಶಿಕ್ಷಣಕ್ಕಾಗಿ ಪಡೆದ ಶಿಕ್ಷಣ ಸಾಲದ ಮೇಲಿನ ಬಡ್ಡಿ ಪಾವತಿಯ ಮೇಲೆ ಕಡಿತವನ್ನು ಪಡೆಯಬಹುದು. ಸ್ವಂತಕ್ಕೆ, ಅವಲಂಬಿತ ಮಕ್ಕಳು, ಸಂಗಾತಿ ಸಲುವಾಗಿ ಉನ್ನತ ಶಿಕ್ಷಣಕ್ಕೆ ಪಡೆದ ಸಾಲದ ಮೇಲಿನ ಬಡ್ಡಿಗೆ ವಿನಾಯಿತಿ ಇದೆ. ಇಲ್ಲಿ ಹೇಳಬೇಕಾದ ಸಂಗತಿಯೆಂದರೆ, ಈ ಕಡಿತದಲ್ಲಿ ಯಾವುದೇ ಮೇಲ್​ಸ್ತರದ ಮಿತಿಯಿಲ್ಲ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada