
ಹುಬ್ಬಳ್ಳಿ, ನವೆಂಬರ್ 13: ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಜೈನ ಮುನಿ ಗುಣದರನಂದಿ ಮಹರಾಜ್ ಆಗ್ರಹಿಸಿದ್ದರು. ಇಲ್ಲದಿದ್ದರೆ ಅನ್ನ, ನೀರು ಬಿಟ್ಟು ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಜೈನ ಮುನಿ ಗುಣದರನಂದಿ ಮಹರಾಜ್ ಸರ್ಕಾರಕ್ಕೆ ಈ ಹಿಂದೆ ಹತ್ತು ದಿನದ ಗಡುವು ನೀಡಿದ್ದರು. ಆದರೆ ಸರ್ಕಾರದಿಂದ ಲಿಖಿತ ಸ್ಪಂದನೆ ಸಿಗದೇ ಇರುವುದರಿಂದ ಇದೀಗ ಮಾತಿನಂತೆ ದೇಹತ್ಯಾಗದ ಹೋರಾಟಕ್ಕೆ ಮುಂದಾಗಿದ್ದಾರೆ. ನವೆಂಬರ್ 19ರಿಂದ ಹೋರಾಟ ಆರಂಭಿಸೋದಾಗಿ ಜೈನಮುನಿ ಹೇಳಿದ್ದಾರೆ. ಸಮಾಜದ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಜೈನ ಸಮಾಜಕ್ಕೆ ಪ್ರತ್ಯೇಕ ನಿಗಮ ಘೋಷಿಸಬೇಕು. ಜೈನಮುನಿಗಳು ವಿಹಾರದ ಸಮಯದಲ್ಲಿ ಅವರಿಗೆ ರಾತ್ರಿ ಸಮಯದಲ್ಲಿ ವಿಶ್ರಾಂತಿ ಪಡೆಯಲು ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಅವಕಾಶ ನೀಡಬೇಕು. ಸಮಾಜದ ಇನ್ನಿತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯ ವರೂರಿನ ನವಗ್ರಹ ಕ್ಷೇತ್ರದ ಪೀಠಾಧಿಪತಿ ಗುಣದರನಂದಿ ಮಹರಾಜ್ ಅನೇಕ ವರ್ಷಗಳಿಂದ ಸರ್ಕಾರಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಸರ್ಕಾರದಿಂದ ಸ್ಪಂದನೆ ಸಿಗದೆ ಇದ್ದಿದ್ದಕ್ಕೆ ದೇಹತ್ಯಾಗದ ಹೋರಾಟ ಆರಂಭಿಸಲು ಜೈನಮುನಿ ನಿರ್ಧರಿಸಿದ್ದರು. ಅದೇ ರೀತಿ ಕಳೆದ ಅಕ್ಟೋಬರ್ 27 ರಂದು ವರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಹತ್ತು ದಿನದ ಡೆಡ್ ಲೈನ್ ನೀಡಿದ್ದರು.
ಇದನ್ನೂ ಓದಿ: ಸೂಟ್‌ಕೇಸ್ ಒಳಗೆ 8 ತಿಂಗಳ ಕಂದಮ್ಮ! ತಾಯಿಯ ಕೃತ್ಯಕ್ಕೆ ಬೆಚ್ಚಿಬಿದ್ದ ಕೊಡಗು
ಸಮಾಜದ ಐದು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಲಿಖಿತ ರೂಪದಲ್ಲಿ ಸ್ಪಂದಿಸಬೇಕು. ಇಲ್ಲದಿದ್ದರೆ ದೇಹತ್ಯಾಗ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಸರ್ಕಾರದ ಅನೇಕ ಸಚಿವರು ಮಾತನಾಡಿದ್ದು ಬಿಟ್ಟರೆ ಇಲ್ಲಿವರಗೆ ಲಿಖಿತ ಸ್ಪಂದನೆ ಸರ್ಕಾರದಿಂದ ಸಿಕ್ಕಿಲ್ಲವಂತೆ. ಹೀಗಾಗಿ ಮಾತಿನಂತೆ ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡಲು ಜೈನಮುನಿ ಗುಣದರನಂದಿ ಮಹರಾಜ್ ಮುಂದಾಗಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ‘ನವೆಂಬರ್ 19ರಿಂದ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ಹೋರಾಟ ಆರಂಭಿಸುತ್ತಿದ್ದೇವೆ. ಮೊದಲ ಹಂತದಲ್ಲಿ ನಮ್ಮ ಸಮಾಜ ಹೆಚ್ಚಿರುವ ಕ್ಷೇತ್ರಗಳ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಸರ್ಕಾರದ ಮೇಲೆ ಒತ್ತಡ ತಂದು, ಬೇಡಿಕೆಗಳನ್ನು ಈಡೇರಿಸಲು ಶಾಸಕರಿಗೆ ಆಗ್ರಹಿಸುತ್ತೇವೆ. ಆದರೆ ಸರ್ಕಾರ ಸ್ಪಂದಸದಿದ್ದರೆ ಡಿಸೆಂಬರ್ 4ರಿಂದ ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭಿಸುತ್ತೇವೆ. ಲಕ್ಷಾಂತರ ಜೈನ ಸಮುದಾಯದ ಜನರು ಇದರಲ್ಲಿ ಭಾಗಿಯಾಗ್ತಾರೆ. ಚಿಕ್ಕೋಡಿಯಿಂದ ಆರಂಭವಾಗುವ ಪಾದಯಾತ್ರೆ ಮೂರ್ನಾಲ್ಕು ದಿನದಲ್ಲಿ ಬೆಳಗಾವಿ ಸುವರ್ಣಸೌದವನ್ನು ತಲುಪಲಿದೆ. ಸುವರ್ಣಸೌಧದ ಮುಂದೆ ಅನ್ನ, ನೀರು ಬಿಟ್ಟು ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡುತ್ತೇನೆ’ ಅಂತ ಜೈನಮುನಿ ಗುಣದರನಂದಿ ಮಹರಾಜ್ ಹೇಳಿದ್ದಾರೆ.
ರಾಜ್ಯದಲ್ಲಿ ಇದೀಗ ಅನೇಕ ಸಮಾಜಗಳಿಗೆ ಪ್ರತ್ಯೇಕ ಅಭಿವೃದ್ದಿ ನಿಗಮಗಳಿವೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ ಇದೆ. ಇದರಲ್ಲಿಯೇ ರಾಜ್ಯದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿರುವ ವಿವಿಧ ಸಮಾಜಗಳಿವೆ. ಆದರೆ ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಆರಂಭಿಸಬೇಕು ಎನ್ನುವುದು ಜೈನ ಸಮಾಜದ ಅನೇಕ ವರ್ಷಗಳ ಬೇಡಿಕೆಯಾಗಿದೆ. ಸಣ್ಣ ಸಣ್ಣ ಸಮಾಜಗಳ ಹೆಸರಲ್ಲಿ ಪ್ರತ್ಯೇಕ ಅಭಿವೃದ್ದಿ ನಿಗಮಗಳನ್ನು ಆರಂಭಿಸಿರುವ ಸರ್ಕಾರ ಜೈನ ಸಮಾಜಕ್ಕೆ ಮಾತ್ರ ಪ್ರತ್ಯೇಕ ಅಭಿವೃದ್ದಿ ನಿಗಮಗಳನ್ನು ಆರಂಭಿಸಿಲ್ಲ. ಇದು ಜೈನ ಸಮಾಜದವರ ಆಕ್ರೋಶಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಸಿಎಂ ಆದಾಗಿನಿಂದ ಸಮಾಜದ ಮುಖಂಡರು, ಮುನಿಗಳು, ತಮ್ಮ ಸಮಾಜಕ್ಕೂ ಅಭಿವೃದ್ದಿ ನಿಗಮ ಮಾಡಿ ಅಂತ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರದಿಂದ ಸ್ಪಂದನೆ ಸಿಗದೇ ಇದ್ದಿದಕ್ಕೆ, ಇದೀಗ ಜೈನಮುನಿ ದೇಹತ್ಯಾಗದ ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ‘ಸರ್ಕಾರಿ ಶಾಲೆಯಲ್ಲಿ ಜೈನ ಮುನಿಗಳಿಗೆ ವಿಹಾರದ ಸಂದರ್ಭದಲ್ಲಿ ರಾತ್ರಿ ತಂಗಲು ಅವಕಾಶ ನೀಡುವಂತೆ ಅನೇಕ ವರ್ಷಗಳಿಂದ ಮನವಿ ಮಾಡಿದರೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತ್ರ ಸ್ಪಂದಿಸುತ್ತಿಲ್ಲ. ಅವರಿಗೆ ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ. ಇಂತಹ ಸಚಿವರು ನಮಗೆ ಬೇಕಾ’ ಅಂತ ಜೈನಮುನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ಧಾರೂಢರ ಹುಟ್ಟೂರು ಯಾವುದು ಗೊತ್ತಾ? ಇಂದಿಗೂ ಇದೆ ಅವರು ವಾಸವಿದ್ದ ಮನೆ, ಬಾವಿ
ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಲಿಖಿತ ಭರವಸೆ ನೀಡಿದರೆ ಮಾತ್ರ ದೇಹತ್ಯಾದಗ ಹೋರಾಟ ನಿಲ್ಲುತ್ತದೆ. ಇಲ್ಲದಿದ್ದರೆ ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಗುಣದರನಂದಿ ಜೈನಮುನಿ ಹೇಳಿದ್ದಾರೆ. ಹೀಗಾಗಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:07 pm, Fri, 13 November 26