ಸೂಟ್‌ಕೇಸ್ ಒಳಗೆ 8 ತಿಂಗಳ ಕಂದಮ್ಮ! ತಾಯಿಯ ಕೃತ್ಯಕ್ಕೆ ಬೆಚ್ಚಿಬಿದ್ದ ಕೊಡಗು
ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಸೂಟ್‌ಕೇಸ್‌ನಲ್ಲಿ 8 ತಿಂಗಳ ಹಸುಗೂಸನ್ನು ಬಿಟ್ಟು ತಾಯಿ ಪರಾರಿಯಾಗಿದ್ದರು. ಮಗುವಿನ ಅಳು ಕೇಳಿ ಸ್ಥಳೀಯರು, ಮಗುವನ್ನು ರಕ್ಷಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮಗು ಸುರಕ್ಷಿತವಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- ಸೂಟ್‌ಕೇಸ್ ಒಳಗೆ ಹಸುಗೂಸು ಇಟ್ಟು ತಾಯಿ ನಾಪತ್ತೆ
- ಮಗುವಿನ ಅಳು ಶಬ್ಧ ಕೇಳಿ ರಕ್ಷಣೆ ಮಾಡಿದ ಸ್ಥಳೀಯರು
- ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಘಟನೆ
ಕೊಡಗು, ನವೆಂಬರ್, 13: ಎಂಟು ತಿಂಗಳ ಹಸುಗೂಸಿಗೆ ಅಮ್ಮನನ್ನ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಅಷ್ಟು ಪುಟ್ಟ ಮಗುವನ್ನ ಒಂದು ಕ್ಷಣ ಬಿಟ್ಟು ಹೋಗಲೂ ಯಾವುದೇ ತಾಯಿ ಕೂಡ ಹಿಂಜರಿಯುತ್ತಾರೆ, ಅಳಕುತ್ತಾಳೆ. ಆದರೆ ಇಲ್ಲೊಬ್ಬಳು ಮಹಾತಾಯಿ ಎಂಟು ತಿಂಗಳ ಮಗುವನ್ನ ಸೂಟ್‌ಕೇಸ್ ಒಳಗೆ ಹಾಕಿ ಪಾರಾರಿಯಾಗಿದ್ದಾಳೆ. ಸ್ವಲ್ಪ ತಡವಾಗಿದ್ದರೂ ಮಗು ಸಾವನ್ನಪ್ಪುತ್ತಿತ್ತು, ಆದರೆ ಸ್ಥಳೀಯರಿಂದ ರಕ್ಷಣೆ ಮಾಡಲಾಗಿದೆ.
ನಡೆದಿದ್ದೇನು?
ಕೊಡಗು ಜಿಲ್ಲೆಯಲ್ಲಿ ತಾಯಿ ಮಗುವಿನ ಸಂಬಂಧಕ್ಕೆ ಮಸಿ ಬಳಿಯುವಂತಹ ಘಟನೆಯೊಂದು ನಡೆದುಹೋಗಿದೆ. ತಾಯಿಯೊಬ್ಬಳು ತನ್ನ 8 ತಿಂಗಳ ಮಗುವನ್ನ ಸೂಟ್‌ಕೇಸ್‌ನಲ್ಲಿ ಹಾಕಿ, ಮನೆ ಬಿಟ್ಟು ಪರಾರಿ ಆಗಿದ್ದಾಳೆ. ಸ್ಥಳಿಯರ ಸಮಯ ಪ್ರಜ್ಞೆಯಿಂದಾಗಿ ಮಗು ಬದುಕುಳಿದಿದೆ. ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿರೋ ಫೀಲ್ಡ್ ಮಾರ್ಷಲ್ ಕಾರ್ಯ ಬಡಾವಣೆಯಲ್ಲಿ ಘಟನೆ ನಡೆದಿದೆ.
ಮನೆ ಒಳಗಿನಿಂದ ಮಗುವಿನ ಜೋರಾದ ಅಳು
ಈ ಬಡಾವಣೆಯಲ್ಲಿ 2018, 19ರ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನ ನಿರ್ಮಿಸಿ ಕೊಡಲಾಗಿದೆ. ಇಲ್ಲಿಯ 255 ಮನೆ ನಂಬರ್ನಲ್ಲಿ ತಾಯಿ ಮತ್ತು 8 ತಿಂಗಳ ಮಗು ವಾಸವಿದ್ದಾರೆ. ಮಗುವಿನ ತಂದೆ ದೂರದ ಚೆನ್ನೈನಲ್ಲಿ ಕೆಲಸದಲ್ಲಿದ್ದಾರಂತೆ. ನವೆಂಬರ್ 11ರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮನೆ ಒಳಗಿನಿಂದ ಮಗುವಿನ ಜೋರಾದ ಅಳು ಕೇಳಿಸಿದೆ. ಸ್ಥಳೀಯರು ಅಲ್ಲಿ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ತಾಯಿಯ ಫೋನ್ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಹಾಗಾಗಿ ಮಗುವಿನ ಅಜ್ಜಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ!
ಮಡಿಕೇರಿಯಿಂದ ಓಡೋಡಿ ಬಂದ ಅಜ್ಜಿ, ಸ್ಥಳೀಯರ ಜೊತೆ ಸೇರಿ ಮನೆ ಬೀಗ ಒಡೆದು ನೋಡಿದಾಗ ಸೂಟ್‌ಕೇಸ್ ಒಂದರ ಒಳಗೆ ಮಗು ಜೋರಾಗಿ ಅಳುತ್ತಿರುವುದು ಕಂಡಿದೆ. ತಕ್ಷಣವೇ ಮಗುವನ್ನ ರಕ್ಷಣೆ ಮಾಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಮಗುವಿನ ತಾಯಿ ಮಧ್ಯಾಹ್ನದ ಸುಮಾರಿಗೆ ಜಂಬೂರು ಬಡಾವಣೆಯ ಮನೆಯಿಂದ ಹೊರ ಹೋಗಿದ್ದಾರಂತೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ
ಸೂಟ್ಕೇಸ್ನಿಂದ ಹೊರ ತೆಗೆದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ರಕ್ತದೊತ್ತಡ ತೀರಾ ಏರಿಕೆಯಾಗಿತ್ತು. ಭಯದಿಂದ ಕಣ್ಣೀರು ಹಾಕಿ ಜ್ವರ ಬಂದಿತ್ತು. ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ಮಕ್ಕಳ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಮಗು ಸಾಕಷ್ಟು ಸುಧಾರಿಸಿಕೊಂಡಿದೆ. ಆದರೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಇನ್ನೂ ಒಂದು ವಾರ ಬೇಕು ಅನ್ನುತ್ತಿದ್ದಾರೆ ವೈದ್ಯರು.
ಇದನ್ನೂ ಓದಿ: ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಕ್ಲೌಡ್ ನೈನ್ ಆಸ್ಪತ್ರೆ
ಸದ್ಯ ಮಗುವಿನ ತಾಯಿಯನ್ನ ಹುಣಸೂರು ಬಳಿ ಪತ್ತೆಹಚ್ಚಲಾಗಿದೆ. ತಂದೆಯೂ ಚೆನ್ನೈನಿಂದ ಆಗಮಿಸಿದ್ದಾರೆ. ಮಗು ಆಸ್ಪತ್ರೆಯಲ್ಲಿ ಅಜ್ಜಿಯ ಆರೈಕೆಯಲ್ಲಿದೆ. ಯಾವ ಉದ್ದೇಶದಿಂದ ತಾಯಿ ಈ ರೀತಿ ಮಗುವನ್ನ ಸೂಟ್ಕೇಸ್ಗೆ ಹಾಕಿ ಹೋಗಿದ್ದಾರೆ ಎಂಬುದೇ ಇದೀಗ ನಿಗೂಢವಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
