ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
2019ರಲ್ಲಿ ಪ್ರಧಾನಿ ಮೋದಿ ಐಐಐಟಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ. ಜ್ಞಾನ ವಿಕಾಸ ಅಂತಾ ಹೆಸರಿಡಲಾಗಿದೆ, ಜ್ಞಾನದಲ್ಲಿ ವಿಕಾಸ ಅಡಗಿದೆ.
ಧಾರವಾಡ: ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ. ಇದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಧಾರವಾಡದಲ್ಲಿ ಐಐಐಟಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 2019ರಲ್ಲಿ ಪ್ರಧಾನಿ ಮೋದಿ ಐಐಐಟಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ. ಜ್ಞಾನ ವಿಕಾಸ ಅಂತಾ ಹೆಸರಿಡಲಾಗಿದೆ, ಜ್ಞಾನದಲ್ಲಿ ವಿಕಾಸ ಅಡಗಿದೆ. ಭಾರತವನ್ನು ವಿಶ್ವಗುರು ಮಾಡಬೇಕು, ಜ್ಞಾನದ ವಿಕಾಸ ಆಗಬೇಕಿದೆ. ಇದಕ್ಕೆ ಪೂರಕವಾದ ಘೋಷವಾಕ್ಯ ಧಾರವಾಡ ಐಐಐಟಿ ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ದೇಶಕ್ಕಾಗಿ ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ಹೇಳಿದರು.
ಧಾರವಾಡ ಜಿಲ್ಲೆ ರೈತರ ಅದೇ ಜಮೀನಿನಲ್ಲಿ ಜ್ಞಾನ ಬೆಳೆಯಲಾಗುತ್ತಿದೆ: ಸಿಎಂ ಬೊಮ್ಮಾಯಿ
ಕಾರ್ಯಕ್ರಮವನ್ನುದ್ದೇಶಿಸಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಧಾರವಾಡದ ಐಐಐಟಿ ದೇಶದಲ್ಲೇ ನಂಬರ್ ಒನ್ ಆಗಬೇಕು. ಎಲ್ಲರೂ ಶ್ರಮವಹಿಸಿ ಓದಬೇಕೆಂದು ವಿದ್ಯಾರ್ಥಿಗಳಿಗೆ ಸಿಎಂ ಕರೆ ನೀಡಿದರು. ಈ ಜಮೀನಿನಲ್ಲಿ ಧಾರವಾಡ ಜಿಲ್ಲೆ ರೈತರು ಬೆಳೆ ಬೆಳೆಯುತ್ತಿದ್ದರು. ಆದರೆ ಇವತ್ತು ಅದೇ ಜಮೀನಿನಲ್ಲಿ ಜ್ಞಾನ ಬೆಳೆಯಲಾಗುತ್ತಿದೆ. ಭೂಮಿ ನೀಡಿದ ರೈತರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು. ರಾಜ್ಯದಲ್ಲಿ ಮೊದಲ ಇಂಜಿನಿಯರಿಂಗ್ ಪದವಿ ಪಡೆದವರು ಸುಧಾಮೂರ್ತಿ. 50 ವರ್ಷಗಳ ಹಿಂದೆಯೇ ಅಂಥ ಸಾಧನೆ ಮಾಡಿದವರು. ಅವರ ಬಗ್ಗೆ ಹೆಮ್ಮೆಪಡಬೇಕು. ಭಾಷಣದ ಮಧ್ಯೆ ಸುಧಾಮೂರ್ತಿ ಸಾಧನೆ ಬಗ್ಗೆ ಸಿಎಂ ಪ್ರಸ್ತಾಪ ಮಾಡಿದ್ದು, ಈ ವೇಳೆ ಸಭಿಕರಿಂದ ಚಪ್ಪಾಳೆ ಕೇಳಿ ಬರಲಿಲ್ಲ. ಆಗ ಚಪ್ಪಾಳೆ ಹೊಡಿರಿ ಅಂತಾ ಸಿಎಂ ಕೇಳಿಕೊಂಡರು. ಹೇಳಿ ಚಪ್ಪಾಳೆ ತಗೋಬೇಕಾದ ಪರಿಸ್ಥಿತಿ ಆಗಿದೆ ನಮ್ಮದು. ಅದೇ ಸಿನಿಮಾ ಹಿರೋ ಬಂದ್ರೆ ಎಂದರು.
ಇಂಥ ಆಧುನಿಕ ಸಂಸ್ಥೆಯನ್ನು ಕನ್ನಡ ನಾಡಿಗೆ ಸಮರ್ಪಣೆ ಮಾಡಿದ್ದಾರೆ. ಅವರಿಗೆ ಅಂತರಾಳದ ಕೃತಜ್ಞತೆಗಳು. ಬುಡಕಟ್ಟು ಜನಾಂಗದಿಂದ ಬಂದವರು. ಸರಳಜೀವಿಗಳು. ಆದರ್ಶವೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯಾದಾಗ ದೇಗುಲ ಸ್ವಚ್ಛ ಮಾಡಿದವರು. ಇವೆಲ್ಲ ನಮಗೆ ಆದರ್ಶ ಹಾಗೂ ಪ್ರೇರಣೆ ನೀಡುವಂಥವುಗಳು. ಅಂಥ ರಾಷ್ಟ್ರಪತಿ ಇಂಥ ತಾಂತ್ರಿಕ ಸಂಸ್ಥೆ ಉದ್ಘಾಟನೆ ಮಾಡಿದ್ದಾರೆ. ಯಾವ ವಿಜ್ಞಾನ ಮಾನವನಿಗೆ ಅನುಕೂಲವಿದೆಯೋ ಅದೇ ಶ್ರೇಷ್ಠ ವಿಜ್ಞಾನ. ಮಾನವೀಯತೆ ಇಲ್ಲದಿದ್ದರೆ ಯಾವುದಕ್ಕೂ ಬೆಲೆ ಇಲ್ಲ. ಮಾನವೀಯತೆಯ ಸಾಕಾರ ಮೂರ್ತಿ ಆಗಿರೋ ರಾಷ್ಟ್ರಪತಿ ಈ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ಇದು ತುಂಬಾನೇ ಸಂತಸದ ವಿಚಾರ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೋದಿ ಕೈಯಿಂದ ನಾವು ಐಐಟಿ ಉದ್ಘಾಟನೆ ಮಾಡಿಸುತ್ತೇವೆ: ಸಚಿವ ಪ್ರಹ್ಲಾದ್ ಜೋಶಿ
ಇನ್ನೂ ಕಾರ್ಯಕ್ರಮದಲ್ಲಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, 2015ರಲ್ಲಿ ಅನುಮತಿ ಸಿಕ್ಕಿತ್ತು, 2016ರಲ್ಲಿ ಕೋರ್ಸ್ ಆರಂಭಿಸಿದ್ದೆವು. ಸುಧಾಮೂರ್ತಿ ಅಧ್ಯಕ್ಷತೆಯಲ್ಲಿ ಕೋರ್ಸ್ ಆರಂಭವಾಯಿತು. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರು. ಐಐಐಟಿ ಕಟ್ಟಡದ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದರು. 5 ವರ್ಷದಲ್ಲಿ ಕಾಮಗಾರಿ ಮುಗಿಯಬೇಕು ಅನ್ನೋದು ಗುರಿ ಆಗಿತ್ತು. ಮೂರೇ ವರ್ಷದಲ್ಲಿ ರಾಷ್ಟ್ರಪತಿ ಐಐಐಟಿ ಉದ್ಘಾಟನೆ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಮೋದಿ ಕೈಯಿಂದ ನಾವು ಐಐಟಿ ಉದ್ಘಾಟನೆ ಮಾಡಿಸುತ್ತೇವೆ. ಯುವಕರಿಗಾಗಿ ಮೋದಿ ಇಂತಹ ಹೆಚ್ಚೆಚ್ಚು ಸಂಸ್ಥೆ ಮಾಡುತ್ತಿದ್ದಾರೆ. ಮುಂಚೆ ದೇಶದಲ್ಲಿ ಕೇವಲ 340 ಕಿ.ಮೀ. ಮಾತ್ರ ಒಎಫ್‌ಸಿ ಇತ್ತು.
ಬಿಜೆಪಿ ಬಂದ ಮೇಲೆ 32 ಲಕ್ಷ ಕಿ.ಮೀ. ಕೇಬಲ್ ಹಾಕಲಾಗಿದೆ. ತಾಂತ್ರಿಕತೆ ಜನರ ಬದುಕಲ್ಲಿ ಸಾಕಷ್ಟು ಬದಲಾವಣೆ ತರುತ್ತವೆ. ನಾವು ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ 2.5 ಲಕ್ಷ ಕೋಟಿ ರೂ. ಉಳಿತಾಯವಾಗುತ್ತಿದೆ. ನಾವು ಕೊವಿಡ್ ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದ್ದೇವೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಕಾನಮಿ ನಮ್ಮದು ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:19 pm, Mon, 26 September 22